Advertisement

ನವಿಮುಂಬಯಿ, ವಡಾಲದಲ್ಲಿ ಜಾನಪದ ಜಾತ್ರೆ

04:33 PM Nov 21, 2018 | Team Udayavani |

ಮುಂಬಯಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೇಂದ್ರ ಸರಕಾರದ ದಕ್ಷಿಣ ಕೇಂದ್ರ ವಲಯ ಸಾಂಸ್ಕೃತಿಕ  ಕೇಂದ್ರ ನಾಗಪುರ ಇವರ ಸಹಕಾರದೊಂದಿಗೆ ಮೈಸೂರು ಅಸೋಸಿಯೇಷನ್‌, ನವಿ ಮುಂಬಯಿ ಕನ್ನಡ ಸಂಘ, ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆಗಳು ಜಂಟಿ ಆಯೋಜನೆಯಲ್ಲಿ ಜಾನಪದ ಜಾತ್ರೆಯು ನ. 24 ಮತ್ತು ನ. 25 ರಂದು  ನಡೆಯಲಿದೆ.

Advertisement

ನ.  24 ರಂದು  ನವಿ ಮುಂಬಯಿ ಕನ್ನಡ ಸಂಘದಲ್ಲಿ, ನ. 25ರಂದು ವಡಾಲದ  ರಾಷ್ಟ್ರೀಯ ಕನ್ನಡ ಶಾಲೆಯಲ್ಲಿ ಈ ಜಾನಪದಜಾತ್ರೆ ಜರಗಲಿದೆ. ಎರಡೂ ದಿನಗಳಲ್ಲಿ ಅಪರಾಹ್ನ  3 ರಿಂದ ಜಾನಪದ ಜಾತ್ರೆಯ ಮೆರವಣಿಗೆ ಹೊರಟು, ಸಂಜೆ 5 ರಿಂದ ರಾತ್ರಿ  8 ರವರೆಗೆ ವಿವಿಧ ಜಾನಪದ ಕುಣಿತಗಳು ಮತ್ತು ಹಾಡುಗಳ ಪ್ರದರ್ಶನ ನಡೆಯಲಿದೆ.  ಇದರಲ್ಲಿ ಜಾನಪದ ಗಾಯನ, ತತ್ವಪದ, ಸುಗಮ ಸಂಗೀತ, ತೊಗಲು ಬೊಂಬೆ, ಹುಲಿವೇಷ, ಪೂಜಾಕುಣಿತ, ಗಾರುಡಿ ಗೊಂಬೆ, ಕೀಲು ಕುದುರೆ, ಡೊಳ್ಳು ಕುಣಿತ, ಗೊರವರ ಕುಣಿತ, ನಗಾರಿ ವಾದನ ಇನ್ನಿತರ  ಹಲವಾರು ಕುಣಿತಗಳು ಜಾನಪದ ಜಾತ್ರೆಯಲ್ಲಿರಲಿವೆೆ.

ಏನಿದು ಜಾನಪದ ಜಾತ್ರೆ
ಕರ್ನಾಟಕ ಕಲೆಗಳ ಬೀಡಾಗಿದೆ. ಪ್ರಾಚೀನ ಕಾಲದಿಂದಲೂ ಕನ್ನಡಿಗರು, ಹಾಡು, ಕುಣಿತ, ನಾಟಕಗಳಿಗೆ ಹೆಸರಾದವರು. ತಮಿಳಿನ “ಚಿಲಪಡಿಕ್ಕಾರಂ’ ಐದನೆಯ ಶತಮಾನದಲ್ಲಿ ಕೂಡ, “ಕರುನಾಡರ್‌ ಆಡಿದರ್‌’ಎಂದು ಉಲ್ಲೇಖೀಸುತ್ತದೆ. ಜನರು, ತಮ್ಮ ಬೇಸಾಯದಲ್ಲಿ, ಅಕ್ಕಿ-ರಾಗಿ ಕುಟ್ಟುವುದರಲ್ಲಿ ಮಗುವನ್ನು ತೂಗುವುದರಲ್ಲಿಯೇ ಅಲ್ಲದೆ, ತಮ್ಮ ದೇವರ ಮೆರವಣಿಗೆಗಳಲ್ಲಿ, ಕುಣಿದು ಆ ದೇವರುಗಳನ್ನು ಕೊಂಡಾಡುತ್ತಿದ್ದುದು 2000ಕ್ಕೂ ಮಿಕ್ಕಿದ  ವರ್ಷಗಳಿಂದ ನಡೆದು ಬಂದಿದೆ. ವೀರಗಾಸೆ, ಕಳಸ ಕುಣಿತ, ಪೂಜಾ ನೃತ್ಯ, ಪಟಕುಣಿತ, ಹುಲಿ ವೇಷ, ಮುಂತಾದವುಗಳು ಇಂದೂ ಕನ್ನಡ ನಾಡಿನ ಹಳ್ಳಿಗಳಲ್ಲಿ ಮೆರೆಯುತ್ತಿವೆ. ಅಳಿದು ಹೋಗುತ್ತಿದ್ದ ಈ ಕಲೆಗಳನ್ನು ಅನೇಕರು  ಮತ್ತೆ ಎತ್ತಿ ಹಿಡಿದಿದ್ದಾರೆ. ಐ. ಎಂ ವಿಠuಲಮೂರ್ತಿ, ಶ್ರೀನಿವಾಸ ಜಿ. ಕಪ್ಪಣ್ಣ, ನಾಗರಾಜ ಮೂರ್ತಿ ಇವರು ಕರ್ನಾಟಕದುದ್ದಕ್ಕೂ ಜಾನಪದ ಜಾತ್ರೆಗಳನ್ನು ನಡೆಸುತ್ತಿದ್ದಾರೆ. ತಾಳವೇ ಜೀವವಾದ ಈ ಕುಣಿತಗಳ ಹಾಡುಗಳಿಗೆ, ಮತ್ತೆ ಹೊಸ ಮೆರುಗನ್ನು ಕೊಟ್ಟು ಜನಪ್ರಿಯವಾಗಿ ಮಾಡಿದ್ದಾರೆ.

ಹಿಂದೆಯೂ ಮುಂಬಯಿಯಲ್ಲಿ  ನಡೆದಿದೆ 
ಕರ್ನಾಟಕ ಸರ್ಕಾರ ಮತ್ತುಕನ್ನಡ-ಸಂಸ್ಕೃತಿ ಇಲಾಖೆಯ ಪಾತ್ರ, ಈ ಪುನರುಜ್ಜೀವನದಲ್ಲಿ ಅಪಾರವಾಗಿದೆ. 2006 ರಲ್ಲಿ, “ಸುವರ್ಣ ಕರ್ನಾಟಕ’ ಜಾತ್ರೆಯಲ್ಲಿ, ಮುಂಬಯಿಯ 30 ಕನ್ನಡ ಸಂಘಗಳು ಒಡಗೂಡಿ ರಾಷ್ಟ್ರೀಯ ಕನ್ನಡ ಶಾಲೆ ವಡಾಲದಲ್ಲಿ ಬರಮಾಡಿಕೊಂಡು ಅದ್ದೂರಿಯಾಗಿ ಮೆರವಣಿಗೆಯನ್ನು ನಡೆಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು. ಅಂತೆಯೇ 2017ರಲ್ಲಿ  ತರಳಬಾಳು ಮಠದ ಶ್ರೀ ಶಿವಾಚಾರ ಸ್ವಾಮಿಗಳು 200 ಕಲಾವಿದರನ್ನು ಮುಂಬಯಿಗೆ ಕರೆತಂದು ಜಾನಪದ ಜಾತ್ರೆಯನ್ನು ನಡೆಸಿದ್ದರು. ಜಾನಪದ ಜಾತ್ರೆಯಲ್ಲಿ ಭಾಗವಹಿಸುವ ಎಲ್ಲಾ ಕಲಾವಿದರೂ ಕೂಡ ಕರ್ನಾಟಕದ ಹಳ್ಳಿ-ಹಳ್ಳಿಗಳಿಂದ ಬರುತ್ತಿದ್ದಾರೆ. ಇವರ ಕುಣಿತಗಳನ್ನು ನೋಡುವ, ಹಾಡುಗಳನ್ನು ಕೇಳುವ ಅವಕಾಶ ಮುಂಬಯಿಗರಿಗೆ ದೊರೆಯಲಿದ್ದು, ಕನ್ನಡಿಗರು ಪಾಲ್ಗೊಂಡು ಉತ್ಸವದ ಯಶಸ್ಸಿಗೆ ಸಹಕರಿಸುವಂತೆ  ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next