Advertisement

ಜಾನಪದ ಜಗತ್ತಿಗೆ ದೊರೆಯುತ್ತಾ ಮರುಜೀವ?

12:06 PM Jan 08, 2020 | Suhan S |

ಹುಬ್ಬಳ್ಳಿ: ಉತ್ತರದ ಕರ್ನಾಟಕದ ಜಾನಪದ ಸೊಗಡಿಗೆ ಸೂಕ್ತ ವೇದಿಕೆ ಕಲ್ಪಿಸುವ “ಜಾನಪದ ಜಗತ್ತು’ ಯೋಜನೆ ಇದೀಗ ಮುನ್ನೆಲೆಗೆ ಬಂದಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬರುತ್ತಿದ್ದಂತೆ ಈ ಭಾಗದ ಪ್ರಮುಖ ಯೋಜನೆ ನಿರೀಕ್ಷೆ ಮೂಡಿಸಿದೆ.

Advertisement

ಉತ್ತರ ಕರ್ನಾಟಕದ ಜಾನಪದ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ 2013-14ರಲ್ಲಿ ಹುಬ್ಬಳ್ಳಿಯಲ್ಲಿ ಜಾನಪದ ಜಗತ್ತು ರೂಪುಗೊಂಡಿತು. ಆದರೆ ಸರಕಾರ ಬದಲಾಗುತ್ತಿದ್ದಂತೆ ಈ ಯೋಜನೆ ಸಂಪೂರ್ಣ ಮೂಲೆಗುಂಪಾಯಿತು. ಯೋಜನೆಗೆ ಅನುದಾನ ನೀಡುವಂತೆ ಸಾಕಷ್ಟು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಶೆಟ್ಟರ ಮೇಲಿದೆ ನಿರೀಕ್ಷೆ: ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಜಗದೀಶ ಶೆಟ್ಟರ ಅವರು ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾನಪದ ಜಗತ್ತು ನಿರ್ಮಾಣಕ್ಕೆ ಸಾಕಷ್ಟು ಕಾಳಜಿ ತೋರಿ ನೃಪತುಂಗ ಬೆಟ್ಟದ ಬಳಿ 5.13 ಎಕರೆ ಭೂಮಿ ಗುರುತಿಸಿದ್ದರು. ಅಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ಗೋವಿಂದ ಕಾರಜೋಳ 75 ಲಕ್ಷ ರೂ. ಬಿಡುಗಡೆ ಮಾಡಿ ಕಾಂಪೌಂಡ್‌ ನಿರ್ಮಾಣವಾಗಿತ್ತು. ಆಡಳಿತ ಕಚೇರಿ ಅರ್ಧ ಮೇಲೆ ಏಳುತ್ತಿದ್ದಂತೆ ಅಲ್ಲಿಗೆ ಸ್ಥಗಿತಗೊಂಡಿತು. ಆದರೆ ಇದೀಗ ಜಗದೀಶ ಶೆಟ್ಟರ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಹಿನ್ನೆಲೆಯಲ್ಲಿ ಜಾನಪದ ಕಲಾವಿದರಲ್ಲಿ ಜಾನಪದ ಜಗತ್ತು ಯೋಜನೆ ಕುರಿತು ಭರವಸೆಗಳು ಮೂಡಿದ್ದು, ಶೆಟ್ಟರ ಅವರ ಮೇಲೆ ಸಾಕಷ್ಟು ನಿರೀಕ್ಷೆ ಉಂಟಾಗಿದೆ.

ಅನುದಾನಕ್ಕಾಗಿ ಸಚಿವರಿಗೆ ಪತ್ರ: ನನೆಗುದಿಗೆ ಬಿದ್ದಿರುವ ಜಾನಪದ ಜಗತ್ತು ಪುನರಾರಂಭಕ್ಕೆ ಜಾನಪದ ಕಲಾವಿದರು ಸಚಿವ ಜಗದೀಶ ಶೆಟ್ಟರ ಅವರ ಮೇಲೆ ಒತ್ತಡ ಹೇರುತ್ತಿದ್ದು, ಈ ಕುರಿತು ಕನ್ನಡ-ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಅವರಿಗೆ ಪತ್ರ ಬರೆದು, ಯೋಜನೆ ಪೂರ್ಣಗೊಳಿಸಲು 5 ಕೋಟಿ ರೂ. ಅನುದಾನ ಮಂಜೂರು ಮಾಡಬೇಕು. ಜಾನಪದ ಜಗತ್ತು ನಿರ್ಮಾಣ ಕುರಿತು ಟ್ರಸ್ಟ್‌ ರಚಿಸುವ ಕುರಿತು ಕೋರಿದ್ದಾರೆ. ಈ ಪತ್ರಕ್ಕೆ ಸ್ಪಂದಿಸಿರುವ ಸಚಿವ ಸಿ.ಟಿ. ರವಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಕಳೆದ ಆರೇಳು ವರ್ಷಗಳಿಂದ ತಟಸ್ಥವಾಗಿದ್ದ ಯೋಜನೆಗೆ ಮರುಜೀವ ಬಂದಂತಾಗಿದೆ.

ಪತ್ರ ವ್ಯವಹಕಾರಕ್ಕೆ ಸೀಮಿತವಾಗದಿರಲಿ: ರಾಮನಗರದಲ್ಲಿ ಜಾನಪದ ಲೋಕ ದಕ್ಷಿಣ ಕರ್ನಾಟಕ ಭಾಗದ ಜಾನಪದ ಕಲೆಗಳ ಜೀವನಾಡಿಯಾಗಿದೆ. ಇದೇ ಮಾದರಿಯಲ್ಲಿ ಹುಬ್ಬಳ್ಳಿಯಲ್ಲಿ ಜಾನಪದ ಜಗತ್ತಿನಿಂದ ಈ ಭಾಗದ ಕಲೆಗಳಿಗೆ ಸೂಕ್ತ ವೇದಿಕೆ ದೊರೆಯಲಿದೆ. ಅವನತಿ ಅಂಚಿನಲ್ಲಿರುವ ಕಲೆಗಳ ಪ್ರದರ್ಶನ, ತರಬೇತಿಗೆ, ವಾರದ ಕೊನೆಯಲ್ಲಿ ಮಹಾನಗರದ ಜನರಿಗೆ ಜಾನಪದ ರಸದೌತಣಕ್ಕೆ ಸೂಕ್ತ ವೇದಿಕೆಯಾಗಲಿದೆ. ಜಾನಪದ ಕಲೆಗಳ ವಸ್ತು ಪ್ರದರ್ಶನ ಸೇರಿದಂತೆ ಜಾನಪದ ಕಲೆಗಳಿಗೆ ಪೂರಕವಾದ ಚಟುವಟಿಕೆಗಳು ನಡೆಯುವುದರಿಂದ ಜನಮಾನಸದಿಂದ ದೂರವಾಗುತ್ತಿರುವ ಅಪರೂಪದ ಕಲೆಗಳಿಗೂ ಮರುಜೀವ ದೊರೆಯಲಿದೆ.ಪುನರಾರಂಭದ ಪ್ರಯತ್ನಗಳು ಕೇವಲ ಪತ್ರ ವ್ಯವಹಾರಕ್ಕೆ ಸೀಮಿತವಾಗದೆ ಕಾರ್ಯಗತವಾಗುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಲಿ ಎಂಬುವುದು ಈ ಭಾಗದ ಕಲಾವಿದರ ಒತ್ತಾಯವಾಗಿದೆ.

Advertisement

ಅಕ್ರಮ ಚಟುವಟಿಕೆ ತಾಣ :  ಉತ್ತರ ಕರ್ನಾಟಕದ ಜಾನಪದ ಸೊಗಡನ್ನು ಪಸರಿಸಬೇಕಾಗಿದ್ದ ಸ್ಥಳ ಅಕ್ರಮ ಚಟುವಟಿಕೆಗಳತಾಣವಾಗಿದೆ. 5.13 ಎಕರೆ ಜಾಗದ ಸುತ್ತಲೂ ಕಾಂಪೌಂಡ್‌ ನಿರ್ಮಿಸಿರುವುದರಿಂದ ಅಕ್ರಮ ಚಟುವಟಿಕೆಗಳಿಗೆ ಹೇಳಿ ಮಾಡಿಸಿದಂತಾಗಿದೆ. ಸುತ್ತಲಿನ ಜನರು ಕಸ ಸುರಿಯುತ್ತಿದ್ದಾರೆ. ಅರ್ಧಂಬರ್ಧ ನಿರ್ಮಾಣವಾಗಿರುವ ಆಡಳಿತ ಕಚೇರಿ ಕಟ್ಟಡ ಕುಡುಕರ ಪಾಲಿಗೆ ವ್ಯವಸ್ಥಿತ ಜಾಗವಾಗಿದೆ. ಇದೇ ಆವರಣದಲ್ಲಿ ನಿರ್ಮಾಣವಾಗಿದ್ದ ದೊಡ್ಡ ಶೆಡ್‌ವೊಂದರ ಸಿಮೆಂಟ್‌ ಬಾಗಿಲು ಹೊರತುಪಡಿಸಿ ಎಲ್ಲವೂ ಕಂಡವರ ಪಾಲಾಗಿವೆ. ಈ ಸ್ಥಳವನ್ನು ಮೂಲ ಉದ್ದೇಶಕ್ಕೆ ಬಳಸಿ ಇಲ್ಲಿನವರ ನೆಮ್ಮದಿ ಕಾಪಾಡಬೇಕೆಂಬುವುದು ಸ್ಥಳೀಯರ ಒತ್ತಾಯ.

ಅಂದುಕೊಂಡಂತೆ ಜಾನಪದ ಜಗತ್ತು ಪೂರ್ಣಗೊಂಡಿದ್ದರೆ ಇದು ಜಾನಪದ ಕಲೆಗಳಿಗೆ ಸೂಕ್ತ ವೇದಿಕೆಯಾಗಿ ಕಾರ್ಯಾರಂಭ ಮಾಡುತ್ತಿತ್ತು. ಆದರೆ ಹಲವು ಕಾರಣಗಳಿಂದ ಇದು ನನೆಗುದಿಗೆ ಬಿದ್ದು ಮೂಲ ಉದ್ದೇಶ ಈಡೇರಲಿಲ್ಲ. ಇದು ನಿರ್ಮಾಣವಾಗುವುದರಿಂದ ಕಲಾವಿದರಿಗೆ ಜೀವ ತುಂಬಿ ಅವರ ಪ್ರತಿಭೆಗೆ ವೇದಿಕೆಯಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ ಅವರು ಇದೀಗ ಮನಸ್ಸು ಮಾಡಿ ಇದನ್ನು ಪೂರ್ಣಗೊಳಿಸಿ ಈ ಭಾಗದ ಜಾನಪದ ಕಲಾವಿದರ ತವರು ಮನೆಯಾಗಿಸಬೇಕು.- ಡಾ| ರಾಮು ಮೂಲಗಿ, ಜಾನಪದ ಕಲಾವಿದ

 

-ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next