ಹೊಸಬರ “ಎಲ್ಲೋ ಜೋಗಪ್ಪ ನಿನ್ನರಮನೆ’ ಚಿತ್ರದ ಮತ್ತೂಂದು ಹಾಡು ಬಿಡುಗಡೆಯಾಗಿದೆ. ಜಾಣಮರಿ ಎಂಬ ಹಾಡನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ. ಪ್ರಮೋದ್ ಮರವಂತೆ ಕ್ಯಾಚಿ ಮ್ಯಾಚಿ ಪದಗಳನ್ನು ಪೊಣಿಸಿ ಸಾಹಿತ್ಯ ಬರೆದಿದ್ದು, ಖ್ಯಾತ ಗಾಯಕಿ ರಕ್ಷಿತಾ ಸುರೇಶ್ ಹಾಗೂ ವಿಶಾಕ್ ನಾಗಲಾಪುರ ಧ್ವನಿಯಾಗಿದ್ದಾರೆ. ಜಾಣಮರಿ ಪ್ರೇಮಗೀತೆಗೆ ಶಿಯೋಮ್ ಟ್ಯೂನ್ ಹಾಕಿದ್ದಾರೆ.
ಈ ಹಿಂದೆ “ಹೌದ ಹುಲಿಯಾ..’ ಎಂಬ ಮಾಸ್ ಸಾಂಗ್ ರಿಲೀಸ್ ಆಗಿತ್ತು. ಹಾಡಿನಲ್ಲಿ ಅಂಜನ್ ನಾಗೇಂದ್ರ ಹಾಗೂ ವೆನ್ಯಾ ರೈ ಜೋಡಿಯಾಗಿ ಮಿಂಚಿದ್ದಾರೆ.
ಕನ್ನಡದ ಹುಡುಗನಾಗಿ ಅಂಜನ್ ಕಾಣಿಸಿಕೊಂಡ್ರೆ, ವೆನ್ಯಾ ರೈ ಮರಾಠಿ ಹುಡ್ಗಿಯಾಗಿ ಅಭಿನಯಿಸಿದ್ದಾರೆ. ಮಹಾರಾಷ್ಟ್ರದ ಪಂಢರಪುರದಲ್ಲಿ ಇಡೀ ಹಾಡನ್ನು ಚಿತ್ರೀಕರಣ ಮಾಡಿರುವುದು ವಿಶೇಷ. ನಾಯಕ ಹಾಗೂ ನಾಯಕಿ ನಡುವಿನ ಸುಮಧುರ ಪ್ರೇಮಗೀತೆ ಇದಾಗಿದೆ.
ಹಯವದನ ಈ ಸಿನಿಮಾದ ನಿರ್ದೇಶಕರು. ಯಾರು ಸಲೀಸಾಗಿ ಚಿತ್ರೀಕರಣ ಮಾಡಲಾಗದ ಜಾಗದಲ್ಲಿ ಸಿನಿಮಾವನ್ನು ಚಿತ್ರೀಕರಿಸಬೇಕೆಂಬ ಕನಸು ಇಟ್ಟುಕೊಂಡಿದ್ದರಂತೆ. ಅದರಂತೆ ಮಹಾರಾಷ್ಟ್ರ, ಉತ್ತರಖಂಡ, ದೆಹಲಿ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ಹಿಮಾಲಯದ ಕೊರೆಯುವ ಚಳಿಯಲ್ಲಿಯೂ “ಎಲ್ಲೋ ಜೋಗಪ್ಪ ನಿನ್ನರಮನೆ’ವನ್ನು ಶೂಟಿಂಗ್ ನಡೆಸಿದ್ದಾರೆ.
ಈ ಚಿತ್ರ ಒಂದು ಜರ್ನಿಯ ಕಥೆ. ತಂದೆ-ಮಗನ ನಡುವಿನ ಭಾವನಾತ್ಮಕ ಸಂಬಂಧ ಈ ಸಿನಿಮಾ ಹೈಲೈಟ್ಸ್. ತಂದೆಯ ಮಾತಿಗೆ ಮುನಿಸಿಕೊಂಡು ಮನೆ ಬಿಟ್ಟು ಹೋಗುವ ಹುಡುಗನ ಕಥೆ ಸಿನಿಮಾದಲ್ಲಿದೆ. ಲವ್, ಸೆಂಟಿಮೆಂಟ್, ಕಾಮಿಡಿ ಎಲ್ಲವನ್ನೂ ಒಳಗೊಂಡಿರುವ ಈ ಚಿತ್ರದಲ್ಲಿ ಅಂಜನ್ ನಾಗೇಂದ್ರಗೆ ಜೋಡಿಯಾಗಿ ಯುವ ನಟಿ ವೆನ್ಯ ರೈ ನಟಿಸಿದ್ದು, ಸಂಜನಾ ದಾಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಉಳಿದಂತೆ ಶರತ್ ಲೋಹಿತಾಶ್ವ, ಸ್ವಾತಿ, ದಾನಪ್ಪ, ದಿನೇಶ್ ಮಂಗಳೂರು, ಬಿರಾದಾರ್ ತಾರಾಬಳಗದಲ್ಲಿದ್ದಾರೆ. ಪವನ್ ಸಿಮಿಕೇರಿ ಮತ್ತು ಸಿಂಧು ಹಯವದನ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ