ಆಳಂದ: ಜಿಡಗಾ-ಮುಗಳಖೋಡ ಮಠ ನೂರಾರು ಶಾಖೆಗಳನ್ನು ಹೊಂದಿ ಭಕ್ತರ ಬಾಳಿಗೆ ಬೆಳಕಾಗಿದ್ದು, ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಜನ ಕಲ್ಯಾಣ ಕಾರ್ಯ ಮಾಡುತ್ತಿದೆ ಎಂದು ಸುತ್ತೂರು ವೀರ ಸಿಂಹಾಸನ ಸಂಸ್ಥಾನ ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ ನುಡಿದರು.
ತಾಲೂಕಿನ ಜಿಡಗಾ ನವಕಲ್ಯಾಣ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ “ಗುರುಗಳ ಸಮಾಗಮ’ ಕಾರ್ಯಕ್ರಮದಲ್ಲಿ ಗೌರವ ನಮನ ಸ್ವೀಕರಿಸಿ, ಶ್ರೀ ಮಠದ ಗೋ ಪೂಜೆ ನೆರವೇರಿಸಿ, ಶಿವಯೋಗಿ ದೇಶಿ ಉತ್ಪನ್ನ ಮಾರಾಟ ಕೇಂದ್ರ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಸುತ್ತೂರ ಮಠದಿಂದ ಶ್ರೀಮಂತ ಮಕ್ಕಳಿಗೆ ಸಂಸ್ಕಾರ, ಶಿಕ್ಷಣ ನೀಡಲು ಕಟ್ಟಿದ್ದ ಕಟ್ಟಡವನ್ನು ಬಡ ಮಕ್ಕಳಿಗೆ ಬಳಸಲಾಗುತ್ತಿದೆ. ಇಲ್ಲಿ ಈಶಾನ್ಯ ವಲಯ ರಾಜ್ಯಗಳಾದ ಮೇಘಾಲಯ, ಮಣಿಪುರಂ, ಆಸ್ಸಾಂ ಸೇರಿದಂತೆ ಹಲವು ರಾಜ್ಯಗಳಿಂದ ಬಂದ ಮಕ್ಕಳು ಕನ್ನಡ ಕಲಿತಿದ್ದಾರೆ ಎಂದು ಹೇಳಿದರು.
ಜಿಡಗಾ ಮಠದ ಪೀಠಾಧಿಪತಿ ಷಡಕ್ಷರಿ ಶಿವಯೋಗಿ ಡಾ| ಮುರುಘರಾಜೇಂದ್ರ ಮಹಾ ಸ್ವಾಮೀಜಿ ಮಾತನಾಡಿ, ಮೈಸೂರು ಭಾಗದಲ್ಲಿ ಸುತ್ತೂರು ಶ್ರೀಗಳ ಶೈಕ್ಷಣಿಕ ಕ್ರಾಂತಿ, ಅನ್ನದಾನ, ವಸತಿ ಕಲ್ಪಿಸಿರುವ ಕಾರ್ಯ ಮೆಚ್ಚುವಂತದ್ದು. ಸರ್ಕಾರ ಮಾಡುವ ಕೆಲಸವನ್ನು ಶ್ರೀಗಳು ಮಾಡಿದ್ದಾರೆ. ತಮ್ಮ ಗುರು ಸಿದ್ಧರಾಮ ಶಿವಯೋಗಿಗಳ ಪ್ರೀತಿಯನ್ನು ಅಗಲಿದ ಮೇಲೆ ಸುತ್ತೂರ ಶ್ರೀಗಳಿಂದ ಆ ಪ್ರೀತಿ ಮತ್ತೆ ದೊರಕಿದೆ ಎಂದರು.
ಅನಾಥ ಮತ್ತು ಸಾಕಲು ಆಗದೇ ಇರುವ ಗೋವುಗಳನ್ನು ಗೋಶಾಲೆಗೆ ತಂದು ಬಿಟ್ಟರೆ ರಕ್ಷಣೆ ಮಾಡಲಾಗುವುದು. ಅಲ್ಲದೇ ಸುತ್ತೂರು ಮಾದರಿಯಲ್ಲೆ ಜಿಡಗಾದಲ್ಲಿ ಶೈಕ್ಷಣಿಕ ಕ್ರಾಂತಿ ಕೈಗೊಳ್ಳಲು ಮುಂದಾಗಿದ್ದು, ಇದಕ್ಕಾಗಿ 50 ಎಕರೆ ಪ್ರದೇಶ ಮೀಸಲಿಡಲಾಗಿದೆ ಎಂದು ತಿಳಿಸಿದರು.
ಸಮಾರಂಭಕ್ಕೂ ಮುನ್ನ ಕೇಂದ್ರ ಸಚಿವ ಭಗವಂತ ಖೂಬಾ, ಮಾಜಿ ಸಚಿವ ಈಶ್ವರ ಖಂಡ್ರೆ ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತಾದಿಗಳನ್ನು ಸುತ್ತೂರು ಶ್ರೀಗಳು ಆಶೀರ್ವದಿಸಿದರು.
ಜಿಡಗಾದಲ್ಲಿ ಆರಂಭಿಸಿದ ಲಿಂ| ಶಿವಯೋಗಿ ಸಿದ್ಧರಾಮೇಶ್ವರ ಕರ್ತೃ ಗದ್ದುಗೆ ಮತ್ತು ಗೋಪುರ ಕಾರ್ಯ ಸಾಗಿದ್ದು, ಇದರ ಲೋಕಾರ್ಪಣೆ ವೇಳೆ 2009 ಗೋ ಶಾಲೆ, ಸಾವಿರ ಬಡ ಮಕ್ಕಳಿಗೆ ವಸತಿ ಸಹಿತ ಉಚಿತ ಶಿಕ್ಷಣ ನೀಡುವ ಕಾರ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಸುತ್ತೂರ ಶ್ರೀಗಳು ಚಾಲನೆ ನೀಡಲಿದ್ದಾರೆ.
-ಶ್ರೀ ಷಡಕ್ಷರಿ ಶಿವಯೋಗಿ ಡಾ| ಮುರುಘರಾಜೇಂದ್ರ ಸ್ವಾಮೀಜಿ, ಜಿಡಗಾ ಮಠ