Advertisement

ಜನಧನ ಯೋಜನೆ ಖಾತೆಗೆ ಬಂತು 30 ಸಾವಿರ ರೂ. ಸಹಾಯಧನ

12:27 PM Feb 21, 2017 | Team Udayavani |

ಸುಳ್ಯ: ಜನಧನ ಖಾತೆದಾರರಾಗಿ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ಇತ್ತೀಚೆಗೆ ನಿಧನ ಹೊಂದಿದ್ದು, ಜನಧನ ಖಾತೆಯಲ್ಲಿ ವ್ಯವಹಾರ ನಡೆಸಿದ್ದರಿಂದ ಆ ಕುಟುಂಬಕ್ಕೆ 30 ಸಾವಿರ ರೂ. ಸಹಾಯಧನ ಲಭಿಸಿದೆ.

Advertisement

ಪ್ರಧಾನಿ ಮೋದಿ ಅವರು ಜಾರಿಗೆ ತಂದ ಜನಧನ ಯೋಜನೆಯಂತೆ ಸುಳ್ಯದ ಹೊಸಗದ್ದೆ ನಿವಾಸಿ, ಕೂಲಿಕಾರ್ಮಿಕ ಚಂದ್ರಶೇಖರ್‌ ಸುಳ್ಯದ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್‌ನಲ್ಲಿ ಜನಧನ ಖಾತೆ ಹೊಂದಿದ್ದರು. ಅದರ ಎಟಿಎಂ ಕಾರ್ಡ್‌ ಬಂದ ಬಳಿಕ ಒಂದು ಬಾರಿ ಮಾತ್ರ ಅದರಲ್ಲಿ ವ್ಯವಹಾರ ನಡೆಸಿದ್ದರು.

ಇತ್ತೀಚೆಗೆ ಚಂದ್ರಶೇಖರ್‌ ಅವರು ಅಸೌಖ್ಯದಿಂದ ನಿಧನ ಹೊಂದಿದಾಗ ಅವರ ಮಗ ಕರ್ನಾಟಕ ಗ್ರಾಮೀಣ ಬ್ಯಾಂಕನ್ನು ಸಂಪರ್ಕಿಸಿ ಜನಧನ ಯೋಜನೆಯಡಿ ತನ್ನ ತಂದೆ ಖಾತೆ ಹೊಂದಿದ್ದು, ಸಹಾಯಧನದ ಕುರಿತಂತೆ ಮಾಹಿತಿ ಕೋರಿದರು.

ಬ್ಯಾಂಕ್‌ನ ಮ್ಯಾನೇಜರ್‌ ಅನಿರುದ್ಧ ಅವರು ಮಂಗಳೂರಿನ ಕಚೇರಿ ಸಂಪರ್ಕಿಸಿ ವಿಚಾರಿಸಿದಾಗ ಆಕಸ್ಮಿಕ ನಿಧನ ಹೊಂದಿದರೆ 30 ಸಾವಿರ ರೂ. ಸಹಾಯಧನ ಸಿಗುವ ಮಾಹಿತಿ ದೊರೆಯಿತು. ಅದರಂತೆ ಮೃತರ ಪತ್ನಿ ಕಮಲಾ ಅವರ ಹೆಸರಿಗೆ 30 ಸಾವಿರ ರೂ. ಚೆಕ್‌ ಬಂದಿದೆ. ಅದನ್ನು ನ.ಪಂ. ಮಾಜಿ ಅಧ್ಯಕ್ಷ ಪ್ರಕಾಶ್‌ ಹೆಗ್ಡೆ ನೇತೃತ್ವದಲ್ಲಿ ಬ್ಯಾಂಕ್‌ ಮ್ಯಾನೇಜರ್‌ ಅನಿರುದ್ಧ ಮೃತರ ಮನೆಗೆ ತೆರಳಿ ಪತ್ನಿ ಮತ್ತು ಮಕ್ಕಳ ಕೈಗೆ ಹಸ್ತಾಂತರಿಸಿದರು.

2 ಲಕ್ಷ ರೂ. ಹಸ್ತಾಂತರ
ಬೆಳ್ಳಾರೆಯ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ಖಾತೆದಾರರ ವಾರಸುದಾರರಿಗೆ ಎಲ್‌ಐಸಿ ಸಹಧಿಯೋಧಿಗಧಿದ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಮೂಲಕ 2 ಲಕ್ಷ ರೂ.ಗಳ ಚೆಕ್‌ ಬಂದಿದ್ದು, ಅದನ್ನು ಸೋಮವಾರ ಹಸ್ತಾಂತರಿಸಲಾಯಿತು.

Advertisement

ಜನಧನ ಖಾತೆ ತೆರೆದಿದ್ದ ಕೃಷಿಕ ಪದ್ಮಯ್ಯಗೌಡ ಅವರು ಬ್ಯಾಂಕ್‌ನವರ ಸೂಚನೆಯಂತೆ ಜೀವನ ಜ್ಯೋತಿ ವಿಮಾ ಸೌಲಭ್ಯವನ್ನೂ ಪಡೆದು ಅದರ 330 ರೂ. ಪ್ರೀಮಿಯಂ ಪಾವತಿಸಿದ್ದರು. ಇತ್ತೀಚೆಗೆ ಅವರು ಸಾವಿಗೀಡಾಗಿದ್ದರು. ಈ ಕುರಿತಂತೆ ಮಾಹಿತಿಯನ್ನು ಮನೆಯವರು ಬ್ಯಾಂಕ್‌ನವರಿಗೆ ನೀಡಿ ದಾಖಲೆಗಳನ್ನು ಸಲ್ಲಿಸಿದ್ದರಿಂದ ಅವರಿಗೆ 2 ಲಕ್ಷ ರೂ.ಗಳ ಪರಿಹಾರ ಲಭಿಸಿದೆ. ಪದ್ಮಯ್ಯಗೌಡ ಅವರ ಪತ್ನಿ ಶಿವಮ್ಮ ಅವರಿಗೆ ಸೋಮವಾರ ಸಂಸದ ನಳಿನ್‌ 
ಕುಮಾರ್‌  ಅವರು ಚೆಕ್‌ ವಿತರಿಸಿದರು. ಈ ಸಂದರ್ಭ ಬ್ಯಾಂಕ್‌ನ ರೀಜನಲ್‌ ಮ್ಯಾನೇಜರ್‌ ಎಸ್‌.ಜಿ. ಗಚ್ಚಿನಮಠ,
ಮ್ಯಾನೇಜರ್‌ ರೋಶನ್‌ ಕುಮಾರ್‌, ಜಿ.ಪಂ.ಸದಸ್ಯ ಎಸ್‌.ಎನ್‌.ಮನ್ಮಥ, ಗ್ರಾ.ಪಂ.ಸದಸ್ಯರಾದ ಉಮೇಶ್‌ ಕೆ.ಎಂ.ಬಿ, ಚನಿಯ ಕುಂಡಡ್ಕ, ಸ್ವಾತಿ ಕುಂಡಡ್ಕ, ಬಿಜೆಪಿ ತಾಲೂಕು ಯುವ ಮೋರ್ಚಾದ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ ಮೊದಲಾದವರು ಉಪಸ್ಥಿತರಿದ್ದರು.

ಪ್ರೀಮಿಯಂ ಇಲ್ಲ
ಜನಧನ ಖಾತೆ ಮಾಡಿದ ಕೆಲವೇ ದಿನದಲ್ಲಿ ಎಟಿಎಂ ಕಾರ್ಡ್‌ ಬರುತ್ತದೆ. ಕನಿಷ್ಠ 6 ತಿಂಗಳು ವ್ಯವಹಾರ ನಡೆಸಿದರೆ 5 ಸಾವಿರ ರೂ. ಓವರ್‌ಡ್ರಾಫ್ಟ್ ಬರುತ್ತದೆ. ಅದರಿಂದ ವಿತ್‌ಡ್ರಾ ಮಾಡಿದ ಹಣಕ್ಕೆ ಶೇ. 11 ಬಡ್ಡಿ ವಿಧಿಸಲಾಗುತ್ತದೆ. ಅಪಘಾತ ಸಂದರ್ಭ ಮೃತಪಟ್ಟರೆ ಜನಧನ ಖಾತೆ ಇದ್ದರೆ 1 ಲಕ್ಷ 30 ಸಾವಿರ ರೂ. ಹಣ ಸಿಗುತ್ತದೆ. ಆಕಸ್ಮಿಕವಾಗಿ ನಿಧನ ಹೊಂದಿದರೆ ಆ ಕುಟುಂಬಕ್ಕೆ 30 ಸಾವಿರ ರೂ. ಸಹಾಯ ದೊರೆಯುತ್ತದೆ. ಇದಕ್ಕೆ ಯಾವುದೇ ರೀತಿಯ ಪ್ರೀಮಿಯಂ ಕಡಿತ ಇರುವುದಿಲ್ಲ ಎಂದು ಬ್ಯಾಂಕ್‌ ಮ್ಯಾನೇಜರ್‌ ಅನಿರುದ್ಧ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next