“ಜನ ಮೆಚ್ಚಿಕೊಂಡಿದ್ದಾರೆ. ಅದು ನಮ್ಮ ಶ್ರಮಕ್ಕೆ ಸಿಕ್ಕ ಯಶಸ್ಸು. ಆದರೆ, ಹಾಕಿದ ಬಂಡವಾಳ ಮಾತ್ರ ವಾಪಾಸ್ ಬಂದಿಲ್ಲ…’ ನಿರ್ಮಾಪಕ ಪದ್ಮನಾಭ್ ಇರುವ ವಿಷಯವನ್ನು ನೇರವಾಗಿಯೇ ಹೇಳಿಕೊಂಡರು. ಅವರು “ಕಾಲೇಜ್ ಕುಮಾರ’ ಚಿತ್ರದ ಯಶಸ್ಸು ಕುರಿತು ಮಾತನಾಡಲು ಮಾಧ್ಯಮದವರನ್ನು ಆಹ್ವಾನಿಸಿದ್ದರು. ಆ ವೇಳೆ ತಮ್ಮ ಚಿತ್ರದ ಬಗ್ಗೆ ಹೇಳಿದ್ದಿಷ್ಟು. “ಎಂ.ಆರ್.ಪಿಕ್ಚರ್ ಬ್ಯಾನರ್ ಮೂಲಕ ಸಮಾಜಕ್ಕೆ ಒಳ್ಳೆಯ ಚಿತ್ರ ಕೊಡಬೇಕು ಎಂಬ ಉದ್ದೇಶದಿಂದ ಸಂದೇಶವುಳ್ಳ ಚಿತ್ರ ಮಾಡಿದ್ದೆ.
ಜನರು ಚಿತ್ರವನ್ನು ಮೆಚ್ಚಿಕೊಂಡರು. ಅದು ನಮ್ಮೆಲ್ಲರ ಶ್ರಮಕ್ಕೆ ಸಿಕ್ಕ ಯಶಸ್ಸು. ಆದರೆ, ಜನರು ಒಪ್ಪಿಕೊಂಡರೂ ಹಾಕಿದ ಹಣ ನನಗೆ ಬಂದಿಲ್ಲ. ಹಾಕಿದ ಹಣ ಬಂದರಷ್ಟೇ ಯಶಸ್ಸು ಅಂತ ನಾನು ಹೇಳುವುದಿಲ್ಲ. ಜನರು ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ. ಅದು ನಮ್ಮ ಚಿತ್ರದ ನಿಜವಾದ ಗೆಲುವು. ಇಷ್ಟಕ್ಕೆಲ್ಲ ಕಾರಣ, ಒಳ್ಳೆಯ ಕಥೆ ಮತ್ತು ಚಿತ್ರತಂಡ. ಪ್ರತಿಯೊಬ್ಬರ ಶ್ರಮದಿಂದ ಚಿತ್ರ ಚೆನ್ನಾಗಿ ಬಂದಿತ್ತು. ಜನರು ಒಳ್ಳೆಯ ಸಂದೇಶದ ಚಿತ್ರ ಅಂತ ಹೇಳಿಕೊಂಡು ಒಳ್ಳೆಯ ಮಾರ್ಕ್ಸ್ ಕೊಟ್ಟರು. ಚಿತ್ರ ಮಾಡಿದ್ದಕ್ಕೂ ನನಗೆ ಸಾರ್ಥಕವೆನಿಸಿದೆ.
ಸಾಕಷ್ಟು ಹಣ ಖರ್ಚು ಮಾಡಿ ಸಿನಿಮಾ ಮಾಡಿದ್ದೆ. ಆದರೆ, ಹಾಕಿದ ಹಣ ಸಿಕ್ಕಿಲ್ಲ. ನನಗೆ ತೊಂದರೆಯೂ ಇಲ್ಲ. ಒಳ್ಳೆಯ ಚಿತ್ರ ಮಾಡಿದ ತೃಪ್ತಿ ನನಗಿದೆ. ಸಿನಿಮಾ ಮಾಡೋಕೆ ನಿರ್ಧರಿಸಿದಾಗ, ಹುತ್ತಕ್ಕೆ ಕೈ ಹಾಕುತ್ತಿದ್ದೇನೆ ಅಂತ ಗೊತ್ತಿತ್ತು. ಗೊತ್ತಿದ್ದರೂ ಹುತ್ತಕ್ಕೆ ಕೈ ಹಾಕಿ ಕಚ್ಚಿಸಿಕೊಂಡಿದ್ದೇನೆ. ಹಾಗಂತ ನಾನು ಸಿನಿಮಾ ಬಿಡುವುದಿಲ್ಲ. ವರ್ಷಕ್ಕೆ ಒಂದು ಒಳ್ಳೆಯ ಚಿತ್ರವನ್ನು ಕೊಡುತ್ತೇನೆ. ಹಣಕ್ಕಿಂತ ನನಗೆ ಜನರ ಮನಸ್ಸನ್ನು ಗೆಲ್ಲುವುದು ಮುಖ್ಯ’ ಅಂದರು ಪದ್ಮನಾಭ್. ನಟಿ ಶ್ರುತಿ ಅವರಿಗೆ “ಕಾಲೇಜ್ ಕುಮಾರ’ನ ಯಶಸ್ಸು ಕಂಡು ಖುಷಿಯಾಗಿದೆಯಂತೆ.
“ಇಪ್ಪತ್ತು ವರ್ಷಗಳ ಹಿಂದಿನ ವಾತಾವರಣ ಈಗಿಲ್ಲ. ಆಗ ನಿರ್ಮಾಪಕರಿಗೆ ಹೆಚ್ಚು ಸಮಸ್ಯೆ ಇರಲಿಲ್ಲ. ಈಗ ವರ್ಷಕ್ಕೆ 120 ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗುತ್ತವೆ. ಒಳ್ಳೆಯ ಸಿನಿಮಾ ಆಗಬೇಕಾದರೆ, ಒಳ್ಳೆಯ ಕಥೆ ಬೇಕು. ಒಳ್ಳೆಯ ಕಥೆ ಸಿಕ್ಕರೆ ಒಳ್ಳೆಯ ಟೀಮ್ ಬೇಕು. ಅದಾದ ಮೇಲೆ ಆ ಚಿತ್ರ ರಿಲೀಸ್ ಮಾಡೋಕೆ ಪರದಾಡಬೇಕು. ಇವೆಲ್ಲವನ್ನೂ ಮಾಡಿಕೊಂಡು ಬಂದ “ಕಾಲೇಜ್ ಕುಮಾರ’ನಿಗೆ ಜನ ಜೈ ಎಂದಿದ್ದಾರೆ. ಕಲಾವಿದರಿಗೆ ಬರೀ ನಟನೆ ಮಾಡುವುದಷ್ಟೇ ಕೆಲಸವಾಗಬಾರದು.
ಆ ಚಿತ್ರ ನಮ್ಮದು ಅಂದುಕೊಂಡು ಜನರಿಗೆ ತಲುಪಿಸುವವರೆಗೂ ಕೆಲಸ ಮಾಡಬೇಕು. ಇಲ್ಲಿ ಚಿತ್ರತಂಡ ಊರೂರು ಅಲೆದು ಪ್ರಚಾರ ಮಾಡಿದ್ದಕ್ಕೆ ಇಂಥದ್ದೊಂದು ಗೆಲುವು ಕಾಣಲು ಸಾಧ್ಯವಾಗಿದೆ. ನನ್ನ ಪ್ರಕಾರ ಭ್ರಷ್ಟತೆ ಇರದ ರಂಗವೆಂದರೆ ಅದು ಸಿನಿಮಾರಂಗ. ಇಲ್ಲಿ ಜನರಿಗೆ ಲಂಚ ಕೊಟ್ಟು ಸಿನಿಮಾ ನೋಡಿ ಅಂತ ಹೇಳ್ಳೋಕ್ಕಾಗಲ್ಲ. ಒಳ್ಳೆಯ ಚಿತ್ರವಿದ್ದರೆ, ಸ್ವತಃ ಜನರೇ ಆ ಚಿತ್ರವನ್ನು ನೋಡಿ ಗೆಲ್ಲಿಸುತ್ತಾರೆ. ಅಂಥದ್ದೊಂದು ಚಿತ್ರವಾಗಿ “ಕಾಲೇಜ್ ಕುಮಾರ’ ಮೂಡಿಬಂದಿದೆ.
ಯಾರೇ ಇರಲಿ, ಚಿತ್ರೀಕರಣ ಬಳಿಕ ಸಂಬಂಧ ಕಳೆದುಕೊಳ್ಳಬಾರದು. ಅಂದರು ಶ್ರುತಿ. ನಿರ್ದೇಶಕ ಹರಿಸಂತೋಷ್‌ಗೆ ಫ್ಯಾಮಿಲಿ ಚಿತ್ರ ಮಾಡಿದ್ದಕ್ಕೂ ಈಗ ಹೆಮ್ಮೆಯಂತೆ. “ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಮೈಸೂರು ಸೇರಿದಂತೆ ಇತರೆ ಭಾಗದಲ್ಲಿ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಮಾಸ್ ಚಿತ್ರ ಮಾಡಿದಾಗ ಜನ ಫೈಟ್ ಚೆನ್ನಾಗಿದೆ ಅನ್ನೋರು. ಈಗ ಫ್ಯಾಮಿಲಿ ಸಿನಿಮಾ ಮಾಡಿದ್ದೇನೆ.
ಇಲ್ಲೊಂದು ಸಂದೇಶವಿದೆ, ಸಖತ್ ಸೆಂಟಿಮೆಂಟ್ ಇದೆ ಅಂತ ಹೇಳಿಕೊಳ್ಳುತ್ತಿದ್ದಾರೆ. ಒಂದು ಚಿತ್ರದ ಯಶಸ್ಸು ಒಬ್ಬರಿಂದ ಆಗಲ್ಲ. ಇಡೀ ಚಿತ್ರತಂಡ ಮುಖ್ಯವಾಗಿ ನಿರ್ಮಾಪಕರ ಸಹಕಾರದಿಂದ ಮಾತ್ರ ಸಾಧ್ಯ. ಅದು ಈ ತಂಡದಲ್ಲಿದ್ದುದರಿಂದ ಈ ಗೆಲುವು ಸಿಕ್ಕಿದೆ’ ಅಂದರು ಹರಿಸಂತೋಷ್. ನಾಯಕ ವಿಕ್ಕಿಗೆ ಇದು ಎರಡನೇ ಚಿತ್ರ. ಜನರು ಪ್ರೀತಿಯಿಂದ ಚಿತ್ರವನ್ನು ಒಪ್ಪಿಕೊಂಡಿರುವುದಕ್ಕೆ ವಿಕ್ಕಿಗೆ ಸಹಜವಾಗಿಯೇ ಖುಷಿ ಇದೆಯಂತೆ. ಇನ್ನು ಮುಂದೆ ಇದೇ ರೀತಿಯ ಸಿನಿಮಾ ಮಾಡಲು ನಿರ್ಧರಿಸಿದ್ದಾಗಿ ಹೇಳಿಕೊಂಡರು ವಿಕ್ಕಿ.