ಶ್ರೀನಗರ : ಪಾಕಿಸ್ಥಾನದ ಸೇನಾ ಪಡೆ ಇಂದು ಪುನಃ ಜಮ್ಮು ಕಾಶ್ಮೀರದ ಸಾಂಬಾ ವಲಯದ ಅಂತಾರಾಷ್ಟ್ರೀಯ ಗಡಿಯಲ್ಲಿ ಅಪ್ರಚೋದಿತವಾಗಿ ಭಾರತೀ ಸೇನಾ ಹೊರ ಠಾಣೆಗಳನ್ನು ಗುರಿ ಇರಿಸಿ ಗುಂಡಿನ ದಾಳಿ ನಡೆಸಿದ್ದು ಓರ್ವ ಬಿಎಸ್‌ಎಫ್ ಜವಾನ ಹುತಾತ್ಮನಾಗಿರುವುದಾಗಿ ಸೇನಾ ಮೂಲಗಳು ತಿಳಿಸಿವೆ. ಅಂತೆಯೇ ಪಾಕ್ ಸೇನೆಗೆ ಭಾರತ ಅತ್ಯಂತ ಪ್ರಬಲವಾದ ಗುಂಡಿನ ಪ್ರತ್ಯುತ್ತರ ನೀಡಿದೆ ಎಂದೂ ಸೇನಾ ಮೂಲಗಳು ಹೇಳಿವೆ.
ಪಾಕ್ ಸೇನೆ ಕಳೆದ ಡಿ.31ರಂದು ನೌಶೇರಾ ವಲಯದಲ್ಲಿ ಮತ್ತು ಪೂಂಚ್ ಜಿಲ್ಲೆಯ ದಿಗ್ವಾರಾ ವಲಯದಲ್ಲಿನ ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘನೆ ಗೈದು ಗುಂಡಿನ ದಾಳಿ ನಡೆಸಿತ್ತು.
ಮಾತ್ರವಲ್ಲದೆ ಡಿಸೆಂಬರ್ ತಿಂಗಳಲ್ಲಿ ಹಲವು ಬಾರಿ ಅದು ಭಾರತೀಯಸೇನಾ ಪಡೆಯನ್ನು ಗುರಿ ಇರಿಸಿ ಗಡಿಯಾಚೆಗಿಂದ ಗುಂಡಿನ ಮತ್ತು ಶೆಲ್ ದಾಳಿ ನಡೆಸಿತ್ತು.
ಕಳೆದ ವಾರ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಭದ್ರತಾ ಪಡೆಗಳ ಕಾರ್ಯಾಚರಣೆ ಸನ್ನದ್ಧತೆ ಮತ್ತು ಗಡಿಯಲ್ಲಿನ ಹಾಲಿ ಭದ್ರತಾ ಪರಿಸ್ಥಿತಿಯನ್ನು ಅವಲೋಕಿಸಿದ್ದರು.
ಡಿ.23ರಂದು ಪಾಕ್ ಸೇನೆ ಜಮ್ಮು ಕಾಶ್ಮೀರದ ರಾಜೋರಿ ಜಿಲ್ಲೆಯ ಎಲ್‌ಓಸಿಯಲ್ಲಿ ನಡೆಸಿದ ಕದನ ವಿರಾಮ ಉಲ್ಲಂಘನೆಗೆ ಓರ್ವ ಮೇಜರ್ ಸಹಿತ ನಾಲ್ವರು ಭಾರತೀಯ ಸೈನಿಕರು ಹುತಾತ್ಮರಾಗಿದ್ದರು.
ಈ ನಡುವೆ ಅಮೆರಿಕವು ಉಗ್ರ ನಿಗ್ರಹಕ್ಕೆ ಸಹಕರಿಸದ ಪಾಕಿಸ್ಥಾನಕ್ಕೆ ತಾನು ಕೊಡಲಿದ್ದ 25.50 ಕೋಟಿ ಡಾಲರ್‌ಗಳ ಮಿಲಿಟರಿ ನೆರವನ್ನು ತಡೆಹಿಡಿದಿದ್ದು ಸದ್ಯದಲ್ಲೇ ತಾನು ಪಾಕಿಗೆ ಎಲ್ಲ ರೀತಿಯ ನೆರವನ್ನು ನಿಲ್ಲಿಸುವ ಎಚ್ಚರಿಕೆಯನ್ನು ಕೊಟ್ಟಿದೆ. ಪಾಕಿಸ್ಥಾನ ಕಳೆದ ಹಲವು ವರ್ಷಗಳಿಂದ ತನ್ನ ವಿರುದ್ಧ ಡಬಲ್ ಗೇಮ್ ನಡೆಸುತ್ತಿದೆ ಎಂದು ಅಮೆರಿಕ ಖಡಕ್ ಆಗಿ ಹೇಳಿದೆ.