Advertisement

Jammu-Kashmir ಗಡಿಯಲ್ಲಿ ಉದ್ಧಟತನ: ಪಾಠ ಕಲಿಯದ ಪಾಕ್‌

12:04 AM Sep 12, 2024 | Team Udayavani |

ಜಮ್ಮು-ಕಾಶ್ಮೀರದಲ್ಲೀಗ ವಿಧಾನಸಭೆ ಚುನಾವಣೆಯ ಕಾವು ಏರತೊಡಗಿರುವಂತೆಯೇ ಪಾಕಿಸ್ಥಾನದ ಸೇನಾಪಡೆಗಳು ಗಡಿಯಲ್ಲಿ ಮತ್ತೆ ಉದ್ಧಟತನದ ವರ್ತನೆ ತೋರಲಾರಂಭಿಸಿವೆ. ಜಮ್ಮು-ಕಾಶ್ಮೀರದಲ್ಲಿ ನೆಲೆಸಿರುವ ಶಾಂತಿಯ ವಾತಾವರಣವನ್ನು ಕೆಡಿಸುವ ಉದ್ದೇಶದಿಂದ ಕಳೆದ ಕೆಲವು ತಿಂಗಳುಗಳಿಂದೀಚೆಗೆ ಉಗ್ರರನ್ನು ಭಾರತದ ಭೂಪ್ರದೇಶಕ್ಕೆ ನುಸುಳಿಸಲು ಶತಾಯಗತಾಯ ಪ್ರಯತ್ನ ನಡೆಸುತ್ತಲೇ ಬಂದಿರುವ ಪಾಕಿಸ್ಥಾನಿ ಸೇನೆ ಈಗ ನೇರವಾಗಿ ಭಾರತೀಯ ಪಡೆಗಳ ಮೇಲೆ ದಾಳಿಗೆ ಮುಂದಾಗುವ ಮೂಲಕ ತನ್ನ ನರಿಬುದ್ಧಿಯನ್ನು ಮತ್ತೊಮ್ಮೆ ಪ್ರದರ್ಶಿಸಿದೆ.

Advertisement

ದಶಕದ ಬಳಿಕ ಜಮ್ಮು-ಕಾಶ್ಮೀರ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು ಒಟ್ಟು ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ಸೆಪ್ಟಂಬರ್‌ 18ರ ಮೊದಲ ಹಂತದ ಮತದಾನ ನಡೆಯಲು ವಾರವಷ್ಟೇ ಬಾಕಿ ಉಳಿದಿರುವಾಗ ಪಾಕಿಸ್ಥಾನಿ ಯೋಧರು ಕದನ ವಿರಾಮವನ್ನು ಉಲ್ಲಂ ಸಿ, ಭಾರತೀಯ ಯೋಧರನ್ನು ಗುರಿಯಾಗಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ. ಸೂಕ್ತ ಪ್ರತ್ಯುತ್ತರ ನೀಡುವ ಮೂಲಕ ಭಾರತೀಯ ಯೋಧರು ಪಾಕ್‌ನ ಷಡ್ಯಂತ್ರವನ್ನು ವಿಫ‌ಲಗೊಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಬಳಿಕ ಕೇಂದ್ರ ಸರಕಾರ ಗಡಿಯಲ್ಲಿ ಭಾರೀ ಸಂಖ್ಯೆಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸುವ ಮೂಲಕ ಪಾಕಿಸ್ಥಾನಿ ಸೇನೆಯ ಎಲ್ಲ ಕುಕೃತ್ಯಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿತ್ತು. ಆ ಬಳಿಕ ಗಡಿಯಲ್ಲಿ ಪಾಕಿಸ್ಥಾನಿ ಪಡೆಗಳಿಂದ ಕದನ ವಿರಾಮ ಉಲ್ಲಂಘನೆಯ ಪ್ರಕರಣಗಳಲ್ಲಿ ಭಾರೀ ಇಳಿಕೆ ಕಂಡುಬಂದಿತ್ತು. ಇದೇ ವೇಳೆ ಪಾಕ್‌ ಪ್ರೇರಿತ ಉಗ್ರರನ್ನು ಮಟ್ಟ ಹಾಕುವಲ್ಲಿಯೂ ಭಾರತೀಯ ಪಡೆಗಳು ಸಫ‌ಲವಾಗಿದ್ದವು. ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ಸಹಜಸ್ಥಿತಿಗೆ ಬರುತ್ತಿದ್ದಂತೆಯೇ ಅಲ್ಲಿನ ವಿಧಾನಸಭೆಗೆ ಚುನಾವಣೆ ನಡೆಸಲು ಆಯೋಗ ಅಧಿಸೂಚನೆ ಹೊರಡಿಸಿತ್ತು.

ಅದರಂತೆ ಈಗ ಜಮ್ಮು-ಕಾಶ್ಮೀರದಲ್ಲಿ ಚುನಾವಣ ಪ್ರಕ್ರಿಯೆಗಳು ಬಿರುಸಿನಿಂದ ಸಾಗಿರುವಂತೆಯೇ ಪಾಕ್‌ ಪಡೆಗಳು ಗಡಿಯಲ್ಲಿ ಬಾಲ ಬಿಚ್ಚಲಾರಂಭಿಸಿದ್ದು, ಭಾರತೀಯ ಪಡೆಗಳ ಗಮನವನ್ನು ಗಡಿಯತ್ತ ಸೆಳೆದು, ಕಣಿವೆ ಪ್ರದೇಶ ಮತ್ತು ಜಮ್ಮು ಭಾಗದಲ್ಲಿ ಮತ್ತೆ ಉಗ್ರರು ಸಕ್ರಿಯರಾಗುವಂತೆ ಮಾಡುವ ಷಡ್ಯಂತ್ರ ರೂಪಿಸಿವೆ. ಇದರ ಭಾಗವಾಗಿಯೇ ಗಡಿಯಲ್ಲಿ ಕದನ ವಿರಾಮವನ್ನು ಉಲ್ಲಂ ಸಿ, ಪಾಕ್‌ ಯೋಧರು ಅಪ್ರಚೋದಿತರಾಗಿ ಭಾರತೀಯ ಪಡೆಗಳತ್ತ ಗುಂಡಿನ ದಾಳಿ ನಡೆಸಿರುವುದು ಸ್ಪಷ್ಟ. ಆರ್ಥಿಕ ಸಂಕಷ್ಟದಿಂದ ಹೊರಬರಲು ಒದ್ದಾಟ ನಡೆಸುತ್ತಿರುವ ಪಾಕಿಸ್ಥಾನ ಈಗ ಒಂದೆಡೆಯಿಂದ ತಾನೇ ಆಶ್ರಯ, ಹಣಕಾಸು ನೆರವು ನೀಡಿ ಪೋಷಿಸಿದ ಉಗ್ರರ ಉಪಟಳದಿಂದ ತತ್ತರಿಸುತ್ತಿದ್ದರೆ ಮತ್ತೊಂದೆಡೆಯಿಂದ ಭಾರತದ ವಿರುದ್ಧ ಉಗ್ರರನ್ನು ಛೂ ಬಿಡುವ ತನ್ನ ಹಳೇ ಚಾಳಿಗೆ ಜೋತುಬಿದ್ದಿದೆ. ಅಷ್ಟು ಮಾತ್ರವಲ್ಲದೆ ಜಮ್ಮು-ಕಾಶ್ಮೀರದಲ್ಲೀಗ ಶಾಂತಿ ನೆಲೆಸಿರುವುದು ಮತ್ತು ಚುನಾಯಿತ ಸರಕಾರ ಅಧಿಕಾರಕ್ಕೆ ಬರುವ ದಿನಗಳು ಸಮೀಪಿಸುತ್ತಿರುವಂತೆಯೇ ಪಾಕಿಸ್ಥಾನ ವಿಲವಿಲನೆ ಒದ್ದಾಡತೊಡಗಿದೆ. ಇದೇ ಕಾರಣಕ್ಕಾಗಿ ಉಗ್ರರಿಗೆ ಪ್ರಚೋದನೆ, ಕದನ ವಿರಾಮ ಉಲ್ಲಂಘನೆಯಂತಹ ದುಷ್ಕೃತ್ಯಗಳಿಗೆ ಪಾಕ್‌ ಸೇನೆ ಮುಂದಾಗಿದೆ.

ಪಾಕಿಸ್ಥಾನದ ಈ ಎಲ್ಲ ಷಡ್ಯಂತ್ರಗಳನ್ನು ಅರಿತುಕೊಂಡಿರುವ ಭಾರತೀಯ ಸೇನೆ ಮತ್ತು ಭದ್ರತಾ ಪಡೆಗಳು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿವೆ. ಪಾಕ್‌ ಪ್ರೇರಿತ ಉಗ್ರರ ಹಾವಳಿ, ಪಾಕ್‌ ಸೇನೆಯಿಂದ ಕದನ ವಿರಾಮ ಉಲ್ಲಂಘನೆಯಂತಹ ಭಾರೀ ಸವಾಲುಗಳನ್ನು ಎದುರಿಸುವ ಜತೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಚುನಾವಣ ಪ್ರಕ್ರಿಯೆಯನ್ನು ಸುಸೂತ್ರವಾಗಿ ಪೂರ್ಣ ಗೊಳಿಸುವ ಗುರುತರ ಹೊಣೆಗಾರಿಕೆ ಭಾರತೀಯ ಸೇನೆ ಮತ್ತು ಭದ್ರತಾ ಪಡೆಗಳ ಮುಂದಿದೆ. ತನ್ನ ಮೇಲಿನ ಜವಾಬ್ದಾರಿಯನ್ನು ಭಾರತೀಯ ಪಡೆಗಳು ಯಶಸ್ವಿಯಾಗಿ ನಿಭಾಯಿಸುವ ಮೂಲಕ ಪಾಕಿಸ್ಥಾನದ ಎಲ್ಲ ಹುನ್ನಾರಗಳನ್ನು ಮತ್ತೊಮ್ಮೆ ಜಗಜ್ಜಾ ಹೀರುಗೊಳಿಸಿ ಮತ್ತೂಮ್ಮೆ ಪಾಕಿಸ್ಥಾನದ ಅಸಲಿ ಮುಖವನ್ನು ತೆರೆದಿಡಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next