Advertisement

ಜಮ್ಮು ಕಾಶ್ಮೀರದಲ್ಲಿ ಮತ್ತೆ ರಾಜಕೀಯ ಬೆಳವಣಿಗೆ : ಪುನರ್ವಿಂಗಡಣೆಯೇ ಅಜೆಂಡಾ?

08:18 PM Jun 20, 2021 | Team Udayavani |

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ರಾಜಕೀಯ ಬೆಳವಣಿಗೆಗಳು ಜಿಗಿತುಕೊಂಡಿದ್ದು, ಎಲ್ಲರ ದೃಷ್ಟಿ ಈಗ ಜೂ.24ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆದಿರುವ ಸರ್ವಪಕ್ಷಗಳ ಸಭೆ ಮೇಲೆ ನೆಟ್ಟಿದೆ. ವಿಧಾನಸಭೆ ಚುನಾವಣೆ  ನಡೆಸುವ ಸಲುವಾಗಿ ಕ್ಷೇತ್ರ ವಿಂಗಡಣೆ ಪ್ರಕ್ರಿಯೆ ನಡೆಸಲು ಈ ಸಭೆ ಕರೆಯಲಾಗಿದೆ ಎನ್ನಲಾಗುತ್ತಿದೆ. ಹಾಗೆಯೇ ಭಾನುವಾರ ಬೆಳಗ್ಗೆ ಪ್ರಧಾನಿ ಮೋದಿ ಅವರ ನಿವಾಸದಲ್ಲಿ ಬಿಜೆಪಿ ಅಗ್ರ ನಾಯಕರು ಸಭೆ ಸೇರಿ ಚರ್ಚೆ ನಡೆಸಿದ್ದಾರೆ.

Advertisement

ಸರ್ವ ಪಕ್ಷಗಳ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಮತ್ತೆ ರಾಜ್ಯ ಸ್ಥಾನಮಾನ ನೀಡುವ ಬಗ್ಗೆ ನಿರ್ಧಾರವಾಗುವ ಸಾಧ್ಯತೆ ಇದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದರೆ, ಇನ್ನೂ ಕೆಲವು ಮಾಧ್ಯಮಗಳು ಇಂಥ ಯಾವುದೇ ಅಜೆಂಡಾ ಕೇಂದ್ರ ಸರ್ಕಾರದ ಬಳಿ ಇಲ್ಲ ಎಂದಿವೆ. ಸದ್ಯಕ್ಕೆ ಸರ್ವ ಪಕ್ಷಗಳ ಸಭೆಯಲ್ಲಿ ಯಾವ ವಿಷಯ ಚರ್ಚೆಯಾಗಲಿದೆ ಎಂಬುದೇ ಅತಿ ದೊಡ್ಡ ಕುತೂಹಲವಾಗಿ ಮಾರ್ಪಟ್ಟಿದೆ.

ಉನ್ನತ ನಾಯಕರ ಸಭೆ
ಜೂ.24ರ ಸರ್ವಪಕ್ಷಗಳ ಸಭೆ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಲೋಕ ಕಲ್ಯಾಣ ಮಾರ್ಗ ನಿವಾಸದಲ್ಲಿ ಹಿರಿಯ ಸಚಿವರ ಸಭೆ ನಡೆಯಿತು. ಇದರಲ್ಲಿ ಗೃಹ ಸಚಿವ ಅಮಿತ್‌ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ರಾಜ್ಯದ ಕುರಿತಾಗಿ ಮುಂದೆ ತೆಗೆದುಕೊಳ್ಳಬೇಕಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ :ಇನ್ ಸ್ಟಾಗ್ರಾಮ್ ನಲ್ಲಿ 300ಮಿಲಿಯನ್ ಫಾಲೋವರ್ಸ್ ದಾಟಿದ ಫುಟ್ ಬಾಲ್ ಸ್ಟಾರ್ ಆಟಗಾರ ರೊನಾಲ್ಡೋ

ಕ್ಷೇತ್ರ ಪುನರ್‌ ವಿಂಗಡಣೆ?
ವರ್ಷಾಂತ್ಯದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಸುವ ಸಾಧ್ಯತೆ ಇದೆ. ಅಲ್ಲದೆ ಚುನಾವಣೆ ನಡೆಸಲು ಕ್ಷೇತ್ರಗಳನ್ನು ಪುನರ್‌ ವಿಂಗಡಣೆ ಮಾಡಬೇಕಾಗಿದೆ. ಇದನ್ನು ನಡೆಸುವ ಸಲುವಾಗಿ, ಎಲ್ಲ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮೋದಿ ಈ ಸಭೆ ಕರೆದಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಈಗಾಗಲೇ ನಿವೃತ್ತ ನ್ಯಾ. ರಂಜನ್‌ ಪ್ರಕಾಶ್‌ ದೇಸಾಯಿ ಅವರ ನೇತೃತ್ವದಲ್ಲಿ ಕ್ಷೇತ್ರ ಪುನರ್‌ ವಿಂಗಡಣಾ ಸಮಿತಿ ಕರೆದಿದ್ದು, ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚನೆಯನ್ನೂ ನೀಡಲಾಗಿದೆ.

Advertisement

14 ನಾಯಕರು ಭಾಗಿ
ಪ್ರಧಾನಿ ಕರೆದಿರುವ ಸಭೆಯಲ್ಲಿ ಜಮ್ಮು ಕಾಶ್ಮೀರದ ಒಟ್ಟು 14 ನಾಯಕರು ಭಾಗಿಯಾಗಲಿದ್ದಾರೆ. ಇವರಲ್ಲಿ ನಾಲ್ವರು ಮಾಜಿ ಸಿಎಂಗಳೂ ಇರಲಿದ್ದಾರೆ. ಎಂಟು ರಾಜಕೀಯ ಪಕ್ಷಗಳು ತಮ್ಮ ಪ್ರತಿನಿಧಿಗಳನ್ನು ಕಳುಹಿಸಿಕೊಡಲಿವೆ. ಫಾರೂಕ್‌ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರ ನೇತೃತ್ವದ ಗುಪಾರ್‌ ಒಕ್ಕೂಟದಿಂದ ಇಬ್ಬರು ನಾಯಕರು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ಬಿಜೆಪಿ ಮತ್ತು ಅಪ್ನಾ ಪಾರ್ಟಿಗಳು ಸಭೆಯಲ್ಲಿ ಭಾಗಿಯಾಗುವ ಸಂಬಂಧ ದೃಢಪಡಿಸಿವೆ.

ವಾಪಸ್‌ ರಾಜ್ಯ ಸ್ಥಾನಮಾನ?
ಇನ್ನು ನೆಟ್‌ವರ್ಕ್‌ 18 ವರದಿ ಮಾಡಿರುವ ಪ್ರಕಾರ, ಈ ಸಭೆಯನ್ನು ವಾಪಸ್‌ ರಾಜ್ಯ ಸ್ಥಾನಮಾನ ನೀಡುವ ಸಲುವಾಗಿಯೇ ಕರೆಯಲಾಗಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರು ಕಳೆದ ಒಂದು ತಿಂಗಳಿನಿಂದಲೇ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಇದಕ್ಕಾಗಿ ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಪಾಕ್‌ ನಿಂದ ವಿರೋಧ
ಪ್ರತಿ ಬಾರಿಯಂತೆ ಈ ಬಾರಿಯೂ ಪಾಕಿಸ್ತಾನ ತನ್ನ ವಿರೋಧದ ಮಾತುಗಳನ್ನಾಡಿದೆ. ಅಲ್ಲದೆ, ಜೂ.24ರ ಸರ್ವಪಕ್ಷಗಳ ಸಭೆ ಪಾಕಿಸ್ತಾನಕ್ಕೆ ಟೆನ್ಶನ್‌ ತಂದುಕೊಟ್ಟಿದೆ. ಹೀಗಾಗಿ, ಕಾಶ್ಮೀರ ಕುರಿತಾಗಿ ಯಾವುದೇ ನಿರ್ಧಾರ ತೆಗೆದುಕೊಂಡರೂ ನಾವು ವಿರೋಧಿಸುತ್ತೇವೆ ಎಂದು ಪಾಕ್‌ನ ವಿದೇಶಾಂಗ ಸಚಿವ ಶಾ ಮೊಹಮ್ಮದ್‌ ಖುರೇಷಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next