Advertisement

ಕಾಶ್ಮೀರ : ಇನ್ನು ಬರೀ ಕನ್ನಡಿಯೊಳಗಿನ ಗಂಟಾಗದೇನೋ?

06:03 PM Aug 06, 2019 | Sriram |

ದಯವಿಟ್ಟು, ಈ ಸಂಗತಿಯನ್ನು ತೀರಾ ಲಘುವೆಂದು ಅರ್ಥ ಮಾಡಿಕೊಳ್ಳಬೇಡಿ. ಅಷ್ಟೇ ಅಲ್ಲ ; ದೇಶದ ಭವಿಷ್ಯದ ಸಂಗತಿಗೊಂದು ಒಂದು ವೈಯಕ್ತಿಕ ಸಂಗತಿಯನ್ನು ಜೋಡಿಸಿದ್ದೇನೆ ಎಂದೂ ತಿಳಿದುಕೊಳ್ಳಬೇಡಿ. ಆದರೆ, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡುವ ನಿರ್ಧಾರ ಕೇಳಿ ನನಗನ್ನಿಸಿದ ಮೊದಲ ಅಭಿಪ್ರಾಯವೇನೆಂದರೆ, ‘ಅಬ್ಬಾ..ಇನ್ನು ಮುಂದಾದರೂ ನಿಶ್ಚಿಂತೆಯಿಂದ ಕಾಶ್ಮೀರವನ್ನು ಕಣ್ತುಂಬಾ ನೋಡಬಹುದು’ !

Advertisement

ನನ್ನ ತಲೆಮಾರು, 25 ವರ್ಷಗಳಿಂದ ಕಾಶ್ಮೀರವನ್ನು ಬರೀ ಪಠ್ಯದಲ್ಲೇ ಓದಿದ್ದು. ಅಲ್ಲಿನ ಕಣಿವೆಗಳು, ಕೇಸರಿ ಬೆಳೆಯುವ ಕಥೆಗಳು, ದಾಲ್ ಸರೋವರ, ಟುಲಿಪ್ ಹೂವುಗಳು, ಸುತ್ತಲೂ ಆವರಿಸಿಕೊಂಡ ಹಿಮದ ಬೆಟ್ಟಗಳು ಎಲ್ಲವನ್ನೂ ನಾವು ಕೇವಲ ಪಠ್ಯವನ್ನು ಹೊರತುಪಡಿಸಿದಂತೆ ಬೇರೇನೂ ಕಂಡಿಲ್ಲ.

ಉದ್ಯೋಗಕ್ಕೆ ಸೇರಿ 15 ವರ್ಷಗಳಾದರೂ ಪ್ರತಿ ವರ್ಷ ಪ್ರವಾಸಕ್ಕೆ ಹೊರಡಬೇಕೆಂದಾಗಲೂ ಕಾಡುವುದು ಒಂದೇ ಅಲ್ಲಿನ ಅಸ್ಥಿರತೆ. ಯಾವಾಗ ಏನು ಆಗಿಬಿಡುವುದೋ ಎಂಬ ಆತಂಕ. ಹಲವಾರು ಮಂದಿ ಅಲ್ಲಿಗೆ ಹೋಗಿ ಸುರಕ್ಷಿತವಾಗಿ ವಾಪಸು ಬಂದಾಗಲೆಲ್ಲಾ ಅವರು ನಮ್ಮ ಕಣ್ಣಲ್ಲಿ ಕಾಣುತ್ತಿದ್ದುದು ಅದೃಷ್ಟಶಾಲಿಯಂತೆಯೇ, ಇದು ಎರಡು ಕಾರಣಕ್ಕೆ. ಒಂದು ಕಾಶ್ಮೀರ ನೋಡಿಬಂದವರು ನಿಜಕ್ಕೂ ಅದೃಷ್ಟಶಾಲಿಗಳು ಎನ್ನುವ ಅರ್ಥ, ಮತ್ತೊಂದು ಸುರಕ್ಷಿತವಾಗಿ ವಾಪಸು ಬಂದರಲ್ಲ, ಹಾಗಾಗಿ ಅದೃಷ್ಟಶಾಲಿಗಳು ಎಂಬ ಅರ್ಥದಲ್ಲಿ.

ಹಾಗೆಂದು ನಾವು ಪ್ರಯತ್ನಿಸಿಲ್ಲವೆಂದಲ್ಲ. ಹಿಂದೊಮ್ಮೆ ನಿಗದಿಪಡಿಸಿ, ರದ್ದು ಮಾಡಿದ ಕಥೆ ಬೇರೆಯೇ. ಇದೇ ನಾಲ್ಕು ವರ್ಷಗಳ ಹಿಂದೆ ಕಾಶ್ಮೀರ ಪ್ಯಾಕೇಜ್ ಬುಕ್ ಮಾಡಿದೆವು. ಅದಕ್ಕೆ ಸಿದ್ಧತೆಯನ್ನೂ ನಡೆಸಿಯಾಗಿತ್ತು. ಕಂಪೆನಿಯವರೂ ರಜೆ ಕೊಟ್ಟಿದ್ದರು. ಪ್ರವಾಸಕ್ಕೆ ಕೆಲವೇ ದಿನಗಳಿರುವಾಗ ಮೇಘ ಸ್ಪೋಟಗೊಂಡು ಪ್ರವಾಹ ಪರಿಸ್ಥಿತಿ ನಿರ್ಮಾಣವಾಯಿತು. ನಾವು ಪ್ರವಾಸಕ್ಕೆ ಹೊರಡುವ ಸಂದರ್ಭದಲ್ಲಿ ಎಲ್ಲವೂ ಕ್ಷೇಮವಾಗಿರಬಹುದು ಎಂದು ಕೊಂಡೆವು.

ಆದರೆ ಖಚಿತ ಸ್ಥಿತಿ ತೋರಿಬರಲಿಲ್ಲ. ಪ್ಯಾಕೇಜ್ ನ್ನು ರದ್ದುಪಡಿಸಬೇಕಾಯಿತು, ಸುಮಾರು 25 ಸಾವಿರ ರೂ. ಗಳನ್ನು ಕಳೆದುಕೊಂಡೆವು. ಹಣ ವಾಪಸು ಕೊಡುವಂತೆ ಕೇಳಿದಾಗ ಟೂರ್ ಏಜೆನ್ಸಿಯವನು, ಆ ವರ್ಷ ನೆರೆ ಕಾರಣವಿರಬಹುದು, ಅದಾದ ಮೇಲೆ ಮತ್ತೆ ಭಯೋತ್ಪಾದನೆಯ ಸಮಸ್ಯೆ ಆರಂಭವಾಯಿತು. ಎಲ್ಲ ಭಾಗದಲ್ಲೂ ಅಲ್ಲ. ಆದರೂ, ಮನಸ್ಸಿನಲ್ಲಿ ಅವ್ಯಕ್ತವಾದ ಭಯ ಕಾಡುವುದು ಬಿಡಲೇ ಇಲ್ಲ. ಅಲ್ಲೊಂದು ಚುನಾಯಿತ ಸರಕಾರ ಬಂದಾಗ ಪರಿಸ್ಥಿತಿ ಸುಧಾರಿಸಬಹುದು ಎಂದುಕೊಂಡೆವು. ಹಾಗಾಗಲಿಲ್ಲ. ಹಾಗೆಂದರೆ ಸಾವಿರಾರು ಜನ ಪ್ರವಾಸಿಗರು ನಿತ್ಯವೂ ಕಾಶ್ಮೀರಕ್ಕೆ ಬರುವುದಿಲ್ಲವೇ ಎಂದು ಪ್ರಶ್ನೆ ಕೇಳಬೇಡಿ. ಹಾಗೆ ಎನ್ನುವಾಗ ನಾನು ಅವರೆಲ್ಲರನ್ನೂ ಅದೃಷ್ಟಶಾಲಿಗಳೆಂದೇ ಪರಿಗಣಿಸುತ್ತೇನೆ !

Advertisement

ಪ್ರವಾಸಿಗರ ಸಂಖ್ಯೆ ಇಳಿಯುತ್ತಿರುವುದೂ ನಿಜ
ಮೂರ್ನಾಲ್ಕು ದಿನಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಮಾಣವಾಗಿರುವ ಸ್ಥಿತಿ ಕುರಿತು ನಾನೇನೂ ಹೇಳಲಾರೆ. ಅದರಿಂದ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿರಬಹುದು. ಸ್ವತಃ ಕೇಂದ್ರ ಸರಕಾರವೂ ಅಮರನಾಥ ಯಾತ್ರೆ ರದ್ದುಪಡಿಸಿ, ಪ್ರವಾಸಿಗರನ್ನು ವಾಪಸ್ ಕಳಿಸಿದೆ. ಆದರೆ, 2018 ರಲ್ಲೂ ಪ್ರವಾಸಿಗರ ಸಂಖ್ಯೆ ಸಾಕಷ್ಟು ಕುಸಿದಿತ್ತು. ಇದಕ್ಕೆ ಹಣ ಅಪನಗದೀಕರಣ ಎಂದು ಹೇಳಬೇಕಿಲ್ಲ ; ಆ ಲೆಕ್ಕದಲ್ಲಿ 2016, 2017 ರಲ್ಲಿ ಹೆಚ್ಚಿನ ಸಂಖ್ಯೆಯಲ್ಲೇ ಪ್ರವಾಸಿಗರು ಬಂದಿದ್ದರು.

ಇನ್ನು ಪರವಾಗಿಲ್ಲ ಎನ್ನಬಹುದೇ?
ನಿಜ, ಮೋದಿ ಸರಕಾರದ ನಡೆ ಸ್ವಲ್ಪ ಖುಷಿ ತಂದಿರುವುದು ನಿಜ. ವಿಶೇಷ ಸ್ಥಾನಮಾನ ರದ್ದುಪಡಿಸಿದ್ದರ ಹಿನ್ನೆಲೆ ಇಟ್ಟುಕೊಂಡು ದೊಡ್ಡ ಚರ್ಚೆ ಮಾಡುವಷ್ಟು ಬುದ್ಧಿವಂತ ನಾನಲ್ಲ. ಸದ್ಯಕ್ಕೆ ಮಾಧ್ಯಮಗಳಲ್ಲೂ ತೋರಿಸುತ್ತಿರುವಂತೆ ಲೆಕ್ಕ ಹಾಕಿದರೆ, ಹೊರಗಿನ ಜನ ಅಲ್ಲಿಗೆ ಹೋಗಿ, ಅಲ್ಲಿನ ಜನ ಹೊರಗೂ ಬಂದರೆ ಸ್ಥಳೀಯ ಪರಿಸ್ಥಿತಿ ಬದಲಾಗುವ ಸಾಧ್ಯತೆ ಇದೆ. ಅಭಿವೃದ್ಧಿಯೂ ಆಗಬಹುದು. ಅದಕ್ಕಿಂತ ಮಿಗಿಲಾಗಿ, ಸ್ಥಳೀಯ ಸರಕಾರ, ಕೇಂದ್ರ ಸರಕಾರ ಎಲ್ಲವೂ ಪರಿಸ್ಥಿತಿ ಬಿಗಡಾಯಿಸದಂತೆ ಕ್ರಮ ತೆಗೆದುಕೊಳ್ಳಬಹುದು. ಇದರೊಂದಿಗೇ ಕೇಂದ್ರ ಸರಕಾರದೊಂದಿಗೆ ಘಭಾರತ] ಜಮ್ಮು ಮತ್ತು ಕಾಶ್ಮೀರವೂ ಜೋಡಣೆಯಾಗುವುದರಿಂದ ಹೆಚ್ಚು ಅನುಕೂಲ ದೊರಕಬಹುದು. ಸಂಕಷ್ಟಕರ ಪರಿಸ್ಥಿತಿಯಲ್ಲೂ ಒಂದಿಷ್ಟು ನೆರವು ಸಿಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಈ ರಾಜಕಾರಣಿಗಳು ಏನು ಬೇಕಾದರೂ ಮಾಡಲಿ, ಮತಗಳೇ ಮುಖ್ಯವೆಂದು ಅನ್ನಿಸುವವರ ಉದ್ದೇಶಗಳನ್ನು ಸರಳವಾಗಿ ಅರ್ಥ ಮಾಡಿಕೊಳ್ಳುವುದು ಕಷ್ಟ. ಅದು ಬಿಟ್ಟು, ಸಾಮಾನ್ಯ ಜನರಂತೆ ನಾನು ಗಮನಿಸುವುದಾದರೆ, ಮತ್ತೆ ಕಾಶ್ಮೀರಕ್ಕೆ ಭೇಟಿ ನೀಡುವ ಆಸೆ ಚಿಗುರೊಡೆದಿದೆ. ಕಾಶ್ಮೀರ ಇನ್ನು ಬರೀ ಕನ್ನಡಿಯೊಳಗಿನ ಗಂಟಲ್ಲ ಎನಿಸುತ್ತಿದೆ.

-ಅನುರೂಪ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next