ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರದ ಡಿಡಿಸಿ(ಡಿಸ್ಟ್ರಿಕ್ಟ್ ಡೆವಲಪ್ ಮೆಂಟ್ ಕೌನ್ಸಿಲ್) ಚುನಾವಣೆಗೂ ಮುನ್ನವೇ ಶ್ರೀನಗರದ ಹೊರವಲಯದ ಎಚ್ ಎಂಟಿ ಪ್ರದೇಶದಲ್ಲಿ ಉಗ್ರರು ನಡೆಸಿದ ದಾಳಿಗೆ ಇಬ್ಬರು ಯೋಧರು ಹುತಾತ್ಮರಾದ ಘಟನೆ ಗುರುವಾರ(ನವೆಂಬರ್ 26, 2020) ನಡೆದಿದೆ.
ಭಾರತೀಯ ಸೇನೆಯ ರಾಷ್ಟ್ರೀಯ ರೈಫಲ್ಸ್ ನ ಕಿಲಿಯೋ ಪಡೆಯ ಯೋಧರಾಗಿದ್ದು, ದಾಳಿಯಲ್ಲಿ ಗಾಯಗೊಂಡಿದ್ದ ಇಬ್ಬರು ಯೋಧರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದುರದೃಷ್ಟವಶಾತ್ ಯೋಧರು ಹುತಾತ್ಮರಾಗಿರುವುದಾಗಿ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.
ಲಷ್ಕರ್ ಎ ತೊಯ್ಬಾ ಉಗ್ರಗಾಮಿ ಸಂಘಟನೆಯ ಉಗ್ರರು ಈ ದಾಳಿ ನಡೆಸಿರುವ ಬಗ್ಗೆ ವಿಜಯ್ ಕುಮಾರ್ ಶಂಕೆ ವ್ಯಕ್ತಪಡಿಸಿದ್ದಾರೆ. ಎಚ್ ಎಂಟಿ ಪ್ರದೇಶದಲ್ಲಿ ಉಗ್ರರು ಏಕಾಏಕಿ ದಾಳಿ ನಡೆಸಿದ್ದರು. ಮಿಲಿಟರಿ ಬಣ್ಣದ ವಸ್ತ್ರ ಧರಿಸಿದ್ದ ಉಗ್ರರು ಕಾರಿನಲ್ಲಿ ಆಗಮಿಸಿ, ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದರು ಎಂದು ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:ವಾಟ್ಸಾಪ್ OTP Scam 2020: ಮೈಮರೆತರೇ ನಿಮ್ಮ ಪ್ರತಿಯೊಂದು ಮಾಹಿತಿ ಹ್ಯಾಕರ್ ಗಳ ಪಾಲು !
ಘಟನೆ ನಡೆದ ನಂತರ ಸ್ಥಳಕ್ಕೆ ಹೆಚ್ಚಿನ ಭದ್ರತಾ ಅಧಿಕಾರಿಗಳು ಭೇಟಿ ನೀಡಿದ್ದರು. ಎಚ್ ಎಂಟಿ ಪ್ರದೇಶವನ್ನು ಬಂದ್ ಮಾಡಿ, ಉಗ್ರರ ಬಂಧನಕ್ಕಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ವರದಿ ಹೇಳಿದೆ.