ಶ್ರೀನಗರ: ಫೆಬ್ರವರಿ 14ರಂದು ಭಾರತೀಯ ಸಿ.ಆರ್.ಎಫ್. ಜವಾನರು ಪ್ರಯಾಣಿಸುತ್ತಿದ್ದ ಸೇನಾವಾಹನಗಳ ಮೇಲೆ ನಡೆದ ಭೀಕರ ಆತ್ಮಾಹುತಿ ಉಗ್ರ ದಾಳಿಗೆ ಗುಪ್ತಚರ ಹಾಗೂ ಭದ್ರತಾ ವೈಫಲ್ಯವೇ ಕಾರಣವೆಂದು ಹೇಳಲಾಗಿತ್ತು. ಆದರೆ ಇದೀಗ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಜಮ್ಮು-ಕಾಶ್ಮೀರ ಪೊಲೀಸ್ ಗುಪ್ತಚರ ಇಲಾಖೆಗೆ ಸಾಕಷ್ಟು ಮುಂಚಿತವಾಗಿಯೇ ಈ ರೀತಿಯ ಸಂಭವನೀಯ ದಾಳಿಯ ಸೂಚನೆ ಸಿಕ್ಕಿತ್ತು ಮಾತ್ರವಲ್ಲದೇ ಈ ಕುರಿತಾದ ಮಾಹಿತಿಯನ್ನು ಅದು ಸಂಬಂಧಪಟ್ಟ ಇಲಾಖೆಗಳ ಜೊತೆಗೂ ಹಂಚಿಕೊಂಡಿತ್ತು ಎನ್ನುವ ಮಾಹಿತಿ ಇದೀಗ ಖಾಸಗಿ ವೆಬ್ ಸೈಟ್ ಒಂದು ಸಂಗ್ರಹಿಸಿರುವ ಗೌಪ್ಯ ವರದಿಗಳಿಂದ ತಿಳಿದುಬಂದಿದೆ.
ಜಮ್ಮು ಕಾಶ್ಮೀರದ ಸಿಐಡಿಯಲ್ಲಿರುವ ಕೌಂಟರ್ ಇಂಟಲಿಜೆನ್ಸ್ ಕಾಶ್ಮೀರ (ಸಿ.ಐ.ಕೆ.) ಇದರ ಶಬ್ಬೀರ್ ಅಹಮ್ಮದ್ ಅವರನ್ನು ಪುಲ್ವಾಮದ ಡೆಪ್ಯುಟಿ ಪೊಲೀಸ್ ಸುಪರಿಂಟೆಂಡೆಂಟ್‌ಆಗಿ ನೇಮಿಸಲಾಗಿತ್ತು. ಇವರು ಸಿಐಡಿ, ಸಿಐಕೆ ಎಸ್.ಪಿ. ಅವರಿಗೆ
ಜನವರಿ 24ರಂದು ಗೌಪ್ಯ ಮಾಹಿತಿಯೊಂದನ್ನು ಕಳುಹಿಸಿರುತ್ತಾರೆ (ಡಿ.ಎಸ್.ಪಿ./ಸಿಐ-ಪುಲ್/2019/18/71) ಅದರಲ್ಲಿ ಶಬ್ಬೀರ್ ಅವರು ತಿಳಿಸಿರುವಂತೆ ಮೂವರು ‘ವಿದೇಶಿ ಉಗ್ರಗಾಮಿಗಳ’ ತಂಡವು ‘ಯಾವುದೋ ಒಂದು ವಿಶೇಷ ಕಾರ್ಯಾಚರಣೆಗಾಗಿ’ ಆವಂತಿಪೋರ ತಲುಪಿವೆ ಎಂದು ಅವರು ಮಾಹಿತಿ ನೀಡಿರುತ್ತಾರೆ.
‘2 ರಿಂದ 3 ಜೆ.ಇ.ಎಂ. ಸಂಘಟನೆಗೆ ಸೇರಿದ ವಿದೇಶಿ ಉಗ್ರರು ಇತ್ತೀಚೆಗೆ ಆವಂತಿಪೊರಾ ಜೈಶ್ ಗುಂಪಿನ ಮುದಾಸಿರ್ ಖಾನ್ ಅಲಿಯಾಸ್ ಮುಹಮ್ಮದ್ ಭಾಯ್ ನನ್ನು ಸಂಪರ್ಕಿಸಿದ್ದು
ಯಾವುದೋ ವಿಶೇಷ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಅಂದರೆ ಮುಂಬರುವ ದಿನಗಳಲ್ಲಿ ಯಾವುದೋ ಒಂದು ಪ್ರಮುಖ ಆತ್ಮಾಹುತಿ ದಾಳಿಗೆ ಸಂಬಂಧಿಸಿದಂತೆ ಈ ಗುಂಪು ಆತನೊಡನೆ ಮಾತನಾಡಿರುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ನಮಗೆ ತಿಳಿದುಬಂದಿದೆ. ಮಾತ್ರವಲ್ಲದೇ ಈ ಗುಂಪು ರಾಜ್ ಪೋರಾದ ಜೆಇಎಂ ಮುಖಂಡ ಶಾಹೀದ್ ಬಾಬಾ ಜೊತೆಗೂ ಸಂಪರ್ಕವಿರಿಸಿಕೊಂಡಿರುವ ಕುರಿತಾಗಿ ಮಾಹಿತಿ ಲಭಿಸಿದೆ ಮತ್ತು
ಈ ಮಾಹಿತಿಯ ಜಾಡನ್ನು ಇನ್ನಷ್ಟು ವಿಸ್ತರಿಸಿಕೊಳ್ಳಬೇಕಿದೆ’ ಎಂದು ಗುಪ್ತಚರ ವರದಿಗಳು ಸ್ಪಷ್ಟವಾಗಿ ಉಲ್ಲೇಖೀಸಿದ್ದವು.
ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಡಾ. ಬಿ. ಶ್ರೀನಿವಾಸ್ ಅವರು
ಜನವರಿ 31ರಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಪಡೆ, ಸಿ.ಆರ್.ಪಿ.ಎಫ್. ಮತ್ತು ಸಂಬಂಧಪಟ್ಟ ಸಂಸ್ಥೆಗಳಲ್ಲಿರುವ ಆಯಕಟ್ಟಿನ ಅಧಿಕಾರಿಗಳಿಗೆ ಈ ಗುಪ್ತ ಮಾಹಿತಿಯನ್ನು ರವಾನಿಸಿದ್ದರು. ಇದಾದ ಬಳಿಕ ಪೊಲೀಸ್ ಮತ್ತು ಅರೆಸೇನಾಪಡೆಗಳನ್ನು ‘ಹೈ ಅಲರ್ಟ್’ ಸ್ಥಿತಿಯಲ್ಲಿರಿಸಲು ಹಾಗೂ ಮಿಲಿಟರಿ ವಾಹನ ಸಾಗುವ ಹೆದ್ದಾರಿಯನ್ನು ಸಂಚಾರ ಮುಕ್ತಗೊಳಿಸುವ ಮತ್ತು ಇತರೇ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕೃತ ಸೂಚನೆಯನ್ನೂ ರವಾನಿಸಲಾಗಿತ್ತು. ಮತ್ತು ಜೈಶ್ ಉಗ್ರರು ಫೆಬ್ರವರಿ 9 ರಿಂದ ಫೆಬ್ರವರಿ 11ರ ನಡುವೆ ಯಾವುದೇ ದಿನ ತೀವ್ರಸ್ವರೂಪದ ಉಗ್ರ ದಾಳಿಯೊಂದನ್ನು ನಡೆಸಬಹುದೆಂಬ ಎಚ್ಚರಿಕೆಯನ್ನೂ ಸಹ ಈ ಗುಪ್ತ ಸೂಚನೆಯ ಜೊತೆಯಲ್ಲಿ ನೀಡಲಾಗಿತ್ತು.
ಇಷ್ಟೆಲ್ಲಾ ಮುನ್ಸೂಚನೆ ಲಭಿಸಿದ್ದ ಹೊರತಾಗಿಯೂ ಪುಲ್ವಾಮ ದಾಳಿ ಯಾಕೆ ಆಯಿತು. ಹಾಗಾದರೆ ಇದು ನಿಜವಾಗಿಯೂ ನಮ್ಮ ‘ಗುಪ್ತಚರ ವೈಫಲ್ಯವೇ’? ಎಂಬೆಲ್ಲಾ ಪ್ರಶ್ನೆಗಳು ನಮ್ಮನ್ನು ಕಾಡುವುದು ಸಹಜವೇ. ಆದರೆ ಇದಕ್ಕೊಂದು ಸಮಜಾಯಿಷಿಯನ್ನು ಜಮ್ಮು ಕಾಶ್ಮೀರದ ಪೊಲೀಸ್ ಅಧಿಕಾರಿಗಳು ನೀಡುತ್ತಾರೆ. ಅದೇನೆಂದರೆ ಗುಪ್ತಚರ ಮಾಹಿತಿಗಳ ಪ್ರಕಾರ
ಆತ್ಮಾಹುತಿ ದಾಳಿ ನಡೆಯಬಹುದಾದ ಸಾಧ್ಯತೆಗಳಿದ್ದಿದ್ದು ಫೆಬ್ರವರಿ 9 ರಿಂದ 11 ರ ನಡುವೆ. ಫೆಬ್ರವರಿ 09 ಸಂಸತ್ ದಾಳಿಯ ಸೂತ್ರದಾರ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ್ದ ದಿನವಾದರೆ ಫೆ.11 ಜೆ.ಕೆ.ಎಲ್.ಎಫ್. ಸಂಸ್ಥಾಪಕ ಮುಕ್ಬೂಲ್ ಭಟ್ ನನ್ನು ಗಲ್ಲಿಗೇರಿಸಿದ್ದ ದಿನವಾಗಿತ್ತು. ಈ ಎರಡು ದಿನಗಳಲ್ಲಿ ಭೀಕರ ಉಗ್ರದಾಳಿ ನಡೆಯಬಹುದೆನ್ನುವ ಶಂಕೆಯಲ್ಲಿ ಭದ್ರತಾ ಪಡೆಗಳು ಹೈ ಅಲರ್ಟ್ ಸ್ಥಿತಿಯಲ್ಲೇ ಇದ್ದವು ಆದರೆ ಈ ಎರಡು ದಿನಗಳಲ್ಲಿ ಸುಮ್ಮನಿದ್ದ ಉಗ್ರರು ಫೆಬ್ರವರಿ 14ನ್ನು ತಮ್ಮ ಆತ್ಮಾಹುತಿ ದಾಳಿಗೆ ಆಯ್ದುಕೊಂಡರು ಮತ್ತು ತಮ್ಮ ದಾಳಿ ಯೋಜನೆಯನ್ನು ಸುಸೂತ್ರವಾಗಿ ನೆರವೇರಿಸಿಕೊಂಡು 40ಕ್ಕೂ ಹೆಚ್ಚು ಸಿ.ಆರ್.ಪಿ.ಎಫ್. ಜವಾನರ ಪ್ರಾಣಗಳನ್ನು ಬಲಿ ಪಡೆದುಕೊಂಡರು. ನಮ್ಮ ಭದ್ರತಾ ವ್ಯವಸ್ಥೆಗೆ ಹಾಗೂ ಗುಪ್ತಚರ ಇಲಾಖೆಗೆ ಸಾಕಷ್ಟು ಮುಂಚಿತವಾಗಿಯೇ ಆತ್ಮಾಹುತಿ ದಾಳಿಯ ಸೂಚನೆಯೊಂದು ಸಿಕ್ಕಿದ್ದರೂ ಅದರ ತೀವ್ರತೆಯನ್ನು ಅರಿತುಕೊಳ್ಳುವಲ್ಲಿ ಅವುಗಳು ಸೋತವೆಂದೇ ಭಾವಿಸಬೇಕಾಗುತ್ತದೆ.