Advertisement

ಕುಲ್ಗಾಂವ್‌ ನಲ್ಲಿ ಕಾರ್ಯಾಚರಣೆ : ಮತ್ತಿಬ್ಬರು ಉಗ್ರರು ಫಿನಿಶ್‌

05:20 AM Jun 25, 2018 | Karthik A |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ಮುಂದುವರಿದಿದೆ. ಕುಲ್ಗಾಂವ್‌ ನಲ್ಲಿ ವಿವಿಧ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಲಷ್ಕರ್‌ -ಎ-ತೊಯ್ಬಾ ಸಂಘಟನೆಯ ಇಬ್ಬರು ಉಗ್ರಗಾಮಿಗಳನ್ನು ಕೊಲ್ಲಲಾಗಿದೆ. ಈ ಪೈಕಿ ಒಬ್ಟಾತ ಸಂಘಟನೆಯ ವಿಭಾಗೀಯ ಕಮಾಂಡರ್‌ ಶಕೂರ್‌ ಅಹ್ಮದ್‌ ದರ್‌. ಮತ್ತೂಬ್ಬ ಉಗ್ರ ಶರಣಾಗಿದ್ದಾನೆ. ಈ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಭದ್ರತಾ ಪಡೆಗಳೊಂದಿಗೆ ಸ್ಥಳೀಯರು ಘರ್ಷಣೆಗೆ ಇಳಿದಿದ್ದಾರೆ. ಸಿಬಂದಿಯತ್ತ ಹಲವರು ಕಲ್ಲೆಸೆತ ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಸೇನೆ ಗುಂಡು ಹಾರಿಸಿದ್ದರಿಂದ ಗಂಭೀರವಾಗಿ ಗಾಯಗೊಂಡ ಯುವಕನೊಬ್ಬ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ.

Advertisement

ಶರಣಾಗಲು ಸಲಹೆ: ಉಗ್ರರತ್ತ ಗುಂಡು ಹಾರಿಸುವ ಮೊದಲು ಶರಣಾಗುವಂತೆ ಸೂಚಿಸಲಾಗಿತ್ತು. ಇದರ ಹೊರತಾಗಿಯೂ ಅವರು ಗುಂಡು ಹಾರಿಸಿದರು ಎಂದು ಐಜಿಪಿ ಎಸ್‌.ಪಿ.ವೇದ್‌ ಟ್ವೀಟ್‌ ಮಾಡಿದ್ದಾರೆ. ಶರಣಾದ ಮೂರನೇ ಉಗ್ರನ ಬಳಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಇದ್ದವು.

ಇಬ್ಬರ ಬಂಧನ: ಉಗ್ರ ಸಂಘಟನೆ ಹಿಜ್ಬುಲ್‌ ಮುಜಾಹಿದೀನ್‌ ಪರವಾಗಿ ಕೆಲಸ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಅನಂತನಾಗ್‌ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಅವರ ಬಳಿಯಲ್ಲಿದ್ದ ಸಜೀವ ಗ್ರೆನೇಡ್‌ ವಶಪಡಿಸಿಕೊಳ್ಳಲಾಗಿದೆ.

ಮುಂದುವರಿಕೆ: ಕಣಿವೆ ರಾಜ್ಯದಲ್ಲಿ ಉಗ್ರರನ್ನು ಸದೆ ಬಡಿಯುವ ಕಾರ್ಯಕ್ರಮ ಮುಂದುವರಿಯುತ್ತಿದ್ದರೂ, ಹೊಸದಾಗಿ ವಿವಿಧ ಉಗ್ರ ಸಂಘಟನೆಗಳಿಗೆ ಸೇರ್ಪಡೆಯಾಗಿರುವ ಯುವಕರನ್ನು ಮನವೊಲಿಸಿ ಮತ್ತೆ ಮುಖ್ಯವಾಹಿನಿಗೆ ಸೇರಿಸುವ ಕಾರ್ಯ ಮುಂದುವರಿಯಲಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ಎಸ್‌.ಪಿ.ವೇದ್‌ ತಿಳಿಸಿದ್ದಾರೆ.

ನುಸುಳಲು 250 ಉಗ್ರರು ಸಿದ್ಧ: ಕಾಶ್ಮೀರದಲ್ಲಿ 250ಕ್ಕೂ ಹೆಚ್ಚು ಉಗ್ರರು ಸಕ್ರಿಯವಾಗಿದ್ದು, LOCಯಾಚೆಯೂ 250ರಷ್ಟು ಉಗ್ರರು ದೇಶದೊಳಕ್ಕೆ ನುಸುಳಲು ಸಿದ್ಧರಾಗಿ ಕುಳಿತಿದ್ದಾರೆ ಎಂದು ಸೇನೆ ತಿಳಿಸಿದೆ. ಶ್ರೀನಗರದಲ್ಲಿ ಪೊಲೀಸರ ಜೊತೆಗೆ NSGಯನ್ನೂ ಸದ್ಯವೇ ನಿಯೋಜಿಸಲಿದ್ದೇವೆ ಎಂದೂ ಹೇಳಿದೆ.

Advertisement

ಕಮಾಂಡೋ ಆಯ್ಕೆಗೆ ಮಾನಸಿಕ ಪರೀಕ್ಷೆ: ರಾಷ್ಟ್ರೀಯ ಭದ್ರತಾ ದಳ (NSG) ಹೊಸ ಕಮಾಂಡೋಗಳ ನೇಮಕಾತಿ ವೇಳೆ ಅಭ್ಯರ್ಥಿಗಳ ಮಾನಸಿಕ ಸ್ಥಿತಿಗತಿ ಪರೀಕ್ಷೆಯನ್ನೂ ನಡೆಸಲು ನಿರ್ಧರಿಸಿದೆ. ಬ್ಲ್ಯಾಕ್‌ ಕ್ಯಾಟ್‌ ಕಮಾಂಡೋಗಳಿಗೆ ಈವರೆಗೆ ಕಠಿನ ದೈಹಕ ಹಾಗೂ ಮಾನಸಿಕ ಸಾಮರ್ಥ್ಯ ಪರೀಕ್ಷೆಯನ್ನಷ್ಟೇ ನಡೆಸಲಾಗುತ್ತಿತ್ತು. ಇನ್ನು ಕಮಾಂಡೋ ಕನ್ವರ್ಷನ್‌ ಕೋರ್ಸ್‌ನ 3 ತಿಂಗಳ ಅವಧಿಯಲ್ಲಿ ಅಭ್ಯರ್ಥಿಗಳಿಗೆ ವಿವಿಧ ರೀತಿಯ ಪ್ರಶ್ನೆಗಳನ್ನು ಕೇಳಿ, ಇವರ ಮಾನಸಿಕ ಸ್ಥಿತಿಗತಿಯನ್ನು ಪರೀಕ್ಷಿಸಲಾಗುತ್ತದೆ.

ಹಿಟ್‌ ಲಿಸ್ಟ್‌ನಲ್ಲಿದ್ದವನೇ ಈ ದರ್‌
ಇತ್ತೀಚೆಗೆ ಭದ್ರತಾ ಪಡೆ ಬಿಡುಗಡೆ ಮಾಡಿದ 21 ಮಂದಿ ಮೋಸ್ಟ್‌ ವಾಂಟೆಡ್‌ ಉಗ್ರರ ಪಟ್ಟಿಯಲ್ಲಿದ್ದವನೇ ಶಕೂರ್‌ ಅಹ್ಮದ್‌ ದರ್‌. ರವಿವಾರ ನಡೆದ ಎನ್‌ಕೌಂಟರ್‌ ನಲ್ಲಿ ದರ್‌ ನನ್ನು ಹತ್ಯೆಗೈಯ್ಯುವ ಮೂಲಕ ಹಿಟ್‌ಲಿಸ್ಟ್‌ ನಲ್ಲಿದ್ದ ಒಬ್ಬನನ್ನು ಸದೆಬಡಿದಂತಾಗಿದೆ. ತೆಂಗ್‌ಪೋರಾ ನಿವಾಸಿಯಾಗಿದ್ದ ದರ್‌ 2016ರ ಸೆಪ್ಟಂಬರ್‌ನಲ್ಲಿ ಲಷ್ಕರ್‌ ಸೇರಿದ್ದ. ಇವನು ಲಷ್ಕರ್‌ ನ ಎ+ ಕೆಟಗರಿಯ ಉಗ್ರ. ಈತನೊಂದಿಗೆ ಹತ್ಯೆಯಾದ ಇನ್ನೊಬ್ಬನ ಗುರುತು ಪತ್ತೆಯಾಗಿಲ್ಲ. ಆತ ಪಾಕಿಸ್ತಾನಿಯಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮೆಹಬೂಬಾ ತಿರುಗೇಟು
ಈ ನಡುವೆ ಬಿಜೆಪಿ- ಪಿಡಿಪಿ ನಡುವೆ ವಾಗ್ವಾದವೂ ಬಿರುಸಾಗಿದೆ. ಜಮ್ಮು ಭಾಗವನ್ನು ಅಭಿವೃದ್ಧಿಯಲ್ಲಿ ನಿರ್ಲಕ್ಷಿಸಲಾಗಿತ್ತು ಎಂದು ಶನಿವಾರ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮಾಡಿದ್ದ ಆರೋಪಕ್ಕೆ ತಿರುಗೇಟು ನೀಡಿರುವ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ, ‘ಮೈತ್ರಿ ಕೂಟದಿಂದ ಹೊರ ಬರುವ ಮೂಲಕ ಅದುವೇ ಅಭಿವೃದ್ಧಿಯನ್ನು ನಿರಾಕರಿಸಿದೆ. ಜಮ್ಮು ಮತ್ತು ಲಡಾಖ್‌ ವಲಯಕ್ಕೆ ಸಂಬಂಧಿಸಿದಂತೆ ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಎಸಗಲಾಗಿದೆ ಎಂಬ ಆರೋಪವೇ ಸರಿಯಲ್ಲ. 2014ರಲ್ಲಿ ಉಂಟಾದ ಪ್ರವಾಹ, ಉಗ್ರರ ದಾಳಿಯಿಂದಾಗಿ ಕಾಶ್ಮೀರ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿತ್ತು’ ಎಂದು ಟ್ವೀಟ್‌ ಮಾಡಿದ್ದಾರೆ. ಈ ಬಗ್ಗೆ ನಮ್ಮ ಮಾಜಿ ಪಾಲುದಾರ ಪಕ್ಷವು ಹಲವು ಗಂಭೀರ ಆರೋಪಗಳನ್ನು ಮಾಡಿದೆೆ. ಬಿಜೆಪಿ ನಾಯಕ ರಾಮ್‌ ಮಾಧವ್‌ ನೇತೃತ್ವದಲ್ಲಿ ಅವರದ್ದೇ ಪಕ್ಷದ ಹಿರಿಯ ನಾಯಕರ ಅನುಮತಿಯೊಂದಿಗೇ ಮೈತ್ರಿ ಕೂಟದ ಎಲ್ಲ ನಿಯಮಗಳಿಗೆ ಒಪ್ಪಿಗೆ ಸೂಚಿಸಲಾಗಿತ್ತು ಎಂದು ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next