Advertisement
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟ 350ಕ್ಕೂ ಅಧಿಕ ಸಂಖ್ಯೆಯ ಸ್ಥಾನಗಳನ್ನು ಗೆದ್ದು ಅಭೂತಪೂರ್ವ ಜಯ ಸಾಧಿಸಿದೆ. ಬಿಜೆಪಿಯೊಂದೇ 303 ಸ್ಥಾನಗಳಲ್ಲಿ ಜಯಭೇರಿ ಬಾರಿಸಿ 2014ರ ತನ್ನ ನಿರ್ವಹಣೆಯನ್ನು ಉತ್ತಮಪಡಿಸಿಕೊಂಡಿದೆ. ಈ ಸಾಧನೆಯನ್ನು ಇಂದಿರಾ ಗಾಂಧಿ ಹಾಗೂ ರಾಜೀವ ಗಾಂಧಿಯವರ ಕಾಂಗ್ರೆಸ್ ಯುಗಕ್ಕೆ ಸರಿಸಮನಾದ ಜಯವೆಂಬಂತೆ ಮಾಧ್ಯಮಗಳು ಬಿಂಬಿಸಿವೆ. ನರೇಂದ್ರ ಮೋದಿಯವರ ಸಮರ್ಥ ನಾಯಕತ್ವವೇ ಸತತ ಎರಡನೇ ಬಾರಿಗೆ ಈ ಜಯವನ್ನು ತಂದುಕೊಟ್ಟಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಅರ್ಥಾತ್ ಮೋದಿಯವರ ನಾಯಕತ್ವವನ್ನು ಹಾಗೂ ಅವರು ಮುನ್ನಡೆ ಸುತ್ತಿರುವ ಭಾರತೀಯ ಜನತಾ ಪಾರ್ಟಿಯ ತತ್ವಗಳನ್ನು ಬಹುತೇಕ ಮಂದಿ ಒಪ್ಪಿಕೊಂಡಿದ್ದಾರೆ ಎಂದರೆ ತಪ್ಪಾಗಲಾರದು. ಏಕೆಂದರೆ ಮೋದಿಯವರು ಐದು ವರ್ಷದಲ್ಲಿ ತಂದ ಅನೇಕ ಕ್ರಾಂತಿಕಾರಿ ಸುಧಾರಣೆಗಳನ್ನು ಒಪ್ಪಿಕೊಂಡು ನಾಯಕತ್ವ ಹಾಗೂ ಪಕ್ಷದ ಬಗ್ಗೆ ಭರವಸೆಯನ್ನಿಟ್ಟಿದ್ದಾರೆ ಎನ್ನುವುದು ಈ ಚುನಾವಣಾ ಫಲಿತಾಂಶದಿಂದ ವ್ಯಕ್ತವಾಗುತ್ತದೆ. ಇದರಿಂದ ಪಕ್ಷದ ಹೊಣೆ ಗಾರಿಕೆಯು ಹೆಚ್ಚಾಗಿದೆ ಎಂದು ಬೇರೆ ಹೇಳಬೇಕಾಗಿಲ್ಲ. ಹಾಗೆ ಬೆಂಬಲಿಸಿದವರ ನಿರೀಕ್ಷೆಗೆ ತಕ್ಕಂತೆ ಆಶ್ವಾಸನೆಗಳನ್ನು ಈಡೇರಿಸುವ ದೃಢ ಸಂಕಲ್ಪ ಮಾಡಬೇಕಾದ ಅನಿವಾರ್ಯತೆ ಪಕ್ಷಕ್ಕೆ ಪ್ರಾಪ್ತವಾಗಿದೆ.
Related Articles
Advertisement
ಇದು ಸಾಲದೆಂಬಂತೆ ಕಾಶ್ಮೀರಿ ನೆಲವನ್ನು ಉಗ್ರರ ನೆಲೆಯಾಗಿ ಪರಿವರ್ತಿತವಾಗುವಂತೆ ಮಾಡಲು ಪಾಕಿಸ್ತಾನಕ್ಕೆ ಅಲ್ಲಿನ ಸರಕಾರ ಸಹಾಯ ಮಾಡುತ್ತಿದೆ. ಉಗ್ರರ ವಿಧ್ವಂಸಕಾರಿ ಚುಟುವಟಿಕೆಗಳ ಬಗ್ಗೆ ದೇಶ ವಿದೇಶದ ಬುದ್ಧಿಜೀವಿಗಳು ಖೇದ ವ್ಯಕ್ತಪಡಿಸುತ್ತಿದ್ದಾರೆ. ಇದು ವಿಶ್ವವೇ ತಿಳಿದ ವಿಷಯ. ನಮ್ಮ ಪ್ರಧಾನಿಯವರು ಉಗ್ರರ ವಿರುದ್ಧದ ಹೋರಾಟಕ್ಕೆ ಬೆಂಬಲ ಪಡೆಯಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿಯಾಗಿದ್ದಾರೆ. ಗುಪ್ತವಾಗಿ ಉಗ್ರರನ್ನು ಸಲಹುವ ಪಾಕಿಸ್ತಾನಕ್ಕೆ ಅಮೆರಿಕ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಕುಖ್ಯಾತ ಉಗ್ರ ಮಸೂದ್ ಅಜರ್‌ನನ್ನು ಉಗ್ರರ ಪಟ್ಟಿಗೆ ಸೇರಿಸಲು ಒಂದಲ್ಲ ಒಂದು ನೆಪವನ್ನು ಒಡ್ಡಿ ಹಿಂದೇಟು ಹಾಕುತ್ತಿದ್ದ ಚೈನಾ ಕೂಡಾ ಈಗ ಒಪ್ಪಿದೆ ಎಂದರೆ ಅದು ನರೇಂದ್ರ ಮೋದಿಯವರ ಅಂತರಾಷ್ಟ್ರೀಯ ವ್ಯವಹಾರ ತಜ್ಞತೆ ಎಂದೇ ಶ್ಲಾಘಿಸಬೇಕಾಗಿದೆ. ಒಟ್ಟಿನಲ್ಲಿ ಉಗ್ರರ ವಿರುದ್ಧದ ಹೋರಾಟಕ್ಕೆ ಈಗ ವ್ಯಾಪಕ ಬೆಂಬಲ ಸಿಕ್ಕಿದೆ.
ವಸ್ತುಸ್ಥಿತಿ ಹೀಗಿರುವಾಗ ಆರ್ಟಿಕಲ್ 370ರ ಬಲದಲ್ಲಿ ಪ್ರತ್ಯೇಕ ಆಡಳಿತ ನಡೆಸುತ್ತ ಉಗ್ರರನ್ನು ಪೋಷಿಸುವ ಜಮ್ಮು – ಕಾಶ್ಮೀರದ ಈಗಿನ ಆಡಳಿತ ಪದ್ಧತಿಯನ್ನು ಪ್ರಸ್ತಾಪಿತ ಕಲಂನ್ನು ರದ್ದು ಪಡಿಸುವುದರ ಮೂಲಕ ಕೊನೆಗಾಣಿಸಲೇ ಬೇಕಾಗಿದೆ. ಭಾರತೀಯ ಸಂವಿಧಾನದ ಪರಿಚ್ಛೇದ 368ರಲ್ಲಿ ಸಂವಿಧಾನದ ಯಾವುದೇ ಕಲಂನ್ನು ಸಂಪೂರ್ಣ ಅಥವಾ ಭಾಗಶಃ ತೊಡೆದು ಹಾಕುವ ಯಾ ಸೇರ್ಪಡೆಗೊಳಿಸುವ ಅಧಿಕಾರ ಸಂಸತ್ತಿಗೆ ದತ್ತವಾಗಿದೆ. ಆದರೆ ಅದಕ್ಕೆ ಪ್ರತ್ಯೇಕ ವಿಧಿ ವಿಧಾನಗಳಿವೆ. ಇಂಥ ಸಂವಿಧಾನಿಕ ಪ್ರಸ್ತಾಪಗಳ ಅನುಮೋದನೆಗಳು ಉಭಯ ಸದನಗಳಲ್ಲಿ ಮೂರನೇ ಎರಡು ಬಹುಮತದಲ್ಲಿ ಮಂಜೂರು ಆಗಬೇಕಾಗುತ್ತದೆ. ಈಗ ಹಿಂದಿನೆಲ್ಲ ಸಂದರ್ಭಗಳಿಗಿಂತಲೂ ಅನೂಕೂಲವಾದ ವಾತಾವರಣ ಈಗಿನ ಬಿಜೆಪಿ ನೇತೃತ್ವದ ಸರಕಾರಕ್ಕಿದೆ ಎಂದರೆ ಅವಸರದ ಹೇಳಿಕೆ ಆಯಾಗಬಹುದು. 542 ಸ್ಥಾನಗಳಿರುವ ಲೋಕಸಭಾ ಸದನದಲ್ಲಿ ಮೂರನೇ ಎರಡು ಬಹುಮತವೆಂದರೆ 361. ಇತ್ತ ಬಿಜೆಪಿ ನೇತೃತ್ವದ ಎನ್‌ಡಿಎಗೆ 2019ರ ಚುನಾವಣೆಯಲ್ಲಿ 356 ಸ್ಥಾನಗಳು ಲಭಿಸಿವೆ. ಲೋಕಸಭೆಯಲ್ಲಿ ಪ್ರಸ್ತಾಪ ಸಲಿಸಾಗಿ ಮಂಜೂರಾಗುವುದರಲ್ಲಿ ಯಾವ ಸಂದೇಹವಿಲ್ಲ. ಆದರೆ ರಾಜ್ಯಸಭೆಯಲ್ಲಿ ಬಿಜೆಪಿಗೆ ಬೇಕಾದ ಬಹುಮತ ಇಲ್ಲವೆ.
ಈಗಾಗಲೇ ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ಮತ್ತು ರಾಷ್ಟ್ರೀಯ ಪೌರತ್ವ ನೀತಿಗೆ ಸಂಬಂಧಿಸಿದ ಮಸೂದೆಗಳು ಅನುಮೋದನೆಗೊಳ್ಳದೆ ನನೆಗುದಿಗೆ ಬಿದ್ದಿವೆ. ಆರ್ಟಿಕಲ್ 370ರ ರದ್ದತಿಯ ಪ್ರಸ್ತಾಪವನ್ನು ಹೀಗಾಗಲು ಬಿಡಬಾರದು. ಪ್ರಸ್ತಾಪದ ಪ್ರಾಮುಖ್ಯತೆಯನ್ನು ಮನಗಾಣುವಂತೆ ವಿರೋಧ ಪಕ್ಷದವರನ್ನು ಒತ್ತಾಯಿಸಬೇಕಾದ ಅಗತ್ಯವಿದೆ. ಇಲ್ಲಿ ಸಾರ್ವಜನಿಕರು ರದ್ದತಿಯ ಪರವಾಗಿ ಧ್ವನಿ ಎತ್ತಿ ಎಲ್ಲ ಪಕ್ಷದ ಚುನಾಯಿತ ಪ್ರತಿನಿಧಿಗಳನ್ನು ಜಾಗೃತಗೊಳಿಸಬೇಕಾದ ಅನಿವಾರ್ಯತೆ ಇದೆ. ಯಾಕೆಂದರೆ ನಮ್ಮದು ಒಕ್ಕೂಟ ಸ್ವರೂಪದ ಪ್ರಜಾಸತ್ತೆ. ಕೆಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಆಡಳಿತ ನಡೆಸುತ್ತಿವೆ. ಒಕ್ಕೂಟ ಪದ್ಧತಿಯಲ್ಲಿಯೂ ರಾಜ್ಯಗಳು ರಾಷ್ಟ್ರದ ಹಿತಕ್ಕೆ ಧಕ್ಕೆಯಾಗದಂತೆ ಆಡಳಿತ ನಡೆಸಬೇಕಾದ ಜವಾಬ್ದಾರಿ ಇದೆ. ದೇಶದ ಹಿತದೃಷ್ಟಿಯಿಂದ ಈ ಪ್ರಾದೇಶಿಕ ಪಕ್ಷಗಳು ಲೋಕಸಭೆಯಲ್ಲಿ ತಾವು ಹೊಂದಿದ ಸ್ಥಾನ ಬಲದ ವರ್ಚಸ್ಸನ್ನು ಆರ್ಟಿಕಲ್ 370ರ ರದ್ದತಿಯ ಪ್ರಸ್ತಾಪಕ್ಕೆ ಬೀರುವ ಸಂಕಲ್ಪ ಮಾಡಬೇಕಾಗಿದೆ. ಈ ಬಗ್ಗೆ ಪ್ರಸಕ್ತ ಎನ್‌ಡಿಎ ಸರಕಾರ ಪ್ರಸ್ತಾಪ ಅನುಮೋದನೆಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿ ತಾನು ನೀಡಿದ ಭರವಸೆಯನ್ನು ಕಾರ್ಯರೂಪಕ್ಕೆ ತರಲಿ.
• ಬೇಳೂರು ರಾಘವ ಶೆಟ್ಟಿ