ಬೆಂಗಳೂರು: ಜಮ್ಮು ಕಾಶ್ಮೀರ ಹಾಗೂ ಲಡಾಕ್ ಕೇಂದ್ರಾಡಳಿತ ಪ್ರದೇಶದಲ್ಲಿ ಅಕ್ಟೋಬರ್ 31ರಿಂದ ಭಾರತೀಯ ಸಂವಿಧಾನದಂತೆ ಆಡಳಿತ ಆರಂಭವಾಗಲಿದೆ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಜಿ.ಕಿಶಾನ್ ರೆಡ್ಡಿ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮ್ಮು ಕಾಶ್ಮೀರದಲ್ಲಿ ಪಂಚಾಯತ್ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಪಂಚಾಯತಿ ಸದಸ್ಯರು ಹಾಗೂ ಅಧ್ಯಕ್ಷರಿಗೆ ಕಾನೂನು ಅನುಷ್ಠಾನ ಹಾಗೂ ಆಡಳಿತದ ಕುರಿತು ಕೇಂದ್ರ ಸರ್ಕಾರದಿಂದಲೇ ತರಬೇತಿ ನೀಡಲು ಕ್ರಮ ತೆಗೆದೊಕೊಳ್ಳುತ್ತಿದ್ದೇವೆ. ಅತಿ ಶೀಘ್ರದಲ್ಲಿ ಎರಡು ಕಡೆಗೆ ಲೆಫ್ಟಿನೆಂಟ್ ಗವರ್ನರ್ ನೇಮಕ ನಡೆಯಲಿದೆ ಎಂದರು.
ಗ್ರಾಮ ಪಂಚಾಯತಿಯಲ್ಲಿ ಮೆರಿಟ್ ಆಧಾರದಲ್ಲಿ ಸರ್ಕಾರಿ ಉದ್ಯೋಗ ನೀಡುವ ಕಾರ್ಯ ನಡೆಯಲಿದೆ. ಸೇನೆ, ಸಿಆರ್ಪಿಎಫ್ ಬಿಎಸೆಫ್ ನಲ್ಲೂ ನೇಮಕಾತಿ ನಡೆಯಲಿದೆ. ಕಣಿವೆಯ ಸೇಬು ಬೆಳಗಾರರಿಗೆ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಶೆ.100ರಷ್ಟು ಲಾಭ ಒದಗಿಸುವ ಉದ್ದೇಶದಿಂದ ಸರ್ಕಾರಿ ವ್ಯವಸ್ಥೆಯ ಮೂಲಕವೇ ಮಾರುಕಟ್ಟೆ ವ್ಯವಸ್ಥೆ ಮಾಡಲಿದ್ದೇವೆ ಎಂದರು. ಜಮ್ಮು ಮತ್ತು ಕಾಶ್ಮೀರದಲ್ಲಿರುವ ದೇವಸ್ಥಾನ ಎಷ್ಟು ದೇವಸ್ಥಾನ ಸುಸಜ್ಜಿತವಾಗಿದೆ, ಎಷ್ಟು ನಾಶವಾಗಿದೆ ಮತ್ತು ಇದೆ ಮಾದರಿಯಲ್ಲಿ ಎಷ್ಟು ಶಾಲೆ ಹಾಗೂ ಸಿನಿಮಾ ಮಂದಿರಗಳ ಸರ್ವೇ ಕಾರ್ಯ ಆರಂಭಿಸಿದೇವೆ ಎಂದರು.
ಬೇಗ ಸಿಗಲಿದೆ ಅನುದಾನ:
ದೇಶದ ವಿವಿಧ ಭಾಗದಲ್ಲಿ ಮಳೆ ಹಾನಿ, ಪ್ರವಾಹದಿಂದ ಅಪಾರ ಹಾನಿಯಾಗಿದೆ. ಎಲ್ಲಾ ರಾಜ್ಯಗಳ ಮಾಹಿತಿ ಪಡೆಯುತ್ತಿದ್ದೇವೆ. ರಾಜ್ಯದಲ್ಲಿ ಇರುವ ನಿಧಿ ಬಳಕೆ ಆಗುತ್ತಿದೆ. ಕೇಂದ್ರದಿಂದ ಅತಿ ಶೀಘ್ರದಲ್ಲಿ ಅನುದಾನದ ಮರು ಪಾವತಿ ಜತಗೆ ವಿಶೇಷ ಅನುದಾನ ಬಿಡುಗಡೆಯಾಗಲಿದೆ. ಎಲ್ಲಾ ರಾಜ್ಯದಿಂದ ವರದಿ ಪಡೆಯುತ್ತೇವೆ ಎಂದರು.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್, ಎಂ ಎಲ್ ಸಿ ನಾರಾಯಣ ಸ್ವಾಮಿ ಹಾಗೂ ಅರವಿಂದ್ ಬೆಲ್ಲದ್, ವಕ್ತಾರ ಡಾ ವಾಮನಾಚಾರ್ಯ ಇದ್ದರು.