ಹೊಸದಿಲ್ಲಿ : ಬಲಪಂಥೀಯ ಸಂಘಟನೆಗಳು ಮತ್ತು ಅವುಗಳ ನಾಯಕರು ಅಲ್ಪ ಸಂಖ್ಯಾಕ ಸಮುದಾಯದ ಸದಸ್ಯರನ್ನು ಗುರಿ ಇರಿಸುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಜಮೀಯತ್ ಉಲಮಾ ಎ ಹಿಂದ್ ಎಂಬ ಮುಂಚೂಣಿ ಇಸ್ಲಾಮಿಕ್ ಸಂಘಟನೆ ಆರ್‌ಎಸ್‌ಎಸ್ ಸ್ಕೌಟ್ ಗೈಡ್ ಮಾದರಿಯಲ್ಲಿ ಮುಸ್ಲಿಮರ ರಕ್ಷಣೆಗಾಗಿ “ಜಮೀಯತ್ ಯೂತ್ ಕ್ಲಬ್’ ರೂಪಿಸಲು ಉದ್ದೇಶಿಸಿದೆ.
ಜಮೀಯತ್ ಯೂತ್ ಕ್ಲಬ್ (ಜೆವೈಸಿ) ಸದಸ್ಯರಿಗೆ ಸ್ವರಕ್ಷಣೆ ಕಲೆಯಲ್ಲಿ ತರಬೇತಿ ನೀಡಿ ಅವರನ್ನು ಮುಸ್ಲಿಮರ ರಕ್ಷಣೆಗೆ ತೊಡಗಿಸುವುದು ಜಮೀಯತ್ ಉಲಮಾ ಎ ಹಿಂದ್ ಸಂಘಟನೆಯ ಕಾರ್ಯಯೋಜನೆಯಾಗಿದೆ.
ಮೊದಲ ಹಂತದಲ್ಲಿ, ಮುಂದಿನ ಆರು ತಿಂಗಳೊಳಗೆ ಕನಿಷ್ಠ 10,000 ಮುಸ್ಲಿಂ ಯುವಕರಿಗೆ ಜೈವೈಸಿ ಸದಸ್ಯತ್ವ ನೀಡಿ ಸ್ವರಕ್ಷಣೆ ಕಲೆಯಲ್ಲಿ ತರಬೇತುಗೊಳಿಲು ಜಮೀಯತ್ ಉಲಮಾ ಎ ಹಿಂದ್ ಉದ್ದೇಶಿಸಿದೆ.
ಜೆವೈಸಿ ಪ್ರದರ್ಶನವನ್ನು ದೇವಬಂದ್ ಫಿರ್‌ದೋಸ್ ಗಾರ್ಡನ್ ನಲ್ಲಿ ಉದ್ಘಾಟಿಸಲಾದಾಗ ಜಮೀಯತ್ ಎ ಹಿಂದ್ ಪ್ರಧಾನ ಕಾರ್ಯದರ್ಶಿ ಮೌಲಾನಾ ಮಹಮೂದ್ ಮದನಿ ಅವರು ಮುಂದಿನ ಕಾರ್ಯ ವೈಖರಿ ಹಾಗೂ ಕಾರ್ಯ ವಿಧಾನದ ವಿವರಗಳನ್ನು ನೀಡಿದರು. 2019ರ ಫೆಬ್ರವರಿಯೊಳಗೆ 10,000 ಮುಸ್ಲಿಮ್ ಯುವಕರನ್ನು ಒಳಗೊಂಡ ಜಮೀಯತ್ ಯೂತ್ ಕ್ಲಬ್ ರೂಪಿಸುವ ಗುರಿ ಇರುವುದಾಗಿ ಪ್ರಕಟಿಸಿದರು.
ಈ ಸಂದರ್ಭದಲ್ಲಿ ಗುಜರಾತ್, ಹರಿಯಾಣ ಮತ್ತು ಉತ್ತರ ಪ್ರದೇಶದಿಂದ ಬಂದ 96 ಜೆವೈಸಿ ಸದಸ್ಯರು ಉಪಸ್ಥಿತರಿದ್ದರಲ್ಲದೆ ಸ್ವರಕ್ಷಣೆ ಕಲೆಯಲ್ಲಿನ ಅವರ ಪ್ರತಿಭೆಯನ್ನು ಪ್ರದರ್ಶಿಸಲಾಯಿತು.