ಹೊಸದಿಲ್ಲಿ: ಇಲ್ಲಿನ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಯೋರ್ವನಿಗೆ ಗುಂಡು ಹಾರಿಸಿದ್ದ ಅಪ್ರಾಪ್ತ ವಯಸ್ಸಿನ ಯುವಕ ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಹತ್ತು ಸಾವಿರ ರೂಪಾಯಿಗೆ ಗನ್ ಖರೀದಿಸಿದ್ದ ಎಂದು ವರದಿಯಾಗಿದೆ.
ಕಳೆದ ಗುರುವಾರ ಈ ಯುವಕ ಜಾಮಿಯಾ ಮಿಲಿಯ ವಿಶ್ವವಿದ್ಯಾಲಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಗುಂಡು ಹಾರಿಸಿದ್ದ. ಇದರಿಂದಾಗಿ ಓರ್ವ ವಿದ್ಯಾರ್ಥಿ ಗಾಯಗೊಂಡಿದ್ದ.
ದೇಶಿಯ ನಿರ್ಮಿತ ಪಿಸ್ತೂಲ್ ನಲ್ಲಿ ಆರೋಪಿ ಗುಂಡು ಹಾರಿಸಿದ್ದ. ಆತನ ಹಳ್ಳಿಯ ಪಕ್ಕದ ಹಳ್ಳಿಯ ವ್ಯಕ್ತಿಯಿಂದ ಹತ್ತು ಸಾವಿರ ರೂ.ಗಳಿಗೆ ಈ ಪಿಸ್ತೂಲ್ ಅನ್ನುಆತ ಖರೀದಿಸಿದ್ದ. ತನ್ನ ಸಂಬಂಧಿಯ ಮದುವೆಯಲ್ಲಿ “ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಾಚರಣೆ” ಮಾಡಲು ತನಗೆ ಗನ್ ಬೇಕು ಎಂದು ಸುಳ್ಳು ಹೇಳಿ ಆತ ಗನ್ ಖರೀದಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದೇಶೀಯ ನಿರ್ಮಿತ ಸಿಂಗಲ್ ಶಾಟ್ ಪಿಸ್ತೂಲ್ ನೊಂದಿಗೆ ಮಾರಾಟಗಾರ ಎರಡು ಬುಲೆಟ್ ಗಳನ್ನು ನೀಡಿದ್ದ. ಆರೋಪಿಯು ಅದರಲ್ಲಿ ಒಂದು ಬುಲೆಟ್ ಬಳಸಿ ಶೂಟ್ ಮಾಡಿದ್ದ. ಮತ್ತೊಂದು ಬಳಕೆಯಾಗದ ಬುಲೆಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಅಪ್ರಾಪ್ತ ವಯಸ್ಕ ಆರೋಪಿಗೆ ಗನ್ ಮಾರಾಟ ಮಾಡಿದ್ದವನನ್ನು ಮತ್ತು ಆತನಿಗೆ ಸಹಾಯ ಮಾಡಿದವನ ಬಗ್ಗೆಯೂ ಮಾಹಿತಿ ಸಂಗ್ರಹಿಸಿದ್ದೇವೆ. ಅವರನ್ನು ವಶಕ್ಕೆ ಪಡೆಯಲಿದ್ದೇವೆ. ಅಪರಾಧಕ್ಕೆ ಪ್ರೋತ್ಸಾಹ ನೀಡಿದ ಆರೋಪದಲ್ಲಿ ವಶಕ್ಕೆ ಪಡೆಯಲಿದ್ದೇವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.