ಅದೊಂದು ಭಾವನಾತ್ಮಕ ಕಾರ್ಯಕ್ರಮ. ಅಲ್ಲಿ ಸಿನಿಮಾ ಮಾತಿಗಿಂತ ವ್ಯಕ್ತಿಯೊಬ್ಬರ ಜೊತೆ ಕಳೆದ ಕ್ಷಣವನ್ನು ಎಲ್ಲರೂ ಮೆಲುಕು ಹಾಕುತ್ತಿದ್ದರು. ಸೂಪರ್‌ಸ್ಟಾರ್ ಆಗಿದ್ದರೂ ಡೌನ್ ಟು ಅರ್ಥ್ ಆಗಿ ಆ ವ್ಯಕ್ತಿ ಬದುಕಿದ ರೀತಿಯನ್ನು ನೆನಪಿಸಿಕೊಳ್ಳುತ್ತಲೇ ಎಲ್ಲರ ಕಣ್ಣಂಚು ಒದ್ದೆಯಾಗುತ್ತಿತ್ತು.
ಹೌದು, ಇಂತಹ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು, “ಜೇಮ್ಸ್’ ಚಿತ್ರದ ಇವೆಂಟ್. ಪುನೀತ್ ರಾಜ್‌ಕುಮಾರ್ ನಟನೆಯ ಕೊನೆಯ ಸಿನಿಮಾ “ಜೇಮ್ಸ್’ ಮಾರ್ಚ್ 17ರಂದು ಬಿಡುಗಡೆಯಾಗು ತ್ತಿದೆ. ಈಗಾಗಲೇ ಸಿನಿಮಾ ಮೇಲೆ ದೊಡ್ಡ ನಿರೀಕ್ಷೆ ಹುಟ್ಟಿದೆ. ಅಭಿಮಾನಿಗಳು ಈ ಸಿನಿಮಾವನ್ನು ಬೇರೆ ಮಟ್ಟಕ್ಕೆ ಕೊಂಡೊಯ್ಯಲು ಕಾತುರರಾಗಿದ್ದಾರೆ.
ಬಿಡುಗಡೆಯ ಪೂರ್ವಭಾವಿಯಾಗಿ ನಡೆದ ಕಾರ್ಯಕ್ರಮದಲ್ಲಿ ಶಿವರಾಜ್‌ಕುಮಾರ್ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಶಿವಣ್ಣ, “ಅಪ್ಪು ಇಲ್ಲ ಅನ್ನೋದನ್ನು ನನಗೆ ಇವತ್ತಿಗೂ ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ದಿನಾ ಎದ್ದು ಶೂಟಿಂಗ್ ಹೋಗುತ್ತೇವೆ, ಊಟ ಮಾಡುತ್ತೇವೆ, ನಗುತ್ತೇವೆ. ಆದರೆ, ಅಪ್ಪು ಇಲ್ಲ ಎಂಬ ನೋವು ಸದಾ ಕಾಡುತ್ತಲೇ ಇದೆ. ಅಪ್ಪುವನ್ನು ನನ್ನ ಆ್ಯಕ್ಟಿಂಗ್‌ನಲ್ಲೂ ತರಲು ಪ್ರಯತ್ನಿಸುತ್ತಿದ್ದೇನೆ. ಇನ್ನು, ಈ ಚಿತ್ರಕ್ಕೆ ಡಬ್ಬಿಂಗ್ ಮಾಡುವಾಗ ತುಂಬಾ ಭಯ ಪಟ್ಟೆ. ಏಕೆಂದರೆ ಅಪ್ಪು ಧ್ವನಿ ಭಿನ್ನವಾಗಿದೆ. ಅವನ ವಾಯ್ಸಗೆ ನನ್ನ ಧ್ವನಿ ಹೊಂದುತ್ತಾ ಎಂದ ತುಂಬಾ ಯೋಚಿಸಿದೆ. ಡಬ್ಬಿಂಗ್‌ನಲ್ಲಿ ಸ್ವಲ್ಪ ಬೇರೆ ತರಹ ಧ್ವನಿ ಕೊಡಲು ಪ್ರಯತ್ನಿಸಿದ್ದೇನೆ’ ಎಂದು ಶುಭ ಕೋರಿದರು.
ಇದನ್ನೂ ಓದಿ:ಪಾಕಿಸ್ಥಾನ-ಆಸ್ಟ್ರೇಲಿಯ ಟೆಸ್ಟ್ ವೇಳೆ ಕೊಹ್ಲಿ ಪೋಸ್ಟರ್!
“ಜೇಮ್ಸ್’ ಚಿತ್ರದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಮಾತನಾಡಿ, “ನಾನು ಅಪ್ಪು ಅವರ ಅಭಿಮಾನಿಯಾಗಿ ಈ ಸಿನಿಮಾ ಮಾಡಿದ್ದೇನೆ. ಈಗ ಅವರಿಲ್ಲದೇ ಈ ಚಿತ್ರ ಬಿಡುಗಡೆ ಮಾಡೋದು ಕಷ್ಟವಾಗುತ್ತಿದೆ’ ಎನ್ನುತ್ತಾ ಭಾವುಕರಾದರು. ನಿರ್ದೇಶಕ ಚೇತನ್, ಪುನೀತ್ ನೀಡಿದ ಸಹಕಾರವನ್ನು ನೆನಪಿಸಿಕೊಂಡರು. ಜೊತೆಗೆ ಇವತ್ತು “ಜೇಮ್ಸ್’ ಕೇವಲ ಒಂದು ಸಿನಿಮಾವಾಗದೇ, ಕನ್ನಡಿಗರ ಭಾವನೆಯಾಗಿ ಪರಿವರ್ತನೆಯಾಗಿದೆ. ಈ ಸಿನಿಮಾವನ್ನು ಸಂಭ್ರಮಿಸಲು ಅಭಿಮಾನಿಗಳು ಅವರವರೇ ತಯಾರಿ ಮಾಡಿಕೊಂಡಿದ್ದಾರೆ ಎನ್ನುತ್ತಾ, ನಿರ್ಮಾಪಕರಿಗೆ, ಡಬ್ಬಿಂಗ್ ಮಾಡಿಕೊಟ್ಟ ಶಿವಣ್ಣ ಸೇರಿದಂತೆ ಚಿತ್ರಕ್ಕೆ ಸಹಕರಿಸಿದ ಎಲ್ಲರಿಗೂ ಚೇತನ್ ಧನ್ಯವಾದ ತಿಳಿಸಿದರು. ಉಳಿದಂತೆ ಚಿತ್ರತಂಡದ ಸದಸ್ಯರೆಲ್ಲರೂ ತಮ್ಮ ಅನುಭವ ಹಂಚಿಕೊಂಡರು.
4000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆ: ಜೇಮ್ಸ್ ಚಿತ್ರ ಮಾರ್ಚ್ 17ರಂದು ಬಿಡುಗಡೆಯಾಗಲಿದ್ದು, 5 ಸಾವಿರಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣಲಿದೆ. ಚಿತ್ರಕ್ಕೆ ದೇಶ-ವಿದೇಶಗಳಲ್ಲಿ ಬೇಡಿಕೆ ಬಂದಿದ್ದು, ಕೆನಡಾ, ಅಮೆರಿಕಾ ಸೇರಿದಂತೆ ಬೇರೆ ಬೇರೆ ದೇಶಗಳಲ್ಲೂ ಚಿತ್ರ ಬಿಡುಗಡೆಯಾಗಲಿದೆ.