Advertisement

ಪುನೀತ್‌ ಬರ್ತ್‌ಡೇ ಬಳಿಕ “ಜೇಮ್ಸ್‌’

10:06 AM Feb 25, 2020 | Lakshmi GovindaRaj |

ಪುನೀತ್‌ರಾಜಕುಮಾರ್‌ ಅಭಿನಯದ “ಜೇಮ್ಸ್‌’ ಶುರುವಾಗಿದ್ದು ಗೊತ್ತೇ ಇದೆ. ಸದ್ಯಕ್ಕೆ ಒಂದೆರೆಡು ಮಾತಿನ ದೃಶ್ಯ ಹಾಗು ಫೈಟ್‌ ಬಿಟ್‌ ಚಿತ್ರೀಕರಣಗೊಂಡಿದ್ದು, ಇದೀಗ ಎರಡನೇ ಹಂತದ ಚಿತ್ರೀಕರಣಕ್ಕೆ ತಯಾರಿ ನಡೆಸಲಾಗಿದೆ. ಹೌದು, “ಬಹದ್ದೂರ್‌’ ಚೇತನ್‌ಕುಮಾರ್‌ ನಿರ್ದೇಶನದ “ಜೇಮ್ಸ್‌’ ಈಗ ಎರಡನೇ ಹಂತದ ಚಿತ್ರೀಕರಣಕ್ಕೆ ರೆಡಿಯಾಗುತ್ತಿದೆ. ಮೊದಲ ಹಂತದಲ್ಲಿ ಚಿಕ್ಕದ್ದೊಂದು ಫೈಟ್‌ ಬಿಟ್‌ ಹಾಗು ಸಣ್ಣ ಮಾತಿನ ಭಾಗದ ದೃಶ್ಯವನ್ನು ಚಿತ್ರೀಕರಿಸಲಾಗಿದೆ.

Advertisement

ಎರಡನೇ ಹಂತದ ಚಿತ್ರೀಕರಣ ಮಾರ್ಚ್‌ 28 ರಿಂದ ನಡೆಯಲಿದೆ. ಬೆಂಗಳೂರಿನಲ್ಲಿ ಸುಮಾರು 10 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಅದಾದ ಬಳಿಕ ಉತ್ತರ ಕರ್ನಾಟಕ ಭಾಗದಲ್ಲಿ 10 ದಿನಗಳ ಕಾಲ ಚಿತ್ರೀಕರಿಸುವ ಯೋಜನೆ ಇದೆ ಎಂಬುದು ನಿರ್ದೇಶಕ “ಬಹದ್ದೂರ್‌’ ಚೇತನ್‌ಕುಮಾರ್‌ ಮಾತು. ಸದ್ಯಕ್ಕೆ ಪುನೀತ್‌ರಾಜಕುಮಾರ್‌ ಅವರು “ಯುವರತ್ನ’ ಚಿತ್ರದ ಡಬ್ಬಿಂಗ್‌ನಲ್ಲಿ ಬಿಝಿಯಾಗಿದ್ದಾರೆ. ಅದಾದ ಬಳಿಕ ಫಾರಿನ್‌ನಲ್ಲಿ ಸಾಂಗ್‌ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಾರ್ಚ್‌ 17 ರಂದು ಅವರ ಬರ್ತ್‌ಡೇ ಮುಗಿಸಿದ ನಂತರ “ಜೇಮ್ಸ್‌’ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನು, ನಾಯಕಿಯ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಕನ್ನಡದ ನಟಿಯರು ಸೇರಿದಂತೆ ಪರಭಾಷೆ ನಟಿಯರಿಗೂ ಹುಡುಕಾಟ ನಡೆದಿದೆ. ಸರಿಯಾಗಿ ಡೇಟ್‌ ಹೊಂದಾಣಿಕೆಯಾಗುತ್ತಿಲ್ಲ. ಇಷ್ಟರಲ್ಲೇ ನಾಯಕಿ ಯಾರು ಎಂಬುದನ್ನು ಬಹಿರಂಗ ಪಡಿಸುತ್ತೇನೆ’ ಎಂದು ವಿವರ ಕೊಡುತ್ತಾರೆ ನಿರ್ದೇಶಕ ಚೇತನ್‌. “ಇದೊಂದು ಪಕ್ಕಾ ಕಮರ್ಷಿಯಲ್‌ ಎಂಟರ್‌ಟೈನರ್‌ ಸಿನಿಮಾ.

ಇಲ್ಲಿಯವರೆಗೆ ಪುನೀತ್‌ ಅವರು ಮಾಡಿದ ಚಿತ್ರಗಳಿಗಿಂತಲೂ ಭಿನ್ನವಾಗಿರುತ್ತೆ. ಪಾತ್ರ ಕೂಡ ಹೊಸ ರೀತಿಯಾಗಿದೆ. ಬಾಡಿಲಾಂಗ್ವೇಜ್‌ ಕೂಡ ಹೊಸತನದಿಂದ ಕೂಡಿದೆ. “ಜೇಮ್ಸ್‌’ ಎಂಬ ಶೀರ್ಷಿಕೆಗೆ ತಕ್ಕದ್ದಾದ ಪಾತ್ರವಿದೆ. ಇಲ್ಲಿನ ಮುಖ್ಯ ಆಕರ್ಷಣೆ ಅಂದರೆ, ಅದು ಹೈವೋಲ್ಟೆಜ್‌ ಆ್ಯಕ್ಷನ್‌. ಪುನೀತ್‌ ಸರ್‌ ಅವರ ವಿಶೇಷ ಸ್ಟಂಟ್ಸ್‌ ಇಲ್ಲಿರಲಿದೆ. ಅವರ ಫ್ಯಾನ್ಸ್‌ಗೆ ವಿಶೇಷತೆಗಳು ತುಂಬಿರಲಿವೆ. ಒಟ್ಟಾರೆ, “ಜೇಮ್ಸ್‌’ ಪಕ್ಕಾ ಮನರಂಜನಾತ್ಮಕವಾಗಿಯೇ ಮೂಡಿಬರಲಿದೆ’ ಎಂಬುದು ಚೇತನ್‌ಕುಮಾರ್‌ ಮಾತು.

ಚಿತ್ರಕ್ಕೆ ಚರಣ್‌ರಾಜ್‌ ಸಂಗೀತವಿದೆ. ಶ್ರೀಷ ಛಾಯಾಗ್ರಹಣವಿದೆ. ರವಿಸಂತೆ ಹೈಕ್ಲು ಕಲಾ ನಿರ್ದೇಶನವಿದೆ. ಕಿಶೋರ್‌ ಪತ್ತಿಕೊಂಡ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಹರ್ಷ ಅವರ ನೃತ್ಯ ನಿರ್ದೇಶನವಿದೆ. ದೀಪು ಎಸ್‌.ಕುಮಾರ್‌ ಅವರ ಸಂಕಲನ ಚಿತ್ರಕ್ಕಿದೆ. ಉಳಿದಂತೆ “ಜೇಮ್ಸ್‌’ನಲ್ಲಿ ಯಾರೆಲ್ಲಾ ಇರುತ್ತಾರೆ ಎಂಬುದನ್ನೂ ಇಷ್ಟರಲ್ಲೇ ಹೇಳುತ್ತೇನೆ ಎಂದು ಸುಮ್ಮನಾಗುತ್ತಾರೆ ಚೇತನ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next