ಹುಬ್ಬಳ್ಳಿ: ಸಚಿವ ಜಮೀರ್ ಅಹ್ಮದ ಅವರು ದೊಡ್ಡ ಶ್ರೀಮಂತರು. ಪ್ರಧಾನಿ ಬಗ್ಗೆ ಕೂಡ ಏಕವಚನದಲ್ಲಿ ಮಾತನಾಡುತ್ತಾರೆ. ಜಮೀರ್‌ಗೆ ಹಣ-ಅಧಿಕಾರ ಮದ ಹೆಚ್ಚಾಗಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು. ದೇವನೂರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಇರುವ ಸಮಯ ಹಾಗೂ ವಯಸ್ಸಿದ್ದಾಗ ತಗ್ಗಿ ಬಗ್ಗಿ ನಡೆಯಬೇಕು. ಇದು ಬಹಳ ದಿನ ನಡೆಯೋಲ್ಲ. ಜಮೀರ್ ಅವರು ಇನ್ನೂ ಬೆಳೆಯಬೇಕಿದ್ದು, ಸಮಾಜ ಏಳ್ಗೆ ಆಗಬೇಕಾದರೆ ತಾಳ್ಮೆ ಅವಶ್ಯ. ಜಮೀರ್ ಅವರು ಹಣದಿಂದ ರಾಜಕಾರಣ ಮಾಡುತ್ತಿದ್ದಾರೆ. ಶಕ್ತಿವಂತರಾಗಿ ಬೆಳೆದಾಗ ತಲೆ ಬಗ್ಗಿಸಿ ರಾಜಕಾರಣ ಮಾಡಬೇಕು. ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಜಮೀರ್‌ಗೆ ಶೋಭೆ ತರಲ್ಲ ಎಂದು ಶ್ರೀರಾಮುಲು ಹೇಳಿದರು.
ಅಭಿವೃದ್ಧಿ ಮಾಡಬೇಕಾದ ಸರ್ಕಾರ ಕೈಚೆಲ್ಲಿ ಕುಳಿತಿದೆ:
ಕುಂದಗೋಳ ತಾಲೂಕಿನ ದೇವನೂರ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡರ ಪರ ಮಾಜಿ ಸಚಿವ ಬಿ. ಶ್ರೀರಾಮುಲು ರೋಡ್ ಶೋ ಮೂಲಕ ಮತಯಾಚನೆ ಮಾಡಿದರು.
ಗ್ರಾಮದ ರಸ್ತೆಗಳಲ್ಲಿ ಸಂಚರಿಸಿದ ಶ್ರೀರಾಮುಲು ಮಾತನಾಡಿ, ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಬೇಕಾಗಿರುವ ಸರಕಾರ ಕೈ ಚೆಲ್ಲಿ ಕುಳಿತುಕೊಂಡಿದೆ.
ಸದ್ಯ ಎರಡು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿಕೊಂಡರು.
ಮುರುಗೇಶ ನಿರಾಣಿ ಕೂಡಾ ಗ್ರಾಮದಲ್ಲಿ ಮತಯಾಚನೆ ಮಾಡಿದರು. ಶ್ರೀರಾಮುಲು ಅವರು ಕುಂದಗೋಳ ವಿಧಾನಸಭಾ ಕ್ಷೇತ್ರದ ಮತ್ತಿಗಟ್ಟಿ, ವಿಠuಲಾಪುರ, ಬೆಣಕನಹಳ್ಳಿ, ಚಿಕ್ಕನರ್ತಿ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.