Advertisement

ಬಿಪಿಎಲ್‌ ಕಾರ್ಡ್‌ ನಿಯಮ ಸರಳ: ಜಮೀರ್‌

10:33 AM Oct 12, 2018 | Team Udayavani |

ಮಂಗಳೂರು: ಬಿಪಿಎಲ್‌ ಕಾರ್ಡ್‌ಗೆ ಈಗ ಕುಟುಂಬದ ಮುಖ್ಯಸ್ಥ ಮಾತ್ರ ಆದಾಯ ಪ್ರಮಾಣ ಪತ್ರ ಸಲ್ಲಿಸಿದರೆ ಸಾಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಹೇಳಿದರು.

Advertisement

ಮಂಗಳೂರಿನ ಕುಡುಪು ಬಳಿಯ ಕರ್ನಾಟಕ ಹೌಸಿಂಗ್‌ ಬೋರ್ಡ್‌ ಜಾಗದಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆ ಕಚೇರಿಗಳ ಸಂಕೀರ್ಣದ “ಮಾಪನ ಭವನ’ ಕಟ್ಟಡಕ್ಕೆ ಗುರುವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಬಿಪಿಎಲ್‌ ಕಾರ್ಡ್‌ಗೆ ಇದುವರೆಗೆ ಕುಟುಂಬದ ಸದಸ್ಯರೆಲ್ಲ ಆದಾಯ ಪ್ರಮಾಣ ಪತ್ರ ಸಲ್ಲಿಸಬೇಕಿತ್ತು. ಈಗ ಈ ನಿಯಮದಲ್ಲಿ ಬದಲಾವಣೆ ತರಲಾಗಿದೆ. ಪಡಿತರ ವಿತರಣೆಗೆ ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿಗೊಳಿಸಿದ್ದರಿಂದ ಸರಕಾರಕ್ಕೆ 580 ಕೋಟಿ ರೂ. ಉಳಿತಾಯವಾಗಿದೆ. ಪಡಿತರ ಅಂಗಡಿಗಳನ್ನು ನಿರ್ವಹಿಸುವವರಿಗೆ ಹಿಂದೆ ಇದ್ದ ಗರಿಷ್ಠ ವಯೋಮಿತಿಯನ್ನು ತೆಗೆದುಹಾಕಲಾಗಿದೆ ಎಂದರು. 

ಶಾಸಕ ವೇದವ್ಯಾಸ ಕಾಮತ್‌ ಬೇಡಿಕೆ ಮೇರೆಗೆ ಅವರ ಕ್ಷೇತ್ರದ ಅಲ್ಪಸಂಖ್ಯಾಕರ ಅಭಿವೃದ್ಧಿಗಾಗಿ 5 ಕೋಟಿ ರೂ. ಮಂಜೂರು ಮಾಡಲಾಗುವುದು. 3 ಕೋಟಿ ರೂ.ಗಳನ್ನು ವಾರದೊಳಗೆ ಬಿಡುಗಡೆ ಮಾಡುವುದಾಗಿ ಸಚಿವರು ಘೋಷಿಸಿದರು.

ಶಾಸಕರಿಂದ ಶ್ಲಾಘನೆ
ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ ಕಾಮತ್‌, ಸಚಿವರ ಬಳಿ ಇಂದಷ್ಟೇ ಈ ಬೇಡಿಕೆ ಇರಿಸಿದ್ದೆ ಎಂದು ವಿವರಿಸಿ ತತ್‌ಕ್ಷಣದ ಮಂಜೂರಾತಿಗೆ ಶ್ಲಾಘನೆ ವ್ಯಕ್ತ ಪಡಿಸಿದರು. ಕರಾವಳಿಯಲ್ಲಿ ಉಳ್ಳಾಲ ಹೊರತು ಪಡಿಸಿದರೆ ಮಂಗಳೂರು ದಕ್ಷಿಣ ಕ್ಷೇತ್ರ ಅಧಿಕ ಅಲ್ಪಸಂಖ್ಯಾಕರನ್ನು ಹೊಂದಿದೆ. ಬೆಂಗರೆ, ಬಜಾಲ್‌ನ ಫೈಝಲ್‌ ನಗರ, ಕುದ್ರೋಳಿ, ಬಂದರು, ಕಣ್ಣೂರು ಪ್ರದೇಶಗಳಲ್ಲಿ ಮೂಲ ಸೌಕರ್ಯ ಒದಗಿಸಲು ಈ ಬೇಡಿಕೆ ಸಲ್ಲಿಸಲಾಗಿತ್ತು ಎಂದರು.

ಮೇಯರ್‌ ಭಾಸ್ಕರ್‌ ಕೆ., ಜಿಲ್ಲಾ ವಕ್ಫ್ ಬೋರ್ಡ್‌ ಅಧ್ಯಕ್ಷ ಕಣಚೂರು ಮೋನು, ಕೆಪಿಸಿಸಿ ಕಾರ್ಯದರ್ಶಿ ಶಾಹಿದ್‌, ರೋಟರಿ ಕ್ಲಬ್‌ನ ಜಯಕುಮಾರ್‌, ಶಕೀಲ್‌ ನವಾಝ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕ ಶ್ರೀನಿವಾಸ್‌, ಕಾನೂನು ಮಾಪನಶಾಸ್ತ್ರ ಇಲಾಖೆಯ ನಿಯಂತ್ರಕ ಡಾ| ಕೆ.ಎನ್‌. ಅನುರಾಧಾ ಉಪಸ್ಥಿತರಿದ್ದರು. ಕಾನೂನು ಮಾಪನಶಾಸ್ತ್ರ ಇಲಾಖೆಯ ಎಫ್.ಎಸ್‌. ಹೂಗಾರ ಸ್ವಾಗತಿಸಿದರು. ಸಹಾಯಕ ನಿಯಂತ್ರಕ ಗಜೇಂದ್ರ ವಿ.ಎ. ಪ್ರಸ್ತಾವನೆಗೈದರು.

Advertisement

ನೂತನ ಮಾಪನ ಭವನ 
ಕಾನೂನು ಮಾಪನಶಾಸ್ತ್ರ ಇಲಾಖೆ ಕಚೇರಿಗಳ ಸಂಕೀರ್ಣವು ಪ್ರಸ್ತುತ ಬಾಡಿಗೆ ಕಟ್ಟಡದಲ್ಲಿದೆ. ಈಗ ಕುಡುಪು ಕರ್ನಾಟಕ ಹೌಸಿಂಗ್‌ ಬೋರ್ಡ್‌ ಬಳಿ 43 ಸೆಂಟ್ಸ್‌ ಭೂಮಿಯಲ್ಲಿ ನೂತನ ಮಾಪನ ಭವನಕ್ಕೆ ಶಿಲಾನ್ಯಾಸ ನಡೆದಿದ್ದು, 2,200 ಚ. ಅಡಿಯ ಕಟ್ಟಡ 93 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ. 

5 ವರ್ಷ ತೊಂದರೆ ನೀಡಬೇಡಿ!
ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ್‌ ಕಾಮತ್‌ ಮಾತನಾಡಿ, ಮುಂದಿನ 5 ವರ್ಷಗಳ ಅವಧಿಯಲ್ಲಿ ತಲಾ 5 ಕೋ.ರೂ.ಗಳಂತೆ ತನ್ನ ಕ್ಷೇತ್ರಕ್ಕೆ ಅನುದಾನ ಒದಗಿಸಬೇಕು ಎಂದು ಮನವಿ ಮಾಡಿದರು. ಮಧ್ಯ ಪ್ರವೇಶಿಸಿ ಮಾತನಾಡಿದ ಸಚಿವ ಜಮೀರ್‌, “ಹಾಗಾದರೆ ಅಷ್ಟು ಕಾಲ ತೊಂದರೆ ನೀಡದೆ ನಮಗೆ ಆಡಳಿತ ನಡೆಸಲು ಅವಕಾಶ ನೀಡುತ್ತೀರಿ ಎಂದಾಯಿತು’ ಎಂದರು. “ನಾವು ಬೀಳಿಸುವುದಿಲ್ಲ, ನೀವಾಗಿಯೇ ಬಿದ್ದರೆ ನಾವೇನೂ ಮಾಡಲಾಗದು’ ಎಂದು ವೇದವ್ಯಾಸ್‌ ಪ್ರತಿನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next