Advertisement

ದಸರಾ ಗಜಪಡೆಗೆ ಜಂಬೂಸವಾರಿ ಪೂರ್ವ ತಾಲೀಮು

08:26 PM Oct 05, 2019 | Lakshmi GovindaRaju |

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಗೆ ಇನ್ನೆರಡೇ ದಿನ ಬಾಕಿ ಇರುವಂತೆ ಸಿದ್ಧತೆಗಳು ಭರದಿಂದ ಸಾಗಿದ್ದು, ಶನಿವಾರ ಅರಮನೆ ಆವರಣದಲ್ಲಿ ಜಂಬೂಸವಾರಿಯ ತಾಲೀಮು ನಡೆಯಿತು. 750 ಕೇಜಿ ತೂಕದ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಹೊತ್ತು ಸಾಗುವ ದಸರಾ ಗಜಪಡೆ ಕ್ಯಾಪ್ಟನ್‌ ಅರ್ಜುನನಿಗೆ ಅರಮನೆ ಮುಂಭಾಗದ ವೇದಿಕೆಯಲ್ಲಿ ಪುಷ್ಪಾರ್ಚನೆಯ ಪೂರ್ವ ತಾಲೀಮು ನೀಡಲಾಯಿತು.

Advertisement

ಪಾಲಿಕೆ ಮೇಯರ್‌ ಪುಷ್ಪಲತಾ, ನಗರ ಕಾನೂನು-ಸುವ್ಯವಸ್ಥೆ ವಿಭಾಗದ ಡಿಸಿಪಿ ಮುತ್ತುರಾಜ್‌, ಸಿಎಆರ್‌ ಡಿಸಿಪಿ ಚನ್ನಕೇಶವ ಪೂರ್ವ ತಾಲೀಮಿನಲ್ಲಿ ಭಾಗವಹಿಸಿ, ಅರ್ಜುನನಿಗೆ ಪುಷ್ಪಾರ್ಚನೆ ಮಾಡಿ ಗೌರವ ವಂದನೆ ಸಲ್ಲಿಸಿದರು. ಅರ್ಜುನನ ಜತೆಗೆ ದಸರಾ ಗಜಪಡೆಯ ಇತರೆ ಹತ್ತು ಆನೆಗಳೂ ಪೂರ್ವ ತಾಲೀಮಿನಲ್ಲಿ ಭಾಗವಹಿಸಿದ್ದವು. ವಿಜಯ ಮತ್ತು ಕಾವೇರಿ ಆನೆಗಳು ಕುಮ್ಕಿ ಆನೆಗಳಾಗಿ ಭಾಗಿಯಾದವು.

ಈ ಬಾರಿಯೂ ಹಿರಿಯ ಅನುಭವಿ ಆನೆ ಬಲರಾಮ ಜಂಬೂಸವಾರಿ ಮೆರವಣಿಗೆಯನ್ನು ಮುನ್ನಡೆಸಲಿದ್ದು, ಮೆರವಣಿಗೆ ತಾಲೀಮಿನಲ್ಲಿ ನಿಶಾನೆ ಆನೆಯಾಗಿ ಬಲರಾಮ ಎಲ್ಲರಿಗಿಂತ ಮುಂಚೂಣಿಯಲ್ಲಿ ಸಾಗಿತು. ಬಲರಾಮನನ್ನು ಹಿಂಬಾಲಿಸುತ್ತ ಅಭಿಮನ್ಯು ನೌಪತ್‌ ಆನೆಯಾಗಿ ಸಾಗಿದರೆ, ಇತರೆ ಆನೆಗಳು ಸಾಲಾಗಿ ಸಾಗಿದವು.

ಈ ನಡುವೆ ವೇದಿಕೆ ಬಳಿ ಬರುತ್ತಿದ್ದಂತೆ ಕೊಂಚ ವಿಚಲಿತನಾದ ಈಶ್ವರ ಆನೆಯನ್ನು ಮಾವುತ ಮತ್ತು ಕಾವಾಡಿ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ದಸರಾ ಗಜಪಡೆ ಕ್ಯಾಪ್ಟನ್‌ ಅರ್ಜುನ ಗಜ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಾ ಸಾಗಿದರೆ, ಗಜಪಡೆಯ ಜೊತೆಗೆ ಶಿಸ್ತು ಬದ್ಧವಾಗಿ ಪೊಲೀಸ್‌ ತುಕಡಿಗಳು ಸಾಗಿದವು. ಅಶ್ವಾರೋಹಿ ದಳ, ನಗರ ಸಶಸ್ತ್ರ ಮೀಸಲು ಪಡೆ, ರಾಜ್ಯ ಮೀಸಲು ಪಡೆ ಸೇರಿದಂತೆ ಹತ್ತು ಪೊಲೀಸ್‌ ತುಕಡಿಗಳು ಜಂಬೂಸವಾರಿ ಮೆರವಣಿಗೆ ಪೂರ್ವತಾಲೀಮಿನಲ್ಲಿ ಭಾಗಿಯಾಗಿ ಪಥಸಂಚಲನ ನಡೆಸಿದರು.

ಅರ್ಜುನನಿಗೆ ಪುಷ್ಪಾರ್ಚನೆ ಮಾಡುವ ವೇಳೆ ರಾಷ್ಟ್ರಗೀತೆ ನುಡಿಸಲಾಯಿತು. ಅರಮನೆಯ ಹೊರ ಆವರಣದಲ್ಲಿರುವ ಕೋಟೆ ಮಾರಮ್ಮ ದೇಗುಲದ ಬಳಿ ನಗರ ಸಶಸ್ತ್ರ ಮೀಸಲು ಪಡೆ ಪೊಲೀಸರು 21 ಕುಶಾಲ ತೋಪು ಸಿಡಿಸಿ ಗೌರವ ವಂದನೆ ಸಲ್ಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next