Advertisement

ಜಾಂಬ್ರಿ ಗುಹಾ ಪ್ರವೇಶ : 40,000ಕ್ಕೂ ಅಧಿಕ ಭಕ್ತರು ಸಾಕ್ಷಿ

12:31 PM May 03, 2017 | Karthik A |

ಮುಳ್ಳೇರಿಯಾ: ಅತ್ಯಪೂರ್ವ, ಐತಿಹಾಸಿಕ ನೆಟ್ಟಣಿಗೆ ಜಾಂಬ್ರಿ ಸ್ವಯಂ ಭೂ ಗುಹಾ ಪ್ರವೇಶೋತ್ಸವ ಮಂಗಳವಾರ ಗಡಿನಾಡಿನ ಎರಡೂ ರಾಜ್ಯಗಳ ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ಸಂಪನ್ನಗೊಂಡಿತು. ನೆಟ್ಟಣಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಬೆಳಗ್ಗೆ ದೇವರ ಬಲಿ ಉತ್ಸವ ನಡೆದ ಬಳಿಕ ಜಾಂಬ್ರಿ ಗುಹಾ ಪ್ರವೇಶಕ್ಕೆ ಶ್ರೀ ದೇವರಲ್ಲಿ ರಾಜಾಂಗಣ ಪ್ರಾರ್ಥನೆಯೊಂದಿಗೆ ತಂತ್ರಿಗಳು ಚಾಲನೆ ನೀಡಿದರು. ಬಳಿಕ ಕಾಪಾಡರಿಗೆ ಸ್ವಯಂ ಭೂ ಗುಹಾ ಪ್ರವೇಶಕ್ಕೆ ದೇವರ ಅನುಗ್ರಹ ಪ್ರಸಾದ ನೀಡಲಾಯಿತು. ಅನಂತರ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ ಹಾಗೂ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಸಹೋದರರು ಸುಮಾರು 6 ಕಿ.ಮೀ. ದೂರದ ಚೆಂಡೆತ್ತಡ್ಕ ಅರಣ್ಯದಲ್ಲಿರುವ ಮೂಲಸ್ಥಾನದತ್ತ ವಾದ್ಯಘೋಷಗಳ ಮೆರವಣಿಗೆಯಲ್ಲಿ ಸಾವಿರಾರು ಭಕ್ತರ ಶಿವನಾಮ ಸ್ಮರಣೆಯೊಂದಿಗೆ ಸಾಗಿದರು.

Advertisement

ಹೀಗೆ ನಡೆಯಿತು ಗುಹಾ ಪ್ರವೇಶ …
ಕಳೆದ 48 ದಿನಗಳಿಂದ ದೀಕ್ಷಾಬದ್ಧರಾಗಿ ಶಿವನಾಮ ಸ್ಮರಣೆ ಮಾಡುತ್ತ ಅಜ್ಞಾತರಾಗಿದ್ದ ಕಾಪಾಡರು 11.15ರ ಹೊತ್ತಿಗೆ ಗುಹಾ ಪ್ರವೇಶ ಮಾಡಿದರು. ಒಂದೂವರೆ ಗಂಟೆಯಲ್ಲಿ ಕಾಪಾಡರು ಹಿಂದಿರುಗಿದ ಬಳಿಕ ಬ್ರಹ್ಮಶ್ರೀ ವಾಸುದೇವ ತಂತ್ರಿ ಹಾಗೂ ಬ್ರಹ್ಮಶ್ರೀ ರವೀಶ ತಂತ್ರಿಗಳು ಮತ್ತು ಕೈದೀಪ ಹಿಡಿಯುವ ಸ್ಥಾನಿಕರಾದ ಶ್ರೀನಿವಾಸ ಪಿಲಿಕ್ಕೂಡ್ಲು ಅವರು ಭಕ್ತಜನರ ಮುಗಿಲುಮುಟ್ಟುವ ಶಿವನಾಮಸ್ಮರಣೆಯೊಂದಿಗೆ ಪಂಚವಾದ್ಯ ಮತ್ತು ವಿವಿಧ ವಾದ್ಯಘೋಷಗಳೊಂದಿಗೆ ಗುಹಾ ಪ್ರವೇಶ ನಡೆಸಿದರು. ಒಂದೂವರೆ ಗಂಟೆಯ ಬಳಿಕ ಗುಹೆಯಿಂದ ಮೃತ್ತಿಕಾ ಪ್ರಸಾದದೊಂದಿಗೆ ತಂತ್ರಿವರ್ಯರು ಹಿಂದಿರುಗಿ ಸೇರಿದ್ದ ಭಕ್ತರಿಗೆ ಮೃತ್ತಿಕಾ ಪ್ರಸಾದ ವಿತರಣೆ ಮಾಡಿದರು. ಗಿಳಿಯಾಲು ಮನೆತನ ದವರಿಂದ ಪಾರಂಪರಿಕ ರೀತಿಯಲ್ಲಿ ಭಕ್ತರಿಗೆ ಪಾನಕ, ಮಜ್ಜಿಗೆ ಮತ್ತು ನೀರು ವಿತರಣೆ ನಡೆಯಿತು.


ತಂತ್ರಿಗಳು ಮೃತ್ತಿಕಾ ಪ್ರಸಾದದೊಂದಿಗೆ ಗುಹೆಯಿಂದ ಹೊರಬರುತ್ತಿರುವುದು.

ಗಣ್ಯರ ಭೇಟಿ
ಐತಿಹಾಸಿಕ ಜಾಂಬ್ರಿ ಮಹೋತ್ಸವಕ್ಕೆ ಗಣ್ಯರು ಆಗಮಿಸಿ ಪುಣ್ಯ ಸಮಾರಂಭಕ್ಕೆ ಸಾಕ್ಷಿಯಾದರು. ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲು, ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ, ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಪುತ್ತೂರು ತಾ.ಪಂ. ಸದಸ್ಯೆ ಮೀನಾಕ್ಷಿ ಮಂಜುನಾಥ್‌, ಚಣಿಲ ತಿಮ್ಮಪ್ಪ ಶೆಟ್ಟಿ, ಸುಧಾಮ ಗೋಸಾಡ, ರಾಜೇಶ್‌ ಬನ್ನೂರು, ಚಿತ್ರನಟ ಸುರೇಶ್‌ ರೈ ಸಹಿತ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು.

ಕರ್ನಾಟಕ ಹಾಗೂ ಕೇರಳದ 40,000ಕ್ಕೂ ಅಧಿಕ ಭಕ್ತರು ಉರಿಬಿಸಿಲನ್ನೂ ಲೆಕ್ಕಿಸದೆ ಭಾಗವಹಿಸಿ ಕರಾವಳಿ ಕರ್ನಾಟಕದ ವಿಶಿಷ್ಟ ಆಚರಣೆಗೆ ಸಾಕ್ಷಿಯಾದರು. ಸಂಪ್ಯ ಠಾಣೆಯ ಪಿಎಸ್‌ಐ ಅಬ್ದುಲ್‌ ಖಾದರ್‌, ಬೇಡಡ್ಕ ಠಾಣಾಧಿಕಾರಿ ದಾಮೋದರನ್‌, ಆದೂರು ಠಾಣಾಧಿಧಿಕಾರಿ ಕುಂಞುಂಬು ಶಾಂತಿ – ಸುವ್ಯವಸ್ಥೆಯ ನೇತೃತ್ವ ವಹಿಸಿದ್ದರು. ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಮತ್ತು ಗೃಹರಕ್ಷಕ ದಳದ ಸಿಬಂದಿ ಸೇರಿದಂತೆ 100 ಅಧಿಕ ಸಿಬಂದಿ ಪಾಲ್ಗೊಂಡಿದ್ದರು. ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಫರೀದಾ ಬಾನು ನೇತೃತ್ವದ ಆರೋಗ್ಯ ಸಿಬಂದಿ ತಂಡ ತುರ್ತು ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಿದರು. ಪೈತ್ತೂರು ಅಗ್ನಿ ಶಾಮಕ ದಳದ ಪ್ರಮುಖ ನವೀನ್‌ ನೇತೃತ್ವದ ತಂಡವು ತುರ್ತು ಸೇವೆಗಳಿಗೆ ಸಜ್ಜಾಗಿದ್ದರು. ನೂರಾರು ಮಂದಿ ಸ್ವಯಂ ಸೇವಕರ ಮಧ್ಯೆ ಪಾಣಾಜೆ ಸುಬೋಧ ಪ್ರೌಢಶಾಲೆಯ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಸಹಕರಿಸಿ ಗಮನ ಸೆಳೆದರು.

Advertisement

ವಿಶೇಷ ಬಸ್‌ ಸೌಲಭ್ಯ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಪುತ್ತೂರು ವಿಭಾಗದಿಂದ ಪುತ್ತೂರಿನಿಂದ ಗುಹಾ ಪ್ರದೇಶ ಚೆಂಡೆತ್ತಡ್ಕಕ್ಕೆ 6 ವಿಶೇಷ ಬಸ್‌ ಸೇವೆಯನ್ನು ಕಲ್ಪಿಸಲಾಗಿತ್ತು. ಜಾಂಬ್ರಿ ಮಹೋತ್ಸವದಲ್ಲಿ ಪಾಲ್ಗೊಂಡ ಸಾವಿರಾರು ಭಕ್ತರಿಗೆ ಪ್ರಥಮ ಬಾರಿಗೆ ಪ್ರಸಾದ ರೂಪದಲ್ಲಿ ಗಂಜಿ ಊಟ ವಿತರಿಸಲಾಯಿತು. ನೆಟ್ಟಣಿಗೆ ಗ್ರಾಮಸ್ಥರಿಗೆ ಶ್ರೀ ಕ್ಷೇತ್ರದಲ್ಲಿ ಮೇ 3ರಂದು ಮೃತ್ತಿಕಾ ಪ್ರಸಾದ ವಿತರಣೆ ನಡೆಯಲಿದೆ. ಮೇ 3ರಂದು ಬೆಳಗ್ಗೆ 9ಕ್ಕೆ ಶ್ರೀದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಮೃತ್ತಿಕಾ ಪ್ರಸಾದ ವಿತರಣೆಯೊಂದಿಗೆ ಮಹೋತ್ಸವ ಸಂಪನ್ನಗೊಳ್ಳಲಿದೆ.

‘ವೈವಿಧ್ಯಮಯ ಆಚರಣೆ, ನಂಬಿಕೆಗಳ ಶ್ರೀಮಂತ ಸಾಂಸ್ಕೃತಿಕ ಹಿನ್ನೆಲೆಯ ಭಾರತದಲ್ಲಿ ಅತ್ಯಪೂರ್ವ ಸ್ವಯಂ ಭೂ ಗುಹಾ ಪ್ರವೇಶ ತುಳುನಾಡಿನ ಹೆಮ್ಮೆ. ಶ್ರದ್ಧೆ, ನಂಬಿಕೆಗಳ ಇಂತಹ ಆಚರಣೆಗಳು ಜನರಲ್ಲಿ ಒಗ್ಗಟ್ಟು ಮತ್ತು ಧಾರ್ಮಿಕ ಮನೋಭಾವವನ್ನು ಗಟ್ಟಿಗೊಳಿಸುವುದು.
– ನಳಿನ್‌ ಕುಮಾರ್‌ ಕಟೀಲು, ದಕ್ಷಿಣ ಕನ್ನಡ ಸಂಸದ

ಈ ಬಾರಿಯ ಜಾಂಬ್ರಿ ಮಹೋತ್ಸವದಲ್ಲಿ ಅತ್ಯಧಿಕ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದಾರೆ. ಈ ಬಗ್ಗೆ ಸ್ಪಷ್ಟವಾದ ಅರಿವಿಲ್ಲದ ಕಾರಣ ಹೆಚ್ಚಿನ ಬಂದೋಬಸ್ತು ಕಲ್ಪಿಸಲಾಗಿಲ್ಲ. ಆದರೆ ಭಕ್ತಸಾಗರವನ್ನು ಗಮನಿಸಿ ಪುತ್ತೂರು ಪೊಲೀಸರು ಮತ್ತು ಟ್ರಾಫಿಕ್‌ ಪೊಲೀಸರು, ಗೃಹ ರಕ್ಷಕ ಸಿಬಂದಿಯ  ನೆರವು ಪಡೆದುಕೊಂಡಿದ್ದೇವೆ. ಮುಂದಿನ ಉತ್ಸವದ ಸಂದರ್ಭ ಈ ಬಗ್ಗೆ ಯಾವುದೇ ಗೊಂದಲಗಳಾಗದಂತೆ ನಿರ್ವಹಣೆ ನಡೆಸಲು ಸರಕಾರಕ್ಕೆ ಈ ಬಗ್ಗೆ ವಿಸ್ಕೃತ ವರದಿಯೊಂದನ್ನು ನೀಡುತ್ತೇನೆ.
– ಅಬ್ದುಲ್‌ ಖಾದರ್‌, ಸಂಪ್ಯ ಠಾಣಾ ಪಿಎಸ್‌ಐ

ಚಿತ್ರ: ಅಖೀಲೇಶ್‌ ನಗುಮೊಗಂ

Related News Links:
► ಜಾಂಬ್ರಿ ಉತ್ಸವಕ್ಕೆ ಮುಸ್ಲಿಮರಿಂದ ಹೊರೆಕಾಣಿಕೆ : //bit.ly/2qr6KMs
► ಐತಿಹಾಸಿಕ ಜಾಂಬ್ರಿ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ : //bit.ly/2qxcVfk
► ಸ್ವಯಂ ಭೂ ಗುಹಾಪ್ರವೇಶ: ಸಕಲ ಸಿದ್ಧತೆಯಲ್ಲಿ ಶ್ರೀಕ್ಷೇತ್ರ ನೆಟ್ಟಣಿಗೆ : //bit.ly/2pGF7hS

Advertisement

Udayavani is now on Telegram. Click here to join our channel and stay updated with the latest news.

Next