ಜಮಖಂಡಿ: ಕೋವಿಡ್ ಭೀತಿಯಿಂದ ಕಳೆದ 30 ದಿನಗಳಿಂದ ಮಾರುಕಟ್ಟೆ ಸ್ತಬ್ಧಗೊಂಡಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಎಲ್ಲ ರೀತಿಯ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ.
ನಗರದ ಮಾಲ್, ಸಂಕೀರ್ಣ, ಥೇಟರ್ ಮತ್ತು ರಸ್ತೆ ವ್ಯಾಪಾರ ಸ್ಥಗಿತಗೊಂಡು 455 ಕೋಟಿ ರೂ. ಹಾನಿಯಾಗಿದೆ. ನಗರದಲ್ಲಿ ಕಿರಾಣಿ ವ್ಯಾಪಾರದಿಂದ 75 ಕೋಟಿ, ಬಟ್ಟೆ ವ್ಯಾಪಾರ 38 ಕೋಟಿ, ಸಾರಾಯಿ ಅಂಗಡಿ 17 ಕೋಟಿ, ಬಂಗಾರ ಅಂಗಡಿ 45 ಕೋಟಿ, ಪುಸ್ತಕ ಅಂಗಡಿ 13 ಕೋಟಿ, ಪ್ರಿಟಿಂಗ್ ಪ್ರಸ್ 2 ಕೋಟಿ, ಸಾರಿಗೆ ಸಂಸ್ಥೆ 105 ಕೋಟಿ ಖಾಸಗಿ ಸಾರಿಗೆ 135 ಕೋಟಿ, ಎಪಿಎಂಸಿ 25 ಕೋಟಿ ಸಹಿತ ಎಲ್ಲ ರೀತಿಯ ವಹಿವಾಟದಿಂದ 455 ಕೋಟಿಯಷ್ಟು ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ.
ತಾಲೂಕಿನಲ್ಲಿ ಒಂದು ತಿಂಗಳ ಕೊರೊನಾ ಕರ್ಫ್ಯೂ ಅವಧಿಯಲ್ಲಿ ಅತಿಹೆಚ್ಚು ವಹಿವಾಟು ಸ್ಥಗಿತಗೊಂಡಿದೆ. ಕೊರೊನಾ ನಿಯಮಾವಳಿ ನಿರ್ದೇಶನದಂತೆ ಕೇವಲ 80 ಕೋಟಿಯಷ್ಟು ವಹಿವಾಟು ನಡೆದಿದೆ. ರೈತರು ಬೆಳೆದ ತರಕಾರಿ ಮಾತ್ರ ಪ್ರತಿನಿತ್ಯ ಮಾರುಕಟ್ಟೆಯಲ್ಲಿ ಲಭ್ಯವಾಗಿದೆ. ಅತೀ ಅವಶ್ಯಕ ವಸ್ತುಗಳಾದ ಪೆಟ್ರೋಲ್, ಹಾಲು, ಪತ್ರಿಕೆ ಮಳಿಗೆ ಆರಂಭವಿದ್ದರೂ ಗ್ರಾಹಕರಿಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಔಷಧ ಅಂಗಡಿ ಮತ್ತು ಆಸ್ಪತ್ರೆಗಳಿಗೆ ಆದಾಯದಲ್ಲಿ ಕಡಿಮೆಯಾಗಿಲ್ಲ. ಕಳೆದು ಒಂದು ತಿಂಗಳಿನಿಂದ ನೈಟ್ ಕರ್ಫ್ಯೂ, ಕೊರೊನಾ ಕರ್ಫ್ಯೂ ಸಹಿತ ಲಾಕ್‌ಡೌನ್ ಆರಂಭದಿಂದ ಬಸ್ ನಿಲ್ದಾಣ, ಪ್ರಮುಖ ವೃತ್ತ, ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಬಿಕೋ ಎನ್ನುತ್ತಿವೆ.
ಬ್ಯಾಕ್ ಫಂಗಸ್ ಪತ್ತೆ: ತಾಲೂಕಿನ ಕಂಕಣವಾಡಿ, ಶೂರ್ಪಾಲಿ ಮತ್ತು ಜಮಖಂಡಿ ನಗರದಲ್ಲಿ ಬ್ಲಾಕ್ ಫಂಗಸ್ ಕಾಯಿಲೆ ಪತ್ತೆಯಾಗಿದೆ. ಮೂವರು ಕೊರೊನಾ ಸೋಂಕಿನಿಂದ ಜೀವ ಉಳಿದ ನಂತರ ಅವರಲ್ಲಿ ಬ್ಲಾಕ್ ಫಂಗಸ್ ಕಂಡು ಬಂದಿದೆ. ಪ್ರಥಮ ಹಂತದ ವರದಿಯಲ್ಲಿ ಪತ್ತೆಯಾಗಿದೆ. ಜಮಖಂಡಿ ನಗರದ ವ್ಯಕ್ತಿ ಧಾರವಾಡದ ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಉಳಿದ ಇಬ್ಬರು ಟೆಸ್ಟಿಂಗ್ ನಡೆದಿದ್ದು, ವರದಿ ಬರಬೇಕಾಗಿದೆ. ಒಟ್ಟಾರೆಯಾಗಿ ಈಗ ಮೂರು ಜನರಲ್ಲಿ ಕಾಯಲೆ ಪತ್ತೆಯಾಗಿದೆ. ಚಿಕಿತ್ಸೆಗೆ ಸಿದ್ಧತೆ ನಡೆದಿದೆ ಎಂದು ತಾಲೂಕು ವೈದಾಧಿ ಕಾರಿ ಡಾ| ಜಿ.ಎಸ್.ಗಲಗಲಿ ಹೇಳಿದ್ದಾರೆ.