ಜಮಖಂಡಿ: ಬರೋಬ್ಬರಿ 111 ವರ್ಷಗಳ ಹಿಂದೆ ನಗರದಲ್ಲಿ ನಿರ್ಮಿಸಿದ ಗ್ರಂಥಾಲಯ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. 1908ರಲ್ಲಿ ಆಗಿನ ಸಂಸ್ಥಾನ ಪಟವರ್ಧನ್ ಅರಸರು ತಮ್ಮ ತಾಯಿ ರಮಾಬಾಯಿ ನೆನಪಿಗಾಗಿ ಸಾರ್ವಜನಿಕರ-ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರಕಾರಿ ಪಿ.ಬಿ. ವಿದ್ಯಾಲಯದ ಎದುರುಗಡೆ ಇರುವ ಎರಡಂತಸ್ತಿನ ಸುಂದರ ಭವ್ಯವಾದ ಕಟ್ಟಡದಲ್ಲಿ ಗ್ರಂಥಾಲಯ ನಿರ್ಮಿಸಿದ್ದಾರೆ.
ಅರಸು ಆಡಳಿತ ಪರಂಪರೆ ಸಂದರ್ಭದಲ್ಲಿ ಖಾಸಗಿಯಾಗಿದ್ದ ಕಾರ್ಯ ನಿರ್ವಹಿಸುತ್ತಿದ್ದ ಗ್ರಂಥಾಲಯ 1976ರಲ್ಲಿ ರಾಜ್ಯ ಸರಕಾರ ತನ್ನ ವ್ಯಾಪ್ತಿಗೆ ತೆಗೆದುಕೊಂಡಿದೆ. ಗ್ರಂಥಾಲಯದಲ್ಲಿ ಈಗ ಓದುಗರಿಗೆ ಪುಸ್ತಕ, ಸೌಕರ್ಯ ಯಾವುದೇ ಕೊರತೆ ಇಲ್ಲ. ಆದರೆ ಅಂದಿನ ಜನಸಂಖ್ಯೆ ಆಧರಿಸಿ ನಿರ್ಮಿಸಲಾಗಿದ್ದ ಗ್ರಂಥಾಲಯದಲ್ಲಿ ಈಗ ನಿತ್ಯ 500ಕ್ಕಿಂತ ಹೆಚ್ಚು ಜನ ಆಗಮಿಸುತ್ತಿದ್ದು, ಕಟ್ಟಡದಲ್ಲಿ ಓದಲು ಸ್ಥಳ ಸಾಕಾಗುತ್ತಿಲ್ಲ.
ಪ್ರತಿ ಗುರುವಾರ ಸಂತೆ ಇರುವುದರಿಂದ ಗದ್ದಲದ್ದೇ ಸಮಸ್ಯೆಯಾಗಿದೆ. ಗ್ರಂಥಾಲಯ ಸುತ್ತಮುತ್ತ ಕೊಳಚೆ ಪರಿಸರ ಇದ್ದು, ರಾತ್ರಿಯಾದರೆ ಗ್ರಂಥಾಲಯ ಕಟ್ಟಡದ ಹಿಂಭಾಗ ಅನೈತಿಕ ಚಟುವಟಿಕೆ ಹಾಗೂ ಕುಡುಕರ, ಜೂಜುಕೋರರ ತಾಣವಾಗಿ ಪರಿಣಮಿಸುತ್ತದೆ. ಮಳೆ ಬಂದರೆ ಮೇಲ್ಛಾವಣಿ ಸೋರುತ್ತಿದ್ದು, ಗ್ರಂಥಾಲಯ ಅಧಿ ಕಾರಿಗಳು ಈ ಕುರಿತು ಗಮನ ಹರಿಸುತ್ತಿಲ್ಲ. ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿ ಕಾರಿಗಳು ಓದುಗರ ಸಮಸ್ಯೆಗೆ ಸ್ಪಂದಿಸಬೇಕಿದೆ.
-ಮಲ್ಲೇಶ ರಾ.ಆಳಗಿ