ಜಮಖಂಡಿ: ತಾಲೂಕಿನ 25 ಗ್ರಾಮ ಪಂಚಾಯತಗೆ ನಡೆದ ಚುನಾವಣೆ ಮತ ಎಣಿಕೆಗಾಗಿ ನಗರದ ಸರಕಾರಿ ಪಿ.ಬಿ. ಹೈಸ್ಕೂಲ್‌ನಲ್ಲಿ 25 ಮತ ಎಣಿಕೆ ಕೊಠಡಿ ನಿರ್ಮಿಸಲಾಗಿದೆ. ಶಾಂತಿಯುತ ಎಣಿಕೆಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು
ತಹಶೀಲ್ದಾರ್ ಎಸ್.ಬಿ.ಇಂಗಳೆ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ಸಂಜೆ 4 ಗಂಟೆಯೊಳಗಾಗಿ ಸಂಪೂರ್ಣ
ಫಲಿತಾಂಶ ಲಭಿಸುವ ನಿಟ್ಟಿನಲ್ಲಿ ಸರಕಾರಿ ಪಿ.ಬಿ. ಹೈಸ್ಕೂಲ್‌ನಲ್ಲಿ ಒಂದು ಮತ ಎಣಿಕೆ ಕೊಠಡಿಯಲ್ಲಿ 3 ಟೇಬಲಗಳಂತೆ ಒಟ್ಟು 25 ಕೊಠಡಿಗಳಲ್ಲಿ 60 ಟೇಬಲ್ ಹಾಕಲಾಗಿದೆ. ಟೇಬಲಗೆ ಓರ್ವ ಮತಎಣಿಕೆ ಮೇಲ್ವಿಚಾರಕ, ಓರ್ವ ಮತ ಎಣಿಕೆ ಮೇಲ್ವಿಚಾರಕ,
ಇಬ್ಬರು ಮತ ಎಣಿಕೆದಾರರನ್ನು ನೇಮಿಸಲಾಗಿದೆ. ಒಟ್ಟು 180 ಜನರನ್ನು ನೇಮಿಸಲಾಗಿದೆ. ಪ್ರತಿ ಸುತ್ತಿನ ಮತ ಎಣಿಕೆ ಫಲಿತಾಂಶವನ್ನು ಹಂತ ಹಂತವಾಗಿ ಪರದೆ ಮೇಲೆ ಹಾಗೂ ಧ್ವನಿವರ್ಧಕದ ಮೂಲಕ ಪ್ರಕಟಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಇದನ್ನೂ ಓದಿ:ರೈತರ ಬೇಡಿಕೆ ಈಡೇರಿಸದಿದ್ರೆ…ಮತ್ತೆ ದೆಹಲಿಯಲ್ಲಿ ಸತ್ಯಾಗ್ರಹ ಆರಂಭ: ಅಣ್ಣಾ ಹಜಾರೆ
ಕೊಠಡಿಯಲ್ಲಿ ಅಭ್ಯರ್ಥಿ ಅಥವಾ ಏಜೆಂಟ್‌ರಿಗೆ ಒಬ್ಬರಿಗೆ ಮಾತ್ರ ಪ್ರವೇಶವಿದ್ದು, ಮುಖ್ಯದ್ವಾರದಲ್ಲಿ ಗುರುತಿನ ಚೀಟಿ ಹೊಂದಿದವರಿಗೆ ಮಾತ್ರ ಪ್ರವೇಶಕ್ಕೆ ಆದ್ಯತೆ ನೀಡಲಾಗಿದೆ. ಅಧಿಕಾರಿಗಳ ಸೂಚನೆಯಂತೆ ಒಬ್ಬರ ನಂತರ ಒಬ್ಬರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಮತ ಎಣಿಕೆಯ ಪ್ರದೇಶದಲ್ಲಿ ಮೊಬೈಲ್, ಗುಟಕಾ, ಧೂಮ್ರಪಾನ ನಿಷೇಧಿಸಿದೆ. ಒಂದು ಮತ ಎಣಿಕೆ ಕೊಠಡಿ ಭದ್ರತೆಗೆ ಇಬ್ಬರು ಪೊಲೀಸರನ್ನು ನೇಮಿಸಲಾಗಿದೆ ಎಂದರು.