ಜಲಪಾಯ್‌ಗಾಡಿ, ಪಶ್ಚಿಮ ಬಂಗಾಲ : ಹದಿನೇಳು ಮಕ್ಕಳ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ಜಲಪಾಯ್‌ಗಾಡಿ ಜಿಲ್ಲಾ ಮ್ಯಾಜಿಸ್ಟ್ರೇಟ್ ರಚನಾ ಭಗತ್ ಅವರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ (ಡಿಸಿಪಿಓ)ಗೆ ಶೋಕಾಸ್ ನೊಟೀಸ್ ಜಾರಿ ಮಾಡಿದ್ದಾರೆ.
ಒಟ್ಟು 17 ಮಕ್ಕಳು ಕಾಣೆಯಾಗಿದ್ದಾರೆ. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಈ ವಿಷಯ ತನಗೆ ಗೊತ್ತೇ ಇಲ್ಲ ಎಂದು ಹೇಳುವುದನ್ನು ನಂಬಲಿಕ್ಕೇ ಆಗದು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ.
ಸಿಐಡಿ ತನಿಖಾಧಿಕಾರಿಗಳು ಕಳೆದ ಫೆ.18 ಮತ್ತು 19ರಂದು ಸರಕಾರೇತರ ಸೇವಾ ಸಂಘಟನೆಯ ಮುಖ್ಯ ದತ್ತು ಸ್ವೀಕಾರ ಅಧಿಕಾರಿಗಳಾಗಿರುವ ಸೋನಾಲಿ ಮಂಡಲ್ ಮತ್ತು ಅಧ್ಯಕ್ಷೆ ಚಂದನಾ ಚಕ್ರವರ್ತಿ ಅರನ್ನು ಬಂಧಿಸಿದ್ದರು. ಇವರಿಬ್ಬರೂ 1ರಿಂದ 14 ವರ್ಷ ಪ್ರಾಯದ ಸುಮಾರು 17 ಮಕ್ಕಳನ್ನು ಕಳೆದ ಕೆಲವು ತಿಂಗಳಲ್ಲಿ, ಮಕ್ಕಳನ್ನು ದತ್ತು ಪಡೆಯುವ ದಂಪತಿಗಳಿಗೆ, ಭಾರೀ ಬೆಲೆಗೆ ಮಾರಾಟ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಬಂಧಿತ ಆರೋಪಿಗಳಿಬ್ಬರನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ಅವರನ್ನು 13 ದಿನಗಳ ಅವಧಿಗೆ ಸಿಐಡಿ ಕಸ್ಟಡಿಗೆ ಒಪ್ಪಿಸಲಾಗಿದೆ.
ಈ ಹಿಂದೆ ಕಳೆದ ನವೆಂಬರ್‌ನಲ್ಲಿ ಸಿಐಡಿ ಅಧಿಕಾರಿಗಳು 24 ಉತ್ತರ ಪರಗಣ, ಕೋಲ್ಕತ ಮತ್ತು ರಾಜ್ಯದ ಇತರ ಕೆಲವು ಭಾಗಗಳಲ್ಲಿ ದಾಳಿ ನಡೆಸಿಮಕ್ಕಳ ಕಳ್ಳ ಸಾಗಣೆ ಜಾಲವನ್ನು ಬಯಲಿಗೆಳೆದಿದ್ದರು.