ಚೆನ್ನೈ : ಮರೀನಾ ಬೀಚ್‌ನಲ್ಲಿ ನಡೆಯುತ್ತಿದ್ದ ಶಾಂತಿಯುತ ಜಲ್ಲಿಕಟ್ಟು ಪ್ರತಿಭಟನೆಯನ್ನು ನಕ್ಸಲರು, ಜೆಹಾದಿಗಳು ಮತ್ತು ಪಾಕಿಸ್ಥಾನೀಯರು (ಪೋರ್ಕಿಗಳು) ಹೈಜಾಕ್ ಮಾಡಿರುವುದರಿಂದ ಅದು ಹಿಂಸಾತ್ಮಕ ಪ್ರತಿಭಟನೆಯಾಗಿ ಪರಿವರ್ತಿತವಾಗಿದೆ ಎಂದು ಬಿಜೆಪಿಯ ವಿವಾದಾತ್ಮಕ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸ್ವಾಮಿ ಅವರು ತಮಿಳು ನಾಡಿನಲ್ಲಿ ಜಲ್ಲಿಕಟ್ಟು ಹೆಸರಿನಲ್ಲಿ ಹಿಂಸಾತ್ಮಕ ಅರಾಜಕತೆ ತಲೆದೋರಿರುವುದರಿಂದ ರಾಜ್ಯದಲ್ಲಿ ಕೂಡಲೇ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಹಿಂಸೆಗೆ ತಿರುಗಿರುವ ಪ್ರತಿಭಟನೆಯನ್ನು ನಿಯಂತ್ರಿಸಲು ರಾಜ್ಯಕ್ಕೆ ಸಿಆರ್‌ಪಿಎಫ್, ಬಿಎಸ್‌ಎಫ್ ಮತ್ತು ಸೇನೆಯನ್ನು ಕಳುಹಿಸಬೇಕು; ರಾಜ್ಯದಲ್ಲಿ ನೆಲೆಯೂರಿರುವ ನಕ್ಸರು, ಜೆಹಾದಿಗಳು ಮತ್ತು ಪಾಕಿಸ್ಥಾನೀಯರ ಹುಟ್ಟಡಗಿಸಲು ಈಗಿದೀಂಗಲೇ ಭದ್ರತಾ ಕಾರ್ಯಾಚರಣೆ ನಡೆಯಬೇಕು ಎಂದು ಸ್ವಾಮಿ ಹೇಳಿದ್ದಾರೆ.
ಒಂದು ಹಂತದಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ಜಲ್ಲಿಕಟ್ಟು ಪ್ರತಿಭಟನೆಯು ಪೊಲೀಸರ ತೆರವು ಕಾರ್ಯಾಚರಣೆಯ ವೇಳೆ ಹಿಂಸೆ ತಿರುಗಿದ ಪರಿಣಾಮವಾಗಿ ಐವತ್ತಕ್ಕೂ ಅಧಿಕ ಪೊಲೀಸರು ಹಾಗೂ ಹಲವಾರು ನಾಗರಿಕರು ಗಾಯಗೊಂಡಿದ್ದಾರೆ.
ರಾಜ್ಯದಲ್ಲಿ ಜಲ್ಲಿಕಟ್ಟು ಕ್ರೀಡೆಯನ್ನು ತತ್‌ಕ್ಷಣ ನಡೆಸುವುದಕ್ಕೆ ರಾಜ್ಯ ಸರಕಾರ ಮೊದಲು ಅಧ್ಯಾದೇಶವನ್ನೂ ಅನಂತರ ಶಾಶ್ವತ ಪರಿಹಾರಾರ್ಥವಾಗಿ ಮಸೂದೆಯನ್ನು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿ ಸರ್ವಾನುಮತದ ಅನುಮೋದನೆಯನ್ನು ಪಡೆದುಕೊಂಡಿದೆ.