ಚೆನ್ನೈ : ತಮಿಳು ನಾಡಿನ ಸಾಂಸ್ಕೃತಿಕ ಪರಂಪರೆಯ ದ್ಯೋತಕವಾಗಿರುವ ಪ್ರಾಚೀನ ಜಲ್ಲಿಕಟ್ಟು ಕ್ರೀಡೆಯನ್ನು ನಡೆಸುವುದಕ್ಕೆ ರಾಜ್ಯ ಸರಕಾರ ಸುಗ್ರೀವಾಜ್ಞೆ ತರಲಿದೆ ಎಂದು ಮುಖ್ಯಮಂತ್ರಿ ಓ ಪನ್ನೀರಸೆಲ್ವಂ ಹೇಳಿದ್ದು ಪ್ರತಿಭಟನೆಯನ್ನು ಕೈಬಿಡುವಂತೆ ಅವರು ಆಂದೋಲನಕಾರರನ್ನು ಕೇಳಿಕೊಂಡಿದ್ದಾರೆ.
ಸರಕಾರವು ಈಗಾಗಲೇ ಜಲ್ಲಿಕಟ್ಟು ನಿಷೇಧ ತೆರವಿನ ಸುಗ್ರೀವಾಜ್ಞೆಯ ಕರಡನ್ನು ಸಿದ್ಧಪಡಿಸಿ ಅದನ್ನು ಕೂಡಲೇ ಅಂತಿಮಗೊಳಿಸಿ ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲಾಗುವುದು; ಹಾಗೆಯೇ ಇನ್ನೆರಡು ದಿನಗಳ ಒಳಗಾಗಿ ಸುಗ್ರೀವಾಜ್ಞೆ ಜಾರಿಗೆ ಬರಲಿದೆ ಎಂದು ಪನ್ನೀರಸೆಲ್ವಂ ಹೇಳಿದ್ದಾರೆ.
ಈ ನಡುವೆ ಚೆನ್ನೈನ ಮರೀನಾ ಬೀಚಿನಲ್ಲಿ ಜಲ್ಲಿಕಟ್ಟು ನಿಷೇಧ ತೆರವನ್ನು ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯು ಇಂದು ಇನ್ನಷ್ಟು ತೀವ್ರಗೊಂಡಿದೆ. ಅಂಗಡಿ ಮುಂಗಟ್ಟುಗಳು ಇಂದು ಮುಚ್ಚಿವೆ; ಆಟೋ ರಿಕ್ಷಾಗಳು, ಸರಕು ಸಾಗಣೆಯ ಟ್ರಕ್‌ಗಳು ರಸ್ತೆಯಿಂದ ದೂರ ಉಳಿದಿವೆ.
ಈ ನಡುವೆ ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಅವರು “ಸರಕಾರ ಪೇಟಾ ಕಾರ್ಯಕರ್ತರ ಮೇಲೆ ಒಂದು ಕಣ್ಣಿಡಬೇಕು; ಏಕೆಂದರೆ ಅವರು ಅನಗತ್ಯವಾಗಿ ಜನರ ಸಾಂಸ್ಕೃತಿ ಪರಂಪರೆಯನ್ನು ಗುರಿ ಇರಿಸಿ ದಾಳಿ ನಡೆಸುತ್ತಿದ್ದಾರೆ’ ಎಂದು ಹೇಳಿದ್ದಾರೆ.
ಜಲ್ಲಿಕಟ್ಟು ಕುರಿತ ಅರ್ಜಿಯಲ್ಲಿ ಸುಪ್ರೀಂ ಕೋರ್ಟಿನಲ್ಲಿ ಪೇಟಾ, ತಮಿಳು ನಾಡು ಸರಕಾರದ ವಿರುದ್ಧದ ಪ್ರತಿವಾದಿಯಾಗಿದೆ. ಸುಪ್ರೀಂ ಕೋರ್ಟ್ ಜಲ್ಲಿಕಟ್ಟು ಕ್ರೀಡೆಯನ್ನು ಪ್ರಾಣಿ ಹಿಂಸೆಯ ಕಾರಣಕ್ಕೆ ನಿಷೇಧಿಸಿದೆ.
ತಮಿಳು ನಾಡು ವಿಧಾನಸಭೆಯಲ್ಲಿ ವಿಪಕ್ಷ ನಾಯಕನಾಗಿರುವ ಸ್ಟಾಲಿನ್ ಅವರು ಪೇಟಾ ದಂತಹ ಸರಕಾರೇತರ ಸೇವಾ ಸಂಘಟನೆಗಳನ್ನು ನಿಷೇಧಿಸಬೇಕು; ಏಕೆಂದರೆ ಅವುಗಳು ರಾಷ್ಟ್ರ ವಿರೋಧಿ, ಸಮಾಜ ವಿರೋಧಿ ಮತ್ತು ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯ ವಿರೋಧಿಗಳಾಗಿವೆ ಎಂದು ಹೇಳಿದ್ದಾರೆ.