Advertisement

Addur ಸೇತುವೆಯಲ್ಲಿ ಸಂಚಾರ ನಿಷೇಧದಿಂದ ಖಾಸಗಿ ಬಸ್‌ಗಳಿಗೆ ಹೊಡೆತ

01:26 PM Sep 26, 2024 | Team Udayavani |

ಬಂಟ್ವಾಳ: ಸಾಮರ್ಥ್ಯ ಪರೀಕ್ಷೆಯ ಹಿನ್ನೆಲೆ ಪೊಳಲಿ ಸಮೀಪದ ಅಡ್ಡೂರು ಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧದಿಂದ ಬಿ.ಸಿ.ರೋಡ್‌- ಪೊಳಲಿ-ಕೈಕಂಬ ರೂಟ್‌ನಲ್ಲಿ ಸಂಚರಿಸುವ ಖಾಸಗಿ ಬಸ್ಸುಗಳಿಗೆ ದೊಡ್ಡ ಹೊಡೆತ ಬಿದ್ದಿದೆ ಎಂದು ಹೇಳಿರುವ ಬಸ್ಸು ಮಾಲಕರು ಈ ಮಾಸಾಂತ್ಯಕ್ಕೆ ಅನಿವಾರ್ಯವಾಗಿ ಕಾನೂನು ಪ್ರಕಾರ ತಮ್ಮ ಟ್ಯಾಕ್ಸ್‌ ಸರಂಡರ್‌ ಮಾಡಿ ಬಸ್ಸು ಸಂಚಾರ ಸ್ಥಗಿತಗೊಳಿಸಲು ಚಿಂತನೆ ನಡೆಸಿದ್ದಾರೆ.

Advertisement

ಸೇತುವೆಯಲ್ಲಿ ಘನ ವಾಹನ ನಿಷೇಧದಿಂದ ಪ್ರಸ್ತುತ ಬಸ್ಸುಗಳು ಬಿ.ಸಿ.ರೋಡಿನಿಂದ ಪೊಳಲಿ ಹಾಗೂ ಕೈಕಂಬದಿಂದ ಅಡ್ಡೂರುವರೆಗೆ ಸಾಗುತ್ತಿದ್ದು, ಇದರಿಂದ ಬಸ್ಸುಗಳಿಗೆ ಟ್ರಿಪ್‌ ಇಲ್ಲದಾಗಿದೆ. ದಿನನಿತ್ಯ ಸುಮಾರು 300 ಕಿ.ಮೀ. ಓಡುತ್ತಿದ್ದ ಬಸ್ಸುಗಳು ಪ್ರಸ್ತುತ 170-180 ಕಿ.ಮೀ. ಓಡುತ್ತಿವೆ. ಉಳಿದ ಹೊತ್ತಿನಲ್ಲಿ ಬಸ್ಸುಗಳು ನಿಂತೇ ಇರಬೇಕಾಗಿದ್ದು, ಇಂತಹ ಟ್ರಿಪ್‌ನಿಂದ ಪ್ರಯಾಣಿಕರು ಕೂಡ ಇಲ್ಲವಾಗಿದ್ದು, ಜತೆಗೆ ಚಾಲಕ-ನಿರ್ವಾಹಕರಿಗೆ ದಿನದ ಪೂರ್ತಿ ವೇತನ ನೀಡಬೇಕಿರುವುದು ದೊಡ್ಡ ಹೊರೆಯಾಗುತ್ತಿದೆ ಎಂದು ಮಾಲಕರು ಹೇಳುತ್ತಿದ್ದಾರೆ.

ಘನ ವಾಹನ ಸಂಚಾರ ನಿಷೇಧಗೊಂಡು ಒಂದು ತಿಂಗಳು ಹತ್ತು ದಿನ ದಾಟಿದ್ದು, ಬಸ್ಸು ಸಂಚಾರ ಅವಕಾಶ ನೀಡುವ ಕುರಿತು ಇನ್ನೂ ಕೂಡ ಸೂಕ್ತ ನಿರ್ಧಾರ ತೆಗೆದುಕೊಂಡಿಲ್ಲ. ಸೇತುವೆಯ ತಪಾಸಣೆಯ ವರದಿಯ ಕುರಿತು ಕೂಡ ಜಿಲ್ಲಾಡಳಿತ ಯಾವುದೇ ಆಲೋಚನೆ ಮಾಡುತ್ತಿಲ್ಲ. ಸೇತುವೆ ಮಧ್ಯೆ ಬಸ್ಸು ಓಡದೆ ಪ್ರಯಾಣಿಕರು ಕೈಕಂಬ-ಪೊಳಲಿ ಮಧ್ಯೆ ಆಟೋಗಳ ಮೂಲಕವೇ ಸಾಗುತ್ತಿದ್ದಾರೆ ಎನ್ನಲಾಗಿದೆ.

ಚೆಕ್‌ಪೋಸ್ಟ್‌ನಿಂದ ಘನ ವಾಹನ ನಿಯಂತ್ರಿಸಲಿ
ಬಿ.ಸಿ.ರೋಡು-ಪೊಳಲಿ-ಕೈಕಂಬ-ಮಂಗಳೂರು, ಬಿ.ಸಿ.ರೋಡು-ಪೊಳಲಿ-ಕೈಕಂಬ-ಬಜ್ಪೆ-ಕಟೀಲು-ಕಿನ್ನಿಗೋಳಿ ರೂಟ್‌ನಲ್ಲಿ ದಿನನಿತ್ಯ ಸುಮಾರು 35 ಬಸ್ಸುಗಳು ಹಲವು ಟ್ರಿಪ್‌ ನಡೆಸುತ್ತಿದ್ದು, ಪ್ರಸ್ತುತ ಈ ಬಸ್ಸುಗಳಿಗೆ ಕೇವಲ ಅರ್ಥದಷ್ಟು ಟ್ರಿಪ್‌ ಮಾತ್ರ ಇದೆ. ಬಸ್ಸುಗಳು ಘನ ವಾಹನ ಅಲ್ಲವಾದರೂ ಸೇತುವೆಗೆ ಅಡ್ಡಲಾಗಿ ಗಾರ್ಡ್‌ ಅಳವಡಿಸಿರುವುದರಿಂದ ಬಸ್ಸುಗಳಿಗೆ ಸೇತುವೆ ದಾಟಲು ಸಾಧ್ಯವಾಗುತ್ತಿಲ್ಲ. ಘನ ವಾಹನಗಳು ಕೂಡ ಬಸ್ಸಿನಷ್ಟೇ ಎತ್ತರವಿರುವ ಕಾರಣ ಗಾರ್ಡ್‌ ತೆರವುಗೊಂಡರೆ ಬಸ್ಸಿನ ಜತೆಗೆ ಘನ ವಾಹನಗಳು ಕೂಡ ಸೇತುವೆ ದಾಟುತ್ತವೆ ಎಂಬುದು ದ.ಕ.ಜಿಲ್ಲಾಡಳಿತದ ವಾದವಾಗಿದೆ.

ಪ್ರಸ್ತುತ ಸೇತುವೆಯ ಎರಡೂ ಭಾಗದಲ್ಲಿ ಲೋಕೋಪಯೋಗಿ ಇಲಾಖೆಯ ಮೂಲಕ ಪೊಲೀಸ್‌ ಚೆಕ್‌ಪೋಸ್ಟ್‌ ನಿರ್ಮಿಸಿ ಗೇಟ್‌ಗಳನ್ನು ಅಳವಡಿಸಲಾಗಿದ್ದು, ಅಲ್ಲಿ ಪೊಲೀಸರನ್ನು ನಿಯೋಜಿಸಿ ಅವರ ಮೂಲಕವೇ ಘನ ವಾಹನಗಳನ್ನು ನಿಯಂತ್ರಿಸಬಹುದು. ರಾತ್ರಿ ವೇಳೆ ಪೊಲೀಸ್‌ ನಿಯೋಜನೆ ಸಾಧ್ಯವಾಗದೆ ಇದ್ದರೆ, ರಾತ್ರಿ ಬಸ್ಸುಗಳ ಓಡಾಟ ನಿಂತ ಬಳಿಕ ಮೇಲಿನ ಗಾರ್ಡ್‌ ಅಳವಡಿಸಲಿ ಎಂಬುದು ಬಸ್ಸು ಮಾಲಕರ ಸಲಹೆಯಾಗಿದೆ.

Advertisement

ಖಾಲಿ ಬಸ್ಸು ದಾಟಿಸುತ್ತೇವೆ
ಬಸ್ಸುಗಳು ಪ್ರಯಾಣಿಕರನ್ನು ತುಂಬಿ ಸೇತುವೆಯಲ್ಲಿ ಸಾಗುವುದು ಅಪಾಯವಾದರೆ ಸೇತುವೆಯ ಎರಡೂ ಭಾಗದಲ್ಲಿ ಪ್ರಯಾಣಿಕರನ್ನು ಇಳಿಸಿ ಸೇತುವೆ ದಾಟಿದ ಬಳಿಕ ಮತ್ತೆ ಹತ್ತಿಸಿಕೊಳ್ಳಲು ಅವಕಾಶ ನೀಡಲಿ. ಈ ಸಂದರ್ಭ ಬಸ್ಸುಗಳು ತೂಕವನ್ನು ತಗ್ಗಿಸಿಕೊಂಡು ಸೇತುವೆಗೆ ಯಾವುದೇ ರೀತಿಯ ಭಾರ ಎನಿಸುವುದಿಲ್ಲ. ಜತೆಗೆ ಬಸ್ಸುಗಳಿಗೂ ತಮ್ಮ ರೂಟ್‌ನಲ್ಲಿ ಪೂರ್ತಿ ಟ್ರಿಪ್‌ ಮಾಡುವುದಕ್ಕೂ ಸಾಧ್ಯವಾಗುತ್ತದೆ ಎಂದು ಬಸ್ಸು ಮಾಲಕರು ಹೇಳುತ್ತಾರೆ.

ಸಂಚಾರ ಬಂದ್‌ ಮಾಡುವ ಯೋಚನೆ
ನಾವು ದ.ಕ.ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಸದ್ಯದ ವ್ಯವಸ್ಥೆಯಲ್ಲಿ ನಷ್ಟದಿಂದ ಬಸ್ಸುಗಳನ್ನು ಓಡಿಸುವುದು ಅಸಾಧ್ಯವಾಗಿದೆ. ಹೀಗಾಗಿ ಅನಿವಾರ್ಯವಾಗಿ ಈ ತಿಂಗಳ ಅಂತ್ಯಕ್ಕೆ ಕಾನೂನು ಪ್ರಕಾರ ಟ್ಯಾಕ್ಸ್‌ ಸರಂಡರ್‌ ಮಾಡಿ ಸಂಚಾರ ಬಂದ್‌ ಮಾಡುವ ಯೋಚನೆಗೆ ಬಂದಿದ್ದೇವೆ. ಈಗಿನ ವ್ಯವಸ್ಥೆಯಲ್ಲಿ ಪ್ರಯಾಣಿಕರು ಕೂಡ ಬಸ್ಸನ್ನು ಅವಲಂಬಿಸದೆ ಪರ್ಯಾಯ ವ್ಯವಸ್ಥೆಯತ್ತ ಮುಖ ಮಾಡಿದ್ದು, ಎಲ್ಲ ಬಸ್ಸುಗಳು ನಷ್ಟದಿಂದ ಓಡುತ್ತಿವೆ.
-ದುರ್ಗಾಪ್ರಸಾದ್‌ ಹೆಗ್ಡೆ, ಅಧ್ಯಕ್ಷರು, ಕಿನ್ನಿಗೋಳಿ ವಲಯ ಬಸ್ಸು ಮಾಲಕರ ಸಂಘ

-ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next