Advertisement
ಫೇಸ್‌ಬುಕ್, ವಾಟ್ಸ್‌ಆ್ಯಪ್, ಟ್ವಿಟರ್ ಮೂಲಕ ನಾಡಿನ ಜನ ಪ್ರತಿನಿಧಿಗಳು, ಸಿನಿಮಾ ತಾರೆಯರು, ಸಾಹಿತಿಗಳು ಸೇರಿ ವಿವಿಧ ಕ್ಷೇತ್ರಗಳ ಗಣ್ಯರು ಕಂಬಳಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಫೇಸ್‌ಬುಕ್‌ನಲ್ಲಿ “ಸೇವ್ ಕಂಬಳ’ ಹೆಸರಿನಲ್ಲಿ ಅಭಿಯಾನ ಶುರುವಾಗಿದ್ದು, ಈ ಗ್ರೂಪ್‌ನ ಕೆಲವು ಸದಸ್ಯರು ಭಾನುವಾರ ಬೆಳಗ್ಗೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ಕಂಬಳ ನಿಷೇಧದ ವಿರುದ್ಧ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಕಂಬಳಕ್ಕೆ ಬಿಜೆಪಿ ಬೆಂಬಲ ಸೂಚಿಸಿದ್ದು, ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಈ ಬಗ್ಗೆ ಟ್ವಿಟ್ ಮಾಡಿದ್ದಾರೆ. ಕಂಬಳ ನಿಷೇಧ ಹಿಂಪಡೆಯಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಿಎಂ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದ್ದಾರೆ. ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಮಾಜಿ ಸಚಿವ ಎಸ್.ಸುರೇಶ್ ಕುಮಾರ್, ನಟ ಜಗ್ಗೇಶ್ ಸೇರಿದಂತೆ ಹಲವರು ಕಂಬಳ ಪುನಾರಂಭಕ್ಕೆ ಆಗ್ರಹಿಸಿದ್ದಾರೆ. ಮೈಸೂರಿನಲ್ಲಿ ಕರ್ನಾಟಕ ಕಾವಲುಪಡೆ ಕಾರ್ಯಕರ್ತರು ಕಂಬಳಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ದೆಹಲಿ ಕರ್ನಾಟಕ ಸಂಘ ಕೂಡ ಭಾನುವಾರ ಸಾಂಕೇತಿಕ ಪ್ರತಿಭಟನೆ ನಡೆಸಿತು.
Related Articles
ಕಂಬಳ ನಿಷೇಧಿಸುವಂತೆ ಕೋರಿ ಪೀಪಲ್ ಫಾರ್ ಎಥಿಕಲ್ ಟ್ರೀಟೆ¾ಂಟ್ ಆಫ್ ಅನಿಮಲ್ಸ್ (ಪೆಟಾ) 2016ರ ಫೆಬ್ರವರಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠ, ಅರ್ಜಿ ವಿಚಾರಣೆ ಮುಗಿಯುವವರೆಗೂ ಕಂಬಳ ಆಯೋಜನೆಗೆ ಅನುಮತಿ ನೀಡಬಾರದೆಂದು ಆದೇಶಿಸಿತ್ತು. ಈ ತಡೆಯಾಜ್ಞೆ ತೆರವು ಕೋರಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕಂಬಳ ಸಮಿತಿ ಮಧ್ಯಂತರ ಅರ್ಜಿ ಸಲ್ಲಿಸಿದ್ದು, ಇದರ ವಿಚಾರಣೆ ಜ.30ರಂದು ನಡೆಯಲಿದೆ.
Advertisement
ಕಂಬಳ ಸಮಿತಿ ಸಭೆಮೂಡಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಮತ್ತು ಸ್ಥಳೀಯ ಕೋಟಿ ಚೆನ್ನಯ ಕಂಬಳ ಸಮಿತಿ ಸಹಭಾಗಿತ್ವದಲ್ಲಿ ಮೂಡಬಿದಿರೆಯಲ್ಲಿ ಜ.28ರಂದು “ಕಂಬಳ’ ನಡೆದೇ ನಡೆಯುತ್ತದೆ ಎಂದು ಕಂಬಳ ಸಮಿತಿ ಹೇಳಿದೆ. ಕೋರ್ಟ್ ಒಪ್ಪಿದರೆ ವಿಜಯೋತ್ಸವ ಸ್ವರೂಪಿ ಕಂಬಳ ಇಲ್ಲದೇ ಇದ್ದರೆ, “ಪ್ರತಿಭಟನಾತ್ಮಕ ಕಂಬಳ’ ನಡೆಯಲಿದೆ ಎಂದು ಸಮಿತಿ ತಿಳಿಸಿದೆ. ಭಾನುವಾರ ಮೂಡಬಿದಿರೆಯಲ್ಲಿ ಕಾಸರಗೋಡು ಸೇರಿದಂತೆ ಅವಿಭಜಿತ ದ.ಕ. ಜಿಲ್ಲಾ ಕಂಬಳ ಸಮಿತಿ ವತಿಯಿಂದ ತುರ್ತು ಸಭೆ ನಡೆಯಿತು. ಕಂಬಳ ಆರಂಭಕ್ಕೆ ಅಗತ್ಯವಿರುವ ಹೋರಾಟಕ್ಕೆ ತಾವು ಜನತೆಯ ಪರವಾಗಿದ್ದು ಜೈಲಿಗೆ ಹೋಗಲೂ ಸಿದ್ಧ ಎಂದು ಶಾಸಕ, ಮೂಡಬಿದಿರೆ ಕಂಬಳ ಸಮಿತಿ ಅಧ್ಯಕ್ಷ ಕೆ. ಅಭಯಚಂದ್ರ ಹೇಳಿದರು.