ಚೆನ್ನೈ:ತಮಿಳುನಾಡಿನ ಜಲ್ಲಿಕಟ್ಟು ಕ್ರೀಡೆ ಮೇಲಿನ ನಿಷೇಧಕ್ಕೆ ಶಾಶ್ವತ ಪರಿಹಾರ ನೀಡಬೇಕೆಂದು ಆಗ್ರಹಿಸಿ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಬಲವಂತವಾಗಿ ತೆರವುಗೊಳಿಸಲು ಮುಂದಾಗಿದ್ದ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಘರ್ಷಣೆ ಸೋಮವಾರ ತೀವ್ರ ಹಿಂಸಾರೂಪಕ್ಕೆ ಕಾರಣವಾಗಿತ್ತು. ಏತನ್ಮಧ್ಯೆ ರಸ್ತೆಯ ಸಮೀಪ ನಿಲ್ಲಿಸಿದ್ದ ಆಟೋಗಳಿಗೆ ಪೊಲೀಸರೇ ಬೆಂಕಿ ಹಚ್ಚಿದ್ದಾರೆಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಾಗಿಲ ಬಳಿ ನಿಂತಿದ್ದ ಮಹಿಳೆಯೊಬ್ಬರ ಬಳಿ ಪೊಲೀಸ್ ಪೇದೆಯೊಬ್ಬ ಲಾಠಿಯೊಂದಿಗೆ ಆಗಮಿಸಿ ಹಿಗ್ಗಾಮುಗ್ಗಾ ಹೊಡೆಯುತ್ತಿದ್ದರೆ, ಮತ್ತೊಬ್ಬ ಪೊಲೀಸ್ ಕೂಡಾ ಆಕೆ ಮೇಲೆಯೇ ಲಾಠಿಪ್ರಹಾರ ಮುಂದುವರಿಸಿದ್ದ. ಮೂರನೇ ಪೊಲೀಸ್ ಸಹ ಹೊಡೆಯಲು ಯತ್ನಿಸಿದಾಗ ಆಕೆ ಒಳಗೆ ಓಡುತ್ತಿರುವ ದೃಶ್ಯ ಮತ್ತೊಂದು ವಿಡಿಯೋದಲ್ಲಿ ದಾಖಲಾಗಿದೆ.
ಜಲ್ಲಿಕಟ್ಟು ಪ್ರತಿಭಟನೆ ವೇಳೆ ಪೊಲೀಸರೇ ಹಿಂಸಾಚಾರಕ್ಕೆ ಇಳಿದಿದ್ದು, ಆಟೋರಿಕ್ಷಾಗಳಿಗೆ ಬೆಂಕಿಹಚ್ಚಿರುವುದಾಗಿ ಈ ವಿಡಿಯೋದಲ್ಲಿ ಆರೋಪಿಸಲಾಗಿದೆ. ಆದರೆ ಈ ಫೋಟೋಗ್ರಾಫ್ಸ್ ಮತ್ತು ವಿಡಿಯೋ ಕುರಿತು ಪ್ರತಿಕ್ರಿಯೆ ನೀಡಿರುವ ಚೆನ್ನೈ ನಗರ ಪೊಲೀಸ್ ಆಯುಕ್ತ ಎಸ್.ಜಾರ್ಜ್, ಪೊಲೀಸರೇ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆಂಬ ಆರೋಪವನ್ನು ಅಲ್ಲಗಳೆದಿದ್ದಾರೆ. ಇದು ತಿರುಚಿರುವ ವಿಡಿಯೋ ಎಂದು ದೂರಿದ್ದು, ಈ ವಿಡಿಯೋ ಫೂಟೇಜ್ ಸತ್ಯಾಸತ್ಯತೆ ತಿಳಿಯಲು ಸೈಬರ್ ಕ್ರೈಂ ವಿಭಾಗಕ್ಕೆ ಕಳುಹಿಸಿರುವುದಾಗಿ ತಿಳಿಸಿದ್ದಾರೆ.
ವಿಡಿಯೋ ಫೂಟೇಜ್ ಅನ್ನು ನಟ ಕಮಲ್ ಹಾಸನ್ ಕೂಡಾ ತಮ್ಮ ಫೇಸ್ ಬುಕ್ ನಲ್ಲಿ ಶೇರ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರೇ ದುಷ್ಕೃತ್ಯಕ್ಕೆ ಇಳಿದಿರುವ ವಿಡಿಯೋದ ಬಗ್ಗೆ ಆಘಾತ ವ್ಯಕ್ತಪಡಿಸಿ, ಪೊಲೀಸರು ಆಟೋಗಳಿಗೆ ಬೆಂಕಿ ಹಚ್ಚುತ್ತಿರುವುದು ಸುಳ್ಳು ಎಂದು ಭಾವಿಸುತ್ತೇನೆ, ಅದರಲ್ಲಿರುವುದು ನಿಜವಾದ ಪೊಲೀಸರಲ್ಲ, ನಕಲಿ ಆಗಿರಲಿ ಎಂಬ ಭಾವನೆ ನನ್ನದಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ ವೇಳೆ ಪೊಲೀಸರೇ ಬೆಂಕಿಹಚ್ಚಿದ್ದಾರೆಂಬ ವಿಡಿಯೋ ತೀವ್ರ ವಿವಾದಕ್ಕೆ ಹಾಗೂ ಚರ್ಚೆಗೆ ಗ್ರಾಸವಾಗಿದೆ ಎಂದು ಮಾಧ್ಯಮದ ವರದಿ ತಿಳಿದಿದೆ.