Advertisement
ಕಳೆದ 2023ರ ಜ.21ರಂದು ಪಟ್ಟಣದ ಕ್ರೀಡಾಂಗಣದಲ್ಲಿ ಒಟ್ಟು 690.24 ಕೋಟಿ ರೂ. ವೆಚ್ಚದ ಬಹುಗ್ರಾಮ ಕುಡಿಯುವ ನೀರು ಹಾಗೂ ಜಲ ಜೀವನ್ ಮಿಷನ್ ಯೋಜನೆಗೆ ಶಂಕುಸ್ಥಾಪನೆ ಯನ್ನು ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ, ಸಂಸದ ಪ್ರಜ್ವಲ್ ರೇವಣ್ಣ, ಕ್ಷೇತ್ರದ ಶಾಸಕರಾಗಿದ್ದ ಎ.ಟಿ.ರಾಮಸ್ವಾಮಿ ನೆರವೇರಿಸಿದ್ದರು. ಆದರೆ, ಚುನಾವಣೆ ನಂತರ ಹಾಲಿ ಶಾಸಕ ಎ.ಮಂಜು ಅವಧಿಯಲ್ಲಿ ಕಾಮಗಾರಿಗೆ ಚಾಲನೆ ನೀಡಿದ್ದು, ಶೇ.50ರಷ್ಟು ಕಾಮಗಾರಿ ಮುಗಿದಿದ್ದು, ಉಳಿದ ಕೆಲಸ ಪ್ರಗತಿಯಲ್ಲಿದೆ.
Related Articles
Advertisement
ಕಳಪೆ ಕಾಮಗಾರಿ ಆರೋಪ: ಈಗಾಗಲೇ ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಗ್ರಾಮದಲ್ಲಿ ಪೈಪ್‌ಲೈನ್, ಮೀಟರ್ ಅಳವಡಿಕೆ ಕೆಲಸ ಪ್ರಗತಿಯಲ್ಲಿದೆ. ಅದೇ ರೀತಿ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ನದಿಯಿಂದ ಓವರ್ ಹೆಡ್ ಟ್ಯಾಂಕ್ ತನಕ ಎಚ್‌ಡಿಪಿಒ ಗುಣ ಮಟ್ಟದ ಪೈಪ್‌ಲೈನ್ ಅಳವಡಿಸಲಾಗುತ್ತಿದೆ. ಯೋಜನೆ ಯಲ್ಲಿ ಒಟ್ಟು 303 ಓವರ್‌ಹೆಡ್ ಟ್ಯಾಂಕ್ ನಿರ್ಮಾಣ ಮಾಡಬೇಕಿದ್ದು, ಈ ಪೈಕಿ ಈಗಾಗಲೇ 150 ಟ್ಯಾಂಕ್ ನಿರ್ಮಾಣಗೊಂಡಿವೆ. ಶೇ.50ರಷ್ಟು ಪೈಪ್‌ಲೈನ್ ಕೆಲಸ ಕೂಡ ಮುಗಿದಿದೆ. ಆದರೆ, ಕೆಲವು ಕಡೆ ಕಳಪೆ ಟ್ಯಾಂಕ್ ನಿರ್ಮಾಣ, ಅವೈಜ್ಞಾನಿಕ ಪೈಪ್‌ಲೈನ್ ಅಳವಡಿಕೆ ಮಾಡಿರುವುದು ಕಂಡುಬಂದಿದೆ. ತಾಲೂಕಿನಲ್ಲಿ ನೀರಿನ ಅಭಾವ ಹಿನ್ನೆಲೆ ಕಾಂಕ್ರಿಟ್‌ನಿಂದ ನಿರ್ಮಾಣ ಗೊಂಡಿರುವ ಓವರ್‌ಹೆಡ್ ಟ್ಯಾಂಕ್ ಸರಿಯಾಗಿ ಕ್ಯೂರಿಂಗ್ ಆಗಿಲ್ಲ ಎಂಬುದು ಸ್ಥಳೀಯ ನಿವಾಸಿಗಳ ಆರೋಪವಾಗಿದೆ.
ಕೆಲಸಗಾರರಿಂದಲೇ ಪೈಪ್‌ನಲ್ಲಿ ಅಳವಡಿಸಿರುವ ಕಾಪರ್ ವೈರ್ ಕಳವು :
ಈಗಾಗಲೇ ಬಾನುಗುಂದಿ ಗ್ರಾಮದ ಬಳಿಯಿಂದ 260 ಗ್ರಾಮಗಳಿಗೆ ನೀರು ಸರಬರಾಜು ಮಾಡುವ ನೂತನ ಓವರ್ ಹೆಡ್ ಟ್ಯಾಂಕ್‌ಗಳಿಗೆ ಕಾಪರ್ ವೈರ್ ಇರುವ ಪೈಪ್‌ಲೈನ್ ಹೂಳುವ ಕೆಲಸ ನಡೆಯುತ್ತಿದೆ. ಇದು ಆಂಧ್ರ ಮೂಲದ ಗುತ್ತಿಗೆದಾರನಿಗೆ ಕಾಮಗಾರಿ ನೀಡಲಾಗಿದೆ. ಸ್ಥಳೀಯವಾಗಿ ಗುತ್ತಿಗೆ ಪಡೆದು ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು ಪೈಪ್‌ನಲ್ಲಿ ಅಳವಡಿಸಿರುವ ಕಾಪರ್ ವೈರ್‌ಗಳನ್ನು ಬಿಚ್ಚಿ ಹಣಕ್ಕಾಗಿ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಈ ಕಾಪರ್ ವೈರ್ ಅಳವಡಿಕೆ ಪೈಪ್‌ನಲ್ಲಿ ಸಮಸ್ಯೆ ಕಂಡುಬಂದರೆ ಎಷ್ಟು ದೂರದಲ್ಲಿ ಸಮಸ್ಯೆ ಇದೆ ಎಂಬುದನ್ನು ತಿಳಿಯುವ ಸಲುವಾಗಿ ಪೈಪ್ ಉತ್ಪಾದನೆ ಮಾಡುವ ಸಂದರ್ಭದಲ್ಲಿ ಅಳವಡಿಸಲಾಗಿದೆ. ಆದರೆ, ಕಾರ್ಮಿಕರು ಹಣದಾಸೆಗಾಗಿ ಕಾಪರ್ ವೈರ್ ಕದಿಯುತ್ತಿರುವುದು ಕಂಡುಬಂದಿದೆ.
ಕಾಪರ್ ವೈರ್ ಕಳವು; ಗುತ್ತಿಗೆದಾರನಿಗೆ ನೋಟಿಸ್: ಎಇಇ ನವೀನ್‌ಕುಮಾರ್ :
ನೀರು ಸರಬರಾಜು ಮಾಡುವ ವೇಳೆ ಪೈಪ್‌ನಲ್ಲಿ ಸಮಸ್ಯೆ ತಿಳಿಯುವ ಸಲುವಾಗಿ ಇಡೀ ಸರಬರಾಜು ಆಗಿರುವ 300 ಅಡಿ ರೋಲ್‌ನಲ್ಲಿ ಕಾಪರ್ ಅಳವಡಿಸಿರುವುದು ಕಂಡುಬಂದಿದೆ. ಇದು ಸಮಸ್ಯೆಯನ್ನು ತಿಳಿಯುವ ಡಿಟೆಕ್ಟರ್ ಆಗಿದೆ. ಮಾಗೋಡು ಗ್ರಾಮದ ಬಳಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು ಕಾಪರ್ ವೈರ್ ಬಿಚ್ಚಿರುವುದು ಕಂಡುಬಂದಿದೆ. ಈ ಕುರಿತು ಗುತ್ತಿಗೆದಾರನಿಗೆ ನೋಟಿಸ್ ನೀಡಲಾಗಿದ್ದು, ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಕುಡಿಯುವನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ನವೀನ್‌ಕುಮಾರ್ ತಿಳಿಸಿದ್ದಾರೆ.
ಜಲಜೀವನ್ ಮಿಷನ್, ಬಹು ಗ್ರಾಮ ಕುಡಿವ ನೀರು ಸರಬರಾಜು ಮನೆ ಮನೆಗೆ ನೀರು ಯೋಜನೆಗೆ ಸಂಬಂಧಿಸಿ ಗುಣಮಟ್ಟದಿಂದ ಕೆಲಸ ನಡೆಯುತ್ತಿಲ್ಲ. ಕಾರ್ಮಿಕರು ಪೈಪ್‌ನಲ್ಲಿ ಅಳವಡಿಸಿದ್ದ ಕಾಪರ್ ವೈರ್ ಕಿತ್ತು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಿದೆ. -ಮಾಗೋಡು ಧರ್ಮ, ರೈತ
-ವಿಜಯ್‌ಕುಮಾರ್