ವಿಟ್ಲ: ಕರೋಪಾಡಿ ಗ್ರಾ.ಪಂ. ಮತ್ತು ಕೇರಳದ ಗಡಿಭಾಗವಾದ ಮುಗುಳಿಯಲ್ಲಿ ಗಿಡಗಂಟಿಗಳ ಮಧ್ಯೆ ಎರಡು ಬೈಕ್, ಎರಡು ಲಾಂಗ್, ಕೆಲವು ಬಟ್ಟೆಬರೆಗಳು ಸೋಮವಾರ ಬೆಳಗ್ಗೆ ಸ್ಥಳೀಯರ ಗಮನಕ್ಕೆ ಬಂದಿದ್ದು, ತತ್‌ಕ್ಷಣ ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Advertisement
ಎ. 20ರಂದು ಗ್ರಾ.ಪಂ. ಉಪಾಧ್ಯಕ್ಷ ಅಬ್ದುಲ್ ಜಲೀಲ್ ಅವರ ಹತ್ಯೆಗೆ ಆರೋಪಿಗಳು ಇವುಗಳನ್ನು ಬಳಸಿರಬಹುದೆಂಬ ಶಂಕೆಯನ್ನು ಹರಿಯಬಿಡಲಾಗಿದೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಬೈಕ್ ಪಕ್ಕದಲ್ಲಿ ಎರಡು ತಲವಾರ್ ಹಾಗೂ ಕೆಲವು ಪ್ಯಾಂಟ್ ಹಾಗೂ ಶರ್ಟ್‌ಗಳು ಸಿಕ್ಕಿವೆ. ಜಲೀಲ್ ಹತ್ಯೆಯಾದ ಕರೋಪಾಡಿ ಗ್ರಾಮ ಪಂಚಾಯತ್ ಕಚೇರಿಯಿಂದ ಸುಮಾರು ಮೂರು ಕಿ.ಮೀ. ದೂರದಲ್ಲಿ ಇದು ಪತ್ತೆಯಾಗಿರುವುದರಿಂದ ಜಲೀಲ್ ಕೊಲೆಗೂ ಇಲ್ಲಿ ಪತ್ತೆಯಾದ ವಸ್ತುಗಳಿಗೂ ಸಂಬಂಧ ವಿರಬಹುದು ಎಂದು ಅನುಮಾನ ಪಡುವಂತೆ ಮಾಡಲಾಗಿದೆ. ಪೊಲೀಸರು ಸೊತ್ತುಗಳನ್ನು ವಶಕ್ಕೆ ಪಡೆದು ಕೊಂಡು ತನಿಖೆ ನಡೆಸುತ್ತಿದ್ದಾರೆ.
Related Articles
ಜಲೀಲ್ ಹತ್ಯೆ ಪ್ರಕರಣದ ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನವೇ? ಎಂದು ಸ್ಥಳೀಯರು ಆಡಿಕೊಳ್ಳುತ್ತಿದ್ದಾರೆ.
ಜಲೀಲ್ ಅವರ ಹತ್ಯೆ ನಡೆಸಲು ಆರೋಪಿಗಳು ಹೊಸ ಎಫ್‌ಝಡ್ ಹಾಗೂ ಕಪ್ಪು ಬಣ್ಣದ ಪಲ್ಸರ್ ಬೈಕಿನಲ್ಲಿ ಬಂದಿರುವುದಾಗಿ ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿತ್ತು. ಇಲ್ಲಿ ಹಳೆಯ ಗುಜರಿಗೆ ಹಾಕಬಹುದಾದ ಎರಡು ಪಲ್ಸರ್ ಬೈಕ್‌ಗಳು ಪತ್ತೆಯಾಗಿವೆ. ಅದಲ್ಲದೇ ಇಲ್ಲಿ ದೊರೆತ ಲಾಂಗ್‌ನಲ್ಲಿ ಯಾವುದೇ ರಕ್ತದ ಕಲೆಗಳು ಕಾಣಿಸುತ್ತಿಲ್ಲ.
ಹತ್ಯೆ ನಡೆಸಿದ ಬಳಿಕ ಆರೋಪಿಗಳು ಬೇರೆ ಬೇರೆ ರಸ್ತೆಯಲ್ಲಿ ಪರಾರಿಯಾಗಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹೀಗಿರುವಾಗ ಒಂದೇ ಸ್ಥಳದಲ್ಲಿ ಎರಡು ಬೈಕ್ ಪತ್ತೆಯಾಗಲು ಹೇಗೆ ಸಾಧ್ಯ ?
Advertisement
ಕನ್ಯಾನದ ಬೈಕ್ ಪತ್ತೆಯಾದ ಎರಡು ಬೈಕ್‌ಗಳಲ್ಲಿ ಒಂದು ಕನ್ಯಾನ ನಿವಾಸಿಯೊಬ್ಬರದ್ದು. ಅದು ಕೆಟ್ಟು ಹೋಗಿದ್ದು ಸ್ಟಾರ್ಟ್ ಆಗದ ಪರಿಣಾಮ ಕನ್ಯಾನ ಸಾರ್ವಜನಿಕ ಶೌಚಾಲಯ ಸಮೀಪ ನಿಲ್ಲಿಸಿದ್ದರು. ಈ ಬೈಕನ್ನು ಕದ್ದು ತಂದು ಇಲ್ಲಿ ನಿಲ್ಲಿಸಲಾಗಿದೆ. ದಿಕ್ಕು ತಪ್ಪಿಸುವ ಯತ್ನ ಎಂಬುದಕ್ಕೆ ಇದಕ್ಕಿಂತ ಬೇರೆ ಆಧಾರಗಳು ಅಗತ್ಯವೇ ಇಲ್ಲ.