Advertisement

“ಜಲಸಿರಿ’: ಬೆಂದೂರ್‌ನಲ್ಲಿ ಪ್ರಾಯೋಗಿಕ ಜಾರಿ; 585 ನೀರಿನ ಸಂಪರ್ಕ

11:52 AM Feb 24, 2023 | Team Udayavani |

ಮಹಾನಗರ: ಮಂಗಳೂರು ನಗರ ವ್ಯಾಪ್ತಿ ಯಲ್ಲಿ 24 ಗಂಟೆಯೂ ನೀರು ಪೂರೈಸುವ ಜಲಸಿರಿ ಯೋಜನೆ ಅನುಷ್ಠಾನ ವೇಗ ಪಡೆದಿದ್ದು, ಇದರಂತೆ ನಗರದ ಬೆಂದೂರ್‌ ವಲಯ ವ್ಯಾಪ್ತಿಯಲ್ಲಿ ಯೋಜನೆಯ ಪ್ರಾಯೋಗಿಕ ಅನುಷ್ಠಾನಕ್ಕೆ ಎಲ್ಲ ಸಿದ್ಧತೆ ನಡೆಸಲಾಗುತ್ತಿದೆ.

Advertisement

ವಲಯ 18ಸಿ (ಬೆಂದೂರ್‌)ಅನ್ನು 4 ಉಪವಲಯಗಳನ್ನಾಗಿ ವಿಂಗಡಿಸಲಾಗಿದ್ದು, ಅದರಲ್ಲಿ 2 ಉಪವಲ ಯಗಳ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಇನ್ನುಳಿದ ಕಾಮಗಾರಿ ಪ್ರಗತಿಯಲ್ಲಿದೆ. 11.43 ಕಿ.ಮೀ ಕೊಳವೆ ವಿತರಣಾ ಜಾಲವನ್ನು ಅಳವಡಿಸಲು ಉದ್ದೇಶಿಸಲಾಗಿದ್ದು, ಅದರಲ್ಲಿ ಈಗಾಗಲೇ 10.14 ಕಿ.ಮೀ ವಿತರಣಾ ಜಾಲವನ್ನು ಅಳವಡಿಸಲಾಗಿದೆ. ಇಲ್ಲಿ 585 ಮನೆ, ಸಮುತ್ಛಯದ ಸಂಪರ್ಕ ಗುರುತಿಸಲಾಗಿದೆ. ಈ ಎಲ್ಲ ಸಂಪರ್ಕಗಳಿಗೆ ತಿಂಗಳೊಳಗೆ ನೀರಿನ ಸಂಪರ್ಕ ಮಾಡುವ ಬಗ್ಗೆ ಉದ್ದೇಶಿಸಲಾಗಿದೆ.

ಈ ಮಧ್ಯೆ 585 ಸಂಪರ್ಕಗಳ ಪೈಕಿ ಸುಮಾರು 200 ಸಂಪರ್ಕಗಳಿಗೆ ಈಗಾಗಲೇ ನೀರು ವಿತರಣೆಯೂ ನಡೆಯುತ್ತಿದೆ. ಇಲ್ಲಿನ ಹಳೆ ಪೈಪ್‌ಲೈನ್‌ ಬದಲು ಹೊಸ ಪೈಪ್‌ಲೈನ್‌ನಲ್ಲಿ ನೀರು ವಿತರಿಸಲಾಗುತ್ತಿದೆ. ಎಸ್‌ಸಿಎಸ್‌ ಆಸ್ಪತ್ರೆ ಭಾಗದಿಂದ ಬಲ್ಮಠ ಜಂಕ್ಷನ್‌, ಪೋಸ್ಟ್‌ ಆಫೀಸ್‌ ಭಾಗದ ಪರಿಧಿಯಲ್ಲಿ ಹೊಸ ಪೈಪ್‌ಲೈನ್‌ ಇದಕ್ಕಾಗಿ ಅಳವಡಿಸಿದೆ.

1 ಟ್ಯಾಂಕ್‌ ಮೀಸಲು
ಬೆಂದೂರ್‌ವೆಲ್‌ನಲ್ಲಿ 9, 10 ಹಾಗೂ 15 ಲಕ್ಷ ಲೀಟರ್‌ ಸಾಮರ್ಥಯದ ಮೂರು ಪ್ರತ್ಯೇಕ ಟ್ಯಾಂಕ್‌ಗಳಿವೆ. ಇದರಲ್ಲಿ 10 ಲಕ್ಷ ಲೀ. ನೀರಿನ ಒಂದು ಟ್ಯಾಂಕ್‌ ಅನ್ನು ಜಲಸಿರಿ ಪ್ರಾಯೋಗಿಕ ಅನುಷ್ಠಾನಕ್ಕಾಗಿ ಬೆಂದೂರ್‌ ವಲಯ ಕ್ಕಾಗಿ ಮೀಸಲಿರಿಸಲಾಗಿದೆ. ಈ ಟ್ಯಾಂಕ್‌ ನಿಂದ ಹಳೆ ಪೈಪ್‌ಲೈನ್‌ಗೆ ಇದ್ದ ನೀರಿನ ಸಂಪರ್ಕವನ್ನು ಹೊಸ ಪೈಪ್‌ಲೈನ್‌ಗೆ ಜೋಡಿಸಲಾಗಿದೆ.

ಬೆಂದೂರು 10 ಲ.ಲೀ ಮೇಲ್ಮಟ್ಟದ ಜಲಸಂಗ್ರಹಗಾರದಿಂದ ನೀರು ಪೂರೈಸಲಾಗುತ್ತಿದೆ. ಈ ಮೇಲ್ಮಟ್ಟದ ಜಲ ಸಂಗ್ರಹಗಾರಕ್ಕೆ “ಫ್ಲೋ ಮೀಟರ್‌’ ಅಳವಡಿಸಲಾಗಿದೆ. ಇದರಿಂದಾಗಿ ದಿನನಿತ್ಯ ಬಳಸುವ ನೀರಿನ ಪ್ರಮಾಣ ವನ್ನು ತಿಳಿಯಬಹುದಾಗಿದೆ. ಸುಮಾರು 585 ನೀರಿನ ಗ್ರಾಹಕರ ಮಾಪಕಗಳನ್ನು ಬದಲಾಯಿಸಿ ಉತ್ತಮ ತಾಂತ್ರಿಕತೆಯ ಹೊಸ ಮಾಪಕಗಳನ್ನುಅಳವಡಿಸಲು ಉದ್ದೇಶಿಸಲಾಗಿದೆ. ಇದರಂತೆ ಈಗಾಗಲೇ 200 ಮನೆಗಳಿಗೆ ನಳ ಸಂಪರ್ಕ ಕಲ್ಪಿಸಿ ಹೊಸ ಮಾಪಕ ಅಳವಡಿಸಲಾಗಿದೆ. 300 ಮನೆ ಕಂಪೌಂಡವರೆಗೆ ನಳ ಸಂಪರ್ಕ ಕೊಳವೆಯನ್ನು ಅಳವಡಿಸಲಾಗಿದ್ದು ಜೋಡಣೆ ಕಾಮಗಾರಿ ಪ್ರಗತಿಯಲ್ಲಿರುತ್ತದೆ.

Advertisement

ನೀರಿನ ಕೊರತೆ-ಸವಾಲು!
ಜಲಸಿರಿ ಯೋಜನೆಯಲ್ಲಿ 24 ಗಂಟೆಯೂ ನಿರಂತರ ಕುಡಿಯುವ ನೀರು ಒದಗಿಸುವ ಉದ್ದೇಶವಿದೆ. ಆದರೆ ಸದ್ಯ ತುಂಬೆ ಡ್ಯಾಂನಲ್ಲಿ ನೀರಿನ ಲಭ್ಯತೆ ಸಾಕಷ್ಟು ಇಲ್ಲದ ಕಾರಣದಿಂದ 24 ಗಂಟೆಯೂ ನೀರು ಕೊಡುವುದು ಪ್ರಾಯೋಗಿಕವಾಗಿ ಕಷ್ಟ ಎಂಬುದು ಅಧಿಕಾರಿಗಳ ಲೆಕ್ಕಾಚಾರ. ಹೀಗಾಗಿ ಸದ್ಯ ಕನಿಷ್ಠ 3-4 ಗಂಟೆಯಾದರೂ ನೀರು ನೀಡುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ.

ಎಲ್ಲ ವಾರ್ಡ್‌ ವ್ಯಾಪ್ತಿ ಯಲ್ಲಿಯೂ ಜಲಸಿರಿ ಜಾರಿ ಯಾದ ಬಳಿಕ 24 ಗಂಟೆ ನೀರು ಸರಾಗವಾಗಿ ನೀಡಬೇಕಾದರೆ ತುಂಬೆ ಡ್ಯಾಂ ಮೂಲವೊಂದೇ ಸಾಲದು. ಬದಲಾಗಿ ಪರ್ಯಾಯ ವ್ಯವಸ್ಥೆಯತ್ತ ಗಮನಹರಿಸಬೇಕಾಗುತ್ತದೆ. ಆದರೆ, ಪರ್ಯಾಯದ ಬಗ್ಗೆ ಪಾಲಿಕೆ ಮಾತ್ರ ಗಪ್‌ಚುಪ್‌!

ನಗರ ಪೂರ್ಣ “ಜಲಸಿರಿ’
ಮಂಗಳೂರು ಪಾಲಿಕೆಯ ಎಡಿಬಿ ನೆರವಿನ ಕ್ವಿಮಿಪ್‌ ಜಲ ಸಿರಿ ಯೋಜನೆಯಲ್ಲಿ ಕೆಯು ಐಡಿಎಫ್‌ಸಿ ವತಿಯಿಂದ ಅನುಷ್ಠಾನಿ ಸಲಾಗುತ್ತಿರುವ 24ಗಿ7 ಶುದ್ಧ ಕುಡಿಯುವ ನೀರಿನ ಯೋಜನೆ ಈಗಾಗಲೇ ಬಿರುಸಿನಿಂದ ನಡೆ ಯುತ್ತಿದೆ. ಒಟ್ಟು 792.42 ಕೋ. ರೂ ವೆಚ್ಚದಲ್ಲಿ (ಕಾಮಗಾರಿ ವೆಚ್ಚ 587.67 ಕೋ.ರೂ ಹಾಗೂ 8 ವರ್ಷಗಳ ಅವಧಿಗೆ ಕಾರ್ಯಾ ಚರಣೆ-ನಿರ್ವಹಣೆಗೆ 204.75 ಕೋ. ರೂ)ಕಾಮಗಾರಿ ನಡೆಸಲಾಗುತ್ತಿದೆ.

ಇದರಂತೆ ತುಂಬೆ ರಾಮಲ್‌ ಕಟ್ಟೆಯಲ್ಲಿ 81.7 ಎಂಎಲ್‌ಡಿ ಸಾಮರ್ಥಯದ ನೀರು ಶುದ್ಧೀಕರಣ ಘಟಕ (ಡಬ್ಲ್ಯೂ ಟಿಪಿ)ದ ಉನ್ನತೀಕರಣ, 8 ಸ್ಥಳಗ ಳಲ್ಲಿ ಇಂಟರ್‌ ಮೀಡಿಯೆಟ್‌ ಪಂಪಿಂಗ್‌ ಸ್ಟೇಷನ್‌, 19 ಮೇಲ್ಮಟ್ಟದ ಜಲಸಂಗ್ರಹಗಾರ (ಒಎಚ್‌ಟಿ) ಹಾಗೂ 2 ನೆಲಮಟ್ಟದ ಜಲಸಂಗ್ರಹಣಗಾರಗಳ (ಜಿಎಲ್‌ ಎಸ್‌ಆರ್‌)ನಿರ್ಮಾಣ ಹಾಗೂ 7 ಮೀ. ಒತ್ತಡದೊಂದಿಗೆ 1500 ಕಿ.ಮೀ. ವಿತರಣಾ ಜಾಲ ಹಾಗೂ 96,300 ನೀರಿನ ಜೋಡಣೆಗಳನ್ನು ಉನ್ನತೀಕರಿಸಲು ಈ ಯೋಜನೆಯಲ್ಲಿ ಉದ್ದೇಶಿಸಲಾಗಿದೆ.

ಶೀಘ್ರ ಅನುಷ್ಠಾನ
ಜಲಸಿರಿ ಯೋಜನೆಯ ಅನುಷ್ಠಾನ ಪ್ರಕ್ರಿಯೆ ಮಂಗಳೂರಿನಲ್ಲಿ ನಡೆಯುತ್ತಿದೆ. ಇದರಂತೆ, ಬೆಂದೂರ್‌ ವೆಲ್‌ ವಲಯದಲ್ಲಿ ಜಲಸಿರಿ ಯೋಜನೆ ಪ್ರಾಯೋಗಿಕವಾಗಿ ಅನುಷ್ಠಾನಕ್ಕಾಗಿ ಎಲ್ಲ ಸಿದ್ಧತೆ ನಡೆಸಲಾಗುತ್ತಿದೆ. ಕೆಲವೇ ದಿನದಲ್ಲಿ ಇದರ ಅಧಿಕೃತ ಜಾರಿ ನಡೆಸಲಾಗುವುದು.
– ಜಯಾನಂದ ಅಂಚನ್‌, ಮೇಯರ್‌,
ಮಂಗಳೂರು ಪಾಲಿಕೆ

*ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next