ಜಾಲಹಳ್ಳಿ: ಸಮೀಪದ ಯರಗುಡ್ಡ ಗ್ರಾಮದ ಹೊರವಲಯದ ಗುಡ್ಡದ ಬಳಿ 2017-18ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಯ 8 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಿದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕೊಠಡಿಯನ್ನು ಶೈಕ್ಷಣಿಕ ಚಟುವಟಿಕೆಗೆ ಬಳಸದೇ ಇರುವುದರಿಂದ ಪುಂಡ ಪೋಕರಿಗಳ ಮೋಜು, ಮಸ್ತಿ ಕೇಂದ್ರವಾಗಿ ಮಾರ್ಪಟ್ಟಿದೆ.
ಯರಗುಡ್ಡ ಗ್ರಾಮದ ರಾಜ್ಯ ಹೆದ್ದಾರಿಗೆ ಹೊಂದಿಕೊಂಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಳೆ ಕಟ್ಟಡವಿದ್ದು, ಅಲ್ಲಿ 1ರಿಂದ 7ನೇ ತರಗತಿವರೆಗೆ 112 ವಿದ್ಯಾರ್ಥಿಗಳಿದ್ದಾರೆ. ಮೂರು ಕೊಠಡಿಗಳಿದ್ದು, ನಾಲ್ವರು ಶಿಕ್ಷಕರಿದ್ದಾರೆ. ಇಲ್ಲಿ ಮಕ್ಕಳಿಗೆ ಆಟದ ಮೈದಾನ ವಿಲ್ಲ. ನೀರಿನ ಸೌಲಭ್ಯವಿದೆ. ಮಕ್ಕಳು ಹೆದ್ದಾರಿ ದಾಟಿ ಶಾಲೆಗೆ ಬರಬೇಕಿರುವುದರಿಂದ ಪಾಲಕರು, ಮಕ್ಕಳು ಭಯದಲ್ಲೇ ಶಾಲೆಗೆ ಬರಬೇಕಿದೆ.
ಇನ್ನು ಶಾಲೆಯಲ್ಲಿ ಕೊಠಡಿ ಕೊರತೆ ಇರುವುದರಿಂದ 2017-18ನೇ ಸಾಲಿನಲ್ಲಿ ಕೆಕೆಆರ್‌ಡಿಬಿಯಿಂದ ಶಾಲೆಗೆ ಕೊಠಡಿ ಮಂಜೂರಾಗಿತ್ತು. ಆದರೆ ಹಳೆ ಶಾಲಾ ಕಟ್ಟಡದಲ್ಲಿ ಜಾಗೆ ಇಲ್ಲದ್ದರಿಂದ ಸುಮಾರು 200 ಮೀಟರ್ ಅಂತರದಲ್ಲಿರುವ ಗುಡ್ಡದಲ್ಲಿರುವ ಗಾಂವಠಾಣಾ ಜಾಗೆಯಲ್ಲಿ ಶಾಲಾ ಕೊಠಡಿ ನಿರ್ಮಿಸಿ ಕೈತೊಳೆದುಕೊಳ್ಳಲಾಗಿದೆ. ಶಾಲೆ ಹಳೆ ಕಟ್ಟಡ ಒಂದು ದಿಕ್ಕು ಮತ್ತು ಹೊಸದಾಗಿ ನಿರ್ಮಿಸಿದ ಕೊಠಡಿ ಇನ್ನೊಂದು ದಿಕ್ಕಿಗಿದೆ. ಹೀಗಾಗಿ ಹೊಸ ಕೊಠಡಿ ಶೈಕ್ಷಣಿಕ ಚಟುವಟಿಕೆಗೆ ಬಳಕೆ ಆಗುತ್ತಿಲ್ಲ. ಈ ಬಗ್ಗೆ ಶಿಕ್ಷಣ ಇಲಾಖೆ, ಶಾಲೆ ಶಿಕ್ಷಕರೂ ನಿರ್ಲಕ್ಷ್ಯ ವಹಿಸಿದ್ದಾರೆ.
ಅನೈತಿಕ ಚಟುವಟಿಕೆ: ಗುಡ್ಡದ ಗಾಂವಠಾಣೆ ಜಾಗೆಯಲ್ಲಿ ನಿರ್ಮಿಸಿದ ಹೊಸ ಕೊಠಡಿಗೆ ಬಾಗಿಲಿಗೆ ಬೀಗ ಹಾಕಿಲ್ಲ. ಹೀಗಾಗಿ ಪುಂಡ ಪೋಕರಿಗಳಿಗೆ ಮೋಜು ಮಸ್ತಿ ಕೇಂದ್ರವಾಗಿದೆ. ಶಾಲಾ ಕೊಠಡಿಯನ್ನೇ ಬಾರ್ ರೀತಿ ಬಳಸಿಕೊಳ್ಳುತ್ತಿದ್ದಾರೆ. ಹಗಲಿನಲ್ಲಿ ಈ ಕೊಠಡಿಯಲ್ಲಿ ಇಸ್ಪೀಟ್ ಜೂಜಾಟದಲ್ಲಿ ನಿರತರಾಗಿರುತ್ತಾರೆ. ಶಾಲಾ ಕೊಠಡಿಯಲ್ಲೇ ಮದ್ಯ ಸೇವಿಸುತ್ತಾರೆ. ಕೊಠಡಿ ಒಳಗೆ ಮತ್ತು ಸುತ್ತಮುತ್ತ ಮದ್ಯದ ಬಾಟಲಿ, ಪೌಚ್‌ಗಳು ಬಿದ್ದಿವೆ. ಇನ್ನು ರಾತ್ರಿ ವೇಳೆ ಕೊಠಡಿಯಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತವೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಆಗ್ರಹ: ಯರಗುಡ್ಡ ಗ್ರಾಮದಲ್ಲಿ ಸದ್ಯ ಕಿರಿಯ ಪ್ರಾಥಮಿಕ ಶಾಲೆ ರಾಜ್ಯ ಹೆದ್ದಾರಿ ಪಕ್ಕವೇ ಇದೆ. ಮಕ್ಕಳು ಹೆದ್ದಾರಿ ದಾಟಿ ಶಾಲೆಗೆ ಹೋಗಬೇಕಿದೆ. ಹೆದ್ದಾರಿಯಲ್ಲಿ ವೇಗವಾಗಿ ವಾಹನಗಳು ಸಂಚರಿಸುತ್ತವೆ. ಹೀಗಾಗಿ ಇಲ್ಲಿನ ಶಾಲೆ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು. ಈಗ ಗುಡ್ಡದ ಬಳಿಯ ಗಾಂವಠಾಣಾ ಜಾಗೆಯಲ್ಲಿ ನಿರ್ಮಿಸಿದ ಹೊಸ ಕೊಠಡಿ ಪಕ್ಕವೇ ಜಾಗೆ ಸಮತಟ್ಟು ಮಾಡಿ ಶಾಲೆಗೆ ಅಗತ್ಯವಾದ ಕೊಠಡಿಗಳನ್ನು ನಿರ್ಮಿಸಿ ಶಾಲೆ ಸ್ಥಳಾಂತರಿಸಬೇಕು. ಹೊಸ ಮಕ್ಕಳಿಗೆ ಕ್ರೀಡಾ ಮೈದಾನ, ಕುಡಿಯುವ ನೀರು, ಶೌಚಾಲಯ ಸೌಲಭ್ಯ ಕಲ್ಪಿಸಬೇಕು ಎಂದು ಗ್ರಾಮಸ್ಥರು, ಪಾಲಕರು ಆಗ್ರಹಿಸಿದ್ದಾರೆ.
ಹೊಸದಾಗಿ ನಿರ್ಮಿಸಿದ ಕೊಠಡಿಯಲ್ಲಿ ಕುಡಿವ ನೀರು, ಶೌಚಗೃಹವಿಲ್ಲ. ಸಮತಟ್ಟಾದ ಮೈದಾನ, ರಕ್ಷಣಾ ಗೋಡೆ ಕೊರತೆ ಇದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿ ಕಾರಿಗಳಿಗೆ ಪತ್ರ ಬರೆಯಲಾಗಿದೆ. ಕೋಣೆಯನ್ನು ಉಪಯೋಗ ಮಾಡಿಕೊಳ್ಳುತ್ತೇವೆ.
ದುರಗಪ್ಪ ಚಿಂಚೋಡಿ,
ಮುಖ್ಯಗುರು, ಸ.ಕಿ.ಪ್ರಾ. ಶಾಲೆ ಯರಗುಡ್ಡ
ಹಳೆ ಶಾಲೆ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿದ್ದರಿಂದ ಮಕ್ಕಳನ್ನು ಆತಂಕದ ನಡುವೆ ಶಾಲೆಗೆ ಕಳಿಸಬೇಕು. ಇಲ್ಲಿ ಆಟದ ಮೈದಾನವಿಲ್ಲ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರಿಲ್ಲ. ಆದಷ್ಟು ಬೇಗನೆ ಶಾಲೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಬೇಕು.
ಆನಂದ,
ಗ್ರಾಮಸ್ಥರು ಯರಗುಡ
ಇದು ಇತ್ತೀಚೆಗೆ ನನ್ನ ಗಮನಕ್ಕೆ ಬಂದಿದ್ದು ಶಾಲೆಗೆ ಭೇಟಿ ನೀಡಿದ್ದೇನೆ. ಶಾಲೆಗೆ ಹೋಗಲು ರಸ್ತೆ ಸಮಸ್ಯೆ ಇದೆ. ರಸ್ತೆ ಮತ್ತು ಮೈದಾನ ಸಮತಟ್ಟು ಮಾಡಲು ಗ್ರಾಪಂ ಅಧಿಕಾರಿಗಳಿಗೆ ತಿಳಿಸಲಾಗಿದೆ. ಇನ್ನೊಂದೆರಡು ಕೋಣೆ ಅವಶ್ಯಕತೆ ಇದೆ. ಬರುವ ಜೂನ್ ತಿಂಗಳ ಆರಂಭದಿಂದ ಶಾಲೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು.
ಇಂದಿರಾ,
ಕ್ಷೇತ್ರ ಶಿಕ್ಷಣಾಧಿಕಾರಿ, ದೇವದುರ್ಗ
ಚಂದ್ರಶೇಖರ ನಾಡಗೌಡ