ಸುಳ್ಯ: ವಾರ್ಷಿಕ ಜಾತ್ರೆಯ ಸಂಭ್ರಮದಲ್ಲಿರುವ ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನ ಭಕ್ತನ ಹೂವಿನ ಸೇವೆಗೆ ದೇವಿ ಕ್ಷೇತ್ರ ನಳನಳಿಸುತ್ತಿದೆ. ಗರ್ಭಗುಡಿ, ಗಣಪತಿ ಗುಡಿ, ಒಳಾಂಗಣ, ಹೊರಾಂಗಣ ಗೋಡೆಗಳು, ಛಾವಣಿ ಹೀಗೆ ದೇವಾಲಯ ಎಲ್ಲ ಭಾಗಗಳೂ ಬಣ್ಣ-ಬಣ್ಣದ, ಬಗೆ-ಬಗೆ ಹೂವುಗಳಿಂದ ಅಲಂಕೃತಗೊಂಡಿದೆ. ಶುಕ್ರವಾರ ಭಕ್ತರು ದೇವಿಗೆ ಹೂವಿನ ಪೂಜೆ ಅರ್ಪಿಸುವುದು ವಿಶೇಷ. ಇಲ್ಲಿ ಭಕ್ತನೂರ್ವ ಇಡೀ ದೇವಾಲಯಕ್ಕೆ ಹೂವಿನ ಅಲಂಕಾರದ ಸೇವೆ ಅರ್ಪಿಸಿ ಭಕ್ತಿ ಮೆರೆದಿದ್ದಾರೆ. ಜ. 16ರಿಂದ 21ರ ತನಕ ಈ ಅಲಂಕಾರ ಕಣ್ಮನ ಸೆಳೆಯುತ್ತದೆ. ಪೆರುವಾಜೆ ಶ್ರೀ ಜಲದುರ್ಗಾದೇವಿಯ ಭಕ್ತ, ಪೆರುವಾಜೆ ಗ್ರಾಮದ ನಿವಾಸಿ, ಮಂಗಳೂರಿನ ಐರಿಷ್ ಫ್ಲವರ್ ಸ್ಟಾಲ್ ಮಾಲಕ ಉಮೇಶ್ ಕೊಟ್ಟೆಕಾ ಮತ್ತು ಅವರ ಮನೆ ಮಂದಿ ಪ್ರತಿ ವರ್ಷ ದೇವಸ್ಥಾನ ಹೂವಿನಿಂದ ಅಲಂಕರಿಸುತ್ತಾರೆ. ಉಮೇಶ್ ಹೂವಿನ ಮಾರುಕಟ್ಟೆಯಲ್ಲಿ ಕೆಲಸ ಆರಂಭಿಸಿ, ಬಳಿಕ ಮಂಗಳೂರು ಮತ್ತು ಉಡುಪಿಯಲ್ಲಿ ಐರಿಷ್ ಫ್ಲವರ್ ಸ್ಟಾಲ್ ಸ್ವಂತ ಮಾರಾಟ ಕೇಂದ್ರ ಸ್ಥಾಪಿಸಿದ್ದರು. 100ಕ್ಕೂ ಅಧಿಕ ಮಂದಿಗೆ ಉದ್ಯೋಗ ನೀಡಿದ್ದಾರೆ. ವ್ಯವಹಾರದಲ್ಲಿ ಯಶಸ್ಸು ಗಳಿಸಿರುವ ಅವರು, ಇದಕ್ಕೆ ಜಲದುರ್ಗಾದೇವಿಯ ಕೃಪೆಯೇ ಕಾರಣ ಎಂದು ಭಕ್ತನ ನೆಲೆಯಲ್ಲಿ ದೇವಿಗೆ ಹೂವಿನ ಅಲಂಕಾರ ಮಾಡುತ್ತಾರೆ.
ಲಕ್ಷಾಂತರ ರೂ. ಮೌಲ್ಯ
2006ರಿಂದ ಈ ಸೇವೆ ಆರಂಭಿಸಿದ್ದು, 2016ರ ಬ್ರಹ್ಮಕಲಶ ಸಂದರ್ಭದಲ್ಲಿ ಕೂಡ ದೇವಾಲಯವನ್ನು ಹೂವಿನಿಂದ ಸಿಂಗರಿಸಿದ್ದರು. ಪ್ರತಿ ವರ್ಷವೂ ಹೆಚ್ಚು-ಹೆಚ್ಚು ಹೂವು ಅರ್ಪಿಸುತ್ತಾರೆ. ಈ ಬಾರಿಯ ಜಾತ್ರೆಗೆ ಮಾರುಕಟ್ಟೆ ದರದ ಹಲವು ಲಕ್ಷ ರೂ. ಮೌಲ್ಯದ ಹೂವು ಬಳಸಲಾಗಿದೆ.