Advertisement

ಇಂದಿನಿಂದ ‘ಜಲಾಮೃತ’ಜನಜಾಗೃತಿ

07:50 AM Jun 11, 2019 | Suhan S |

ಗದಗ: ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ ವಾತಾವರಣ ನಿರ್ಮಿಸಿ, ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುವ ಹಾಗೂ ಈಗಾಗಲೇ ನಿರ್ಮಿಸಿರುವ ಶೌಚಾಲಯಗಳನ್ನು ಬಳಸುವ ಬಗ್ಗೆ ಜೂ. 11ರಿಂದ ಒಂದು ತಿಂಗಳ ಕಾಲ ‘ಸ್ವಚ್ಛ ಮೇವ ಜಯತೆ’ ಹಾಗೂ ನೀರು ಸಂಗ್ರಹ, ಸಂರಕ್ಷಣೆ, ಮಿತಬಳಕೆಗಾಗಿ ‘ಜಲಾಮೃತ’ ಜನಜಾಗೃತಿ ಕಾರ್ಯಕ್ರಮವನ್ನು ಆಂದೋಲನ ರೂಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಅಧ್ಯಕ್ಷ ಎಸ್‌.ಪಿ. ಬಳಿಗಾರ ತಿಳಿಸಿದರು.

Advertisement

ಜಿ.ಪಂ. ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಪ್ರತಿಯೊಂದು ಗ್ರಾಮಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಹಾಗೂ ನಿರ್ವಹಣೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ಗ್ರಾಮೀಣ ಜನರಲ್ಲಿ ವೈಯಕ್ತಿಕ, ಗೃಹ ಶೌಚಾಲಯ, ಸಮುದಾಯ ಶೌಚಾಲಯಗಳ ಬಳಕೆಯಿಂದಾಗುವ ಪ್ರಯೋಜನೆಗಳ ಕುರಿತು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಜಾಗೃತಿಗಾಗಿ ಜೂ. 11ರಿಂದ ಜು. 10ರ ವರೆಗೆ ಪ್ರತಿ ಗ್ರಾ.ಪಂ. ಮಟ್ಟದಲ್ಲಿ ಸ್ವಚ್ಛಮೇವ ಆಂದೋಲನ ಹಮ್ಮಿಕೊಳ್ಳಲಾಗಿದೆ.

ಈಗಾಗಲೇ ಸ್ವಚ್ಛಮೇವ ಜಯತೆ ಒಂದು ಜನಜಾಗೃತಿ ರಥ ಕಾರ್ಯಾರಂಭ ಮಾಡಿದ್ದು, ಇನ್ನು ಎರಡು ರಥಗಳಿಗೆ ಚಾಲನೆ ನೀಡಲಾಗುವುದು. ಪ್ರತಿಯೊಂದು ಗ್ರಾಮಗಳಲ್ಲೂ ಸ್ವಚ್ಛತೆಯ ವಾತಾವರಣ ನಿರ್ಮಾಣಕ್ಕಾಗಿ ಜನಜಾಗೃತಿ ಮೂಡಿಸಲು ಗೋಡೆ ಬರಹ, ಬೀದಿ ನಾಟಕ, ಪ್ರಬಂಧ ಸ್ಪರ್ಧೆ, ಶ್ರಮದಾನ, ಶೌಚಾಲಯ ಬಳಕೆ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಪರಿಸರ ಬೆಳೆಸಲು ಕನಿಷ್ಠ 1000 ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಗ್ರಾಮಸ್ಥರು ಸಕ್ರಿಯವಾಗಿ ಭಾಗಿಯಾಗಲು ಬಳಿಗಾರ ಮನವಿ ಮಾಡಿದರು. ಜಿ.ಪಂ. ಸಿಇಒ ಮಂಜುನಾಥ ಚವ್ಹಾಣ ಜಲಾಮೃತ ಯೋಜನೆ ಕುರಿತು ಮಾತನಾಡಿ, ರಾಜ್ಯ ಹಾಗೂ ಗದಗ ಜಿಲ್ಲೆ ಕಳೆದ 18 ವರ್ಷಗಳಲ್ಲಿ 14 ವರ್ಷ ಬರದಿಂದ ತತ್ತರಿಸಿದೆ. ಈ ಸ್ಥಿತಿಯ ನಿಯಂತ್ರಣಕ್ಕೆ ಜಲ ಸಂರಕ್ಷಣೆ, ಜಲ ಸಾಕ್ಷರತೆ, ಜಲ ಮೂಲಗಳ ಪುನಃಶ್ಚೇತನ ಹಾಗೂ ಹಸರೀಕರಣ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಜಲಾಮೃತ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದರು.

ಸಣ್ಣ ನೀರಾವರಿ ಕೆರೆಗಳ ಪುನರುಜ್ಜೀವನ, ನಾಲಾ ಬದು, ತಡೆ ಅಣೆಕಟ್ಟು ಮತ್ತು ಕಿಂಡಿ ಅಣೆಕಟ್ಟು ಸಂಗ್ರಹಣಾ ಘಟಕಗಳನ್ನು ಪುನರುಜ್ಜೀವನಗೊಳಿಸಿ, ವೈಜ್ಞಾನಿಕವಾಗಿ ನೀರು ಸಂಗ್ರಹಣೆ ಮಾಡಲು ಜಲಮೂಲಗಳ ನಿರ್ಮಾಣ ಮಾಡಲು ಜಾಗೃತಿ ಮೂಡಿಸುವುದು, ಗ್ರಾಮೀಣ ಜನರಿಗೆ ಇದರ ವ್ಯಾಪಕ ಮಾಹಿತಿ ಹಾಗೂ ಸಂವಹನದ ಜಲಾಮೃತ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಸಮುದಾಯ ಸಹಭಾಗಿತ್ವದೊಂದಿಗೆ ಅಭಿಯಾನ ಮಾದರಿಯಲ್ಲ್ಲಿ ಅರಣ್ಯೀಕರಣಗೊಳಿಸಿ ಜಲಮೂಲಗಳ ಸಂರಕ್ಷಣೆಗೆ ಜಾಗೃತಿ ಮೂಡಿಸಲಾಗುವುದು ಎಂದು ಮಂಜುನಾಥ ಚವ್ಹಾಣ ನುಡಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಈರಣ್ಣ ನೌಡಗೌಡ್ರ, ಉಪಕಾರ್ಯದರ್ಶಿ ಪ್ರಾಣೇಶರಾವ್‌, ಜಿ.ಪಂ. ಯೋಜನಾ ನಿರ್ದೇಶಕ ಟಿ. ದಿನೇಶ, ಸಹಾಯಕ ಕಾರ್ಯದರ್ಶಿ ಮುಂಡರಗಿ ಇದ್ದರು.

Advertisement

ಇಂದು ಜಲಾಮೃತ ಉದ್ಘಾಟನೆ:

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸ್ವಚ್ಛ ಭಾರತ ಮಿಷನ್‌, ಜಿ.ಪಂ., ತಾ.ಪಂ. ವತಿಯಿಂದ ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ಜೂ. 11ರಂದು ಬೆಳಗ್ಗೆ 11ಕ್ಕೆ ಜಿಲ್ಲಾಮಟ್ಟದ ಸ್ವಚ್ಛ ಮೇವ ಜಯತೇ ಹಾಗೂ ಜಲಾಮೃತ ಉದ್ಘಾಟನೆ ಸಮಾರಂಭ ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ರಾಜ್ಯ ಕೌಶಲಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯಕ ಉದ್ಘಾಟಿಸುವರು. ಶಾಸಕ ಎಚ್.ಕೆ. ಪಾಟೀಲ ಅಧ್ಯಕ್ಷತೆ ವಹಿಸುವರು.
Advertisement

Udayavani is now on Telegram. Click here to join our channel and stay updated with the latest news.

Next