ಕುಷ್ಟಗಿ: ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಪೂರೈಸುವ ಸದುದ್ದೇಶದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಜಲ ಜೀವನ ಮಿಷನ್ ಕುಷ್ಟಗಿ, ಯಲಬುರ್ಗಾ ತಾಲೂಕುಗಳಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.
ಇಲ್ಲಿನ ತಾಪಂ ಸಭಾಂಗಣದಲ್ಲಿ ಜಲ ಜೀವನ ಮಿಷನ್ ಯೋಜನೆ ಅನುಷ್ಠಾನ ಹಿನ್ನೆಲೆಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೂರದರ್ಶಿತ್ವದ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಕುಡಿಯುವ ನೀರಿಗೆ ಅಭಾವ ಸೃಷ್ಟಿಯಾಗದಿರಲು ಈ ಯೋಜನೆ ಅನುಷ್ಠಾನಗೊಳಿಸುತ್ತಿದ್ದಾರೆ. ಈ ಯೋಜನೆಯಲ್ಲಿ ಶೇ. 5ರಿಂದ 10ರಷ್ಟು ಜನರ ವಂತಿಗೆ ಯೋಜನೆ ಕಷ್ಟಸಾಧ್ಯವೆನಿಸದು.
ಕೋವಿಡ್ 19 ವೈರಸ್ ಹಿನ್ನೆಲೆಯಲ್ಲಿ ದೇಶ ಒಂದು ದಿನ ಲಾಕ್‌ಡೌನ್ ಕಷ್ಟ ಎಂದವರು, ಇದೀಗ 40 ದಿನಗಳ ಲಾಕ್‌ಡೌನ್ ಆಗಿದ್ದು, ಬದಲಾದ ಜೀವನ ಶೈಲಿಗೆ ಹೊಂದಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದರು.
ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ ವಿಷಯ ಪ್ರಸ್ತಾಪಿಸಿ, ಭವಿಷ್ಯದ ದಿನಗಳಲ್ಲಿ ಇದೊಂದು ಉಪಯುಕ್ತ ಯೋಜನೆಯಾಗಿದೆ. ಜಿಪಂ ಸಿಇಒ ಅವರು ಈ ಯೋಜನೆ ಸವಿವರ ಹಾಗೂ ಜನರ ವಂತಿಗೆಯ ಕುರಿತು ಮನವರಿಕೆ ಮಾಡಿದರೆ ಈ ಯೋಜನೆ ಅರ್ಥಪೂರ್ಣವಾಗಲು ಸಾಧ್ಯ. ನಾವೇನಾದರೂ ಈ ಯೋಜನೆ ಬಗ್ಗೆ ಹೇಳಲು ಹೋದರೆ ರಾಜಕೀಯ ಭಾಷಣವಾಗುತ್ತದೆ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದರು.
ಸಿಇಒ ರಘುನಂದನ ಮೂರ್ತಿ ಅವರು, ಜಲ ಜೀವನ ಮಿಷನ್ ಕುರಿತು ವಿವರಿಸಿದರು. ಜಿಪಂ ಅಧ್ಯಕ್ಷ ವಿಶ್ವನಾಥರಡ್ಡಿ ಹೊಸಮನಿ, ತಾಪಂ ಅಧ್ಯಕ್ಷೆ ಮಹಾಂತಮ್ಮ ಪೂಜಾರಿ, ಜಿಪಂ ಸದಸ್ಯರಾದ ಕೆ. ಮಹೇಶ, ಭೀಮಣ್ಣ ಅಗಸಿಮುಂದಿನ, ವಿಜಯಕುಮಾರ ನಾಯಕ ಇದ್ದರು.