Advertisement

ಭಾರತೀಯ ಯುವಕರ ಜತೆ ಜೈಶ್‌ನ ‘ಪ್ಲಾನ್‌ ಬಿ’

09:56 AM Feb 22, 2020 | Hari Prasad |

ಚೆನ್ನೈ: ಸಾಮಾಜಿಕ ಜಾಲತಾಣಗಳಲ್ಲಿ ಭಾರತ ವಿರೋಧಿ ಪೋಸ್ಟ್‌ಗಳನ್ನು ಹಾಕುವ ಭಾರತೀಯ ಪ್ರಜೆಗಳನ್ನು ಸೂಕ್ಷ್ಮವಾಗಿ ಗಮನಿಸುವ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆ, ಅಂಥವರನ್ನು ಫೇಸ್‌ಬುಕ್‌ ಮೂಲಕ ಸಂಪರ್ಕಿಸಿ, ಆನಂತರ ಅವರನ್ನು ತಮ್ಮ ಜಾಲದಲ್ಲಿ ಸೇರ್ಪಡೆಗೊಳಿಸುವ ಹೊಸ ವಿಚಾರವೊಂದು ಬೆಳಕಿಗೆ ಬಂದಿದೆ. ಇದಕ್ಕೆ ಜ.31ರಂದು ನಡೆದಿದ್ದ ನಗ್ರೋಟಾ ಎನ್‌ಕೌಂಟರ್‌ ಪ್ರಕರಣ ಸೂಕ್ತವಾದ ಸಾಕ್ಷ್ಯಾಧಾರ ಒದಗಿಸಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

Advertisement

ನಗ್ರೋಟಾ ಎನ್‌ಕೌಂಟರ್‌ ವೇಳೆ, ಟ್ರಕ್‌ ಒಂದರಲ್ಲಿ ಅವಿತಿದ್ದ ಮೂವರು ಪಾಕಿಸ್ಥಾನ ಮೂಲದ ಉಗ್ರವಾದಿಗಳನ್ನು ಕೊಂದಿದ್ದ ಭದ್ರತಾ ಪಡೆಗಳು, ಕಾಶ್ಮೀರದಲ್ಲಿ ಜೈಶ್‌ಗಾಗಿ ದುಡಿಯುತ್ತಿರುವ ಮೂವರು ಯುವಕರನ್ನು ಬಂಧಿಸಿದ್ದರು. ಆಗ, ಸಿಕ್ಕವರಲ್ಲಿ ಸಮೀರ್‌ ದರ್‌ ಕೂಡ ಒಬ್ಬ. ಈತ, 2019ರ ಫೆಬ್ರವರಿಯಲ್ಲಿ ಪುಲ್ವಾಮಾ ದಾಳಿ ನಡೆಸಿದ್ದ ಆದಿಲ್‌ ದರ್‌ನ ಸಂಬಂಧಿಕ. ಆತನ ವಿಚಾರಣೆ ನಡೆಸಿದಾಗ ತೇಲಿಬಂದ ಹೆಸರು ‘ಸುಹೀಲ್‌ ಜಾವೇದ್‌ ಲೋನ್‌’.

ಯಾರು ಈ ಸುಹೀಲ್‌? ಮೂಲತಃ ಕಾಶ್ಮೀರದ ಬದ್ಗಾಮ್‌ನವನಾದ ಸುಹೀಲ್‌ (20) ಹರ್ಯಾಣದ ಚಂಡೀಗಡದಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ. ಸಮೀರ್‌ ನೀಡಿದ ಮಾಹಿತಿ ಆಧಾರದಲ್ಲಿ ಬದ್ಗಾಮ್‌ನಲ್ಲಿ ಫೆ.11ರಂದು ಆತನನ್ನು ಬಂಧಿಸ ಲಾಗಿದೆ. ಈ ಹುಡುಗ ಭಾರತ ವಿರೋಧಿ ಪೋಸ್ಟ್‌ಗಳ ಮೂಲಕವೇ ಜೈಶ್‌ ಗಮನ ಸೆಳೆದು ಅವರ ಜಾಲಕ್ಕೆ ಸೇರಿಕೊಂಡಿದ್ದ.

‘ಪ್ಲಾನ್‌ ಬಿ’ ಆಗಿದ್ದ ಸುಹೇಲ್‌ ಭಾರತ ವಿರೋಧಿ ಮನಸ್ಥಿತಿಯ ಹುಡುಗರನ್ನು ಜೈಶ್‌ ಹೇಗೆ ಬಳಸಿಕೊಳ್ಳುತ್ತದೆ ಎಂಬುದಕ್ಕೆ ಸುಹೀಲ್‌ ಪ್ರಕರಣ ಸಾಕ್ಷಿ ಎನ್ನುತ್ತಾರೆ ತನಿಖಾಧಿಕಾರಿಗಳು. “ಜ.31ರಂದು ಎನ್‌ಕೌಂಟರ್‌ ನಡೆಯುವ ಕೆಲವೇ ಗಂಟೆಗಳ ಮುನ್ನ ಸಮೀರ್‌ ತಾನು ಉಗ್ರರನ್ನು ಸಾಗಾಟ ಮಾಡುತ್ತಿದ್ದ ಟ್ರಕ್‌ನಲ್ಲಿ ಕುಳಿತು ವರ್ಚುವಲ್‌ ಪ್ರೈವೇಟ್‌ ನೆಟ್‌ವರ್ಕ್‌ನಿಂದ (ವಿಪಿಎನ್‌) ಭಾರತದ ಅಂತರ್ಜಾಲ ಕಣ್ಗಾವಲಿನ ಕಣ್ಣು ತಪ್ಪಿಸಿ ಪಾಕಿಸ್ಥಾನದಲ್ಲಿದ್ದ ಜೈಶ್‌ ಕಮಾಂಡರ್‌ಗಳ ಜೊತೆಗೆ ಮಾತನಾಡುತ್ತಿದ್ದ.

ಒಂದು ನಿರ್ದಿಷ್ಟ ಸ್ಥಳಕ್ಕೆ ಟ್ರಕ್‌ ಬಂದ ಕೂಡಲೇ ನೆಟ್‌ವರ್ಕ್‌ ಕೊರತೆಯಾಗಿ ಸಂಪರ್ಕ ತುಂಡಾ ದಾಗ ಕಮಾಂಡರ್‌ಗಳು ಹರ್ಯಾಣದಲ್ಲಿದ್ದ ಸುಹೀಲ್‌ನನ್ನು ಸಂಪರ್ಕಿಸಿ ಆತನಿಗೆ ತಮ್ಮ ನಿರ್ದೇಶನಗಳನ್ನು ರವಾನಿಸಲು ತಿಳಿಸಿದ್ದರು. ಅದನ್ನು ಸುಹೀಲ್‌ ಪಾಲಿಸಿದ್ದ. ಹೀಗೆ, ಇಂಥ ಹುಡುಗರನ್ನು ಜೈಶ್‌, “ಪ್ಲಾನ್‌ ಬಿ’ ಆಗಿ ಬಳಸಿಕೊಳ್ಳುತ್ತಿದೆ’ ಎಂದು ತನಿಖಾಧಿ ಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next