Advertisement

ಪ್ರೊ ಕಬಡ್ಡಿ ಲೀಗ್‌ : ಪ್ಲೇ ಆಫ್ ಗೆ ಏರೀತೇ ಜೈಪುರ?

09:32 AM Oct 02, 2019 | sudhir |

ಪಂಚಕುಲ: ಏಳನೇ ಆವೃತಿಯ ಪ್ರೊ ಕಬಡ್ಡಿ ಲೀಗ್‌ ಅಂತಿಮ ಹಂತ ತಲುಪಿದೆ. ಪ್ಲೇ ಆಫ್ ಪೈಪೋಟಿ ತೀವ್ರಗೊಂಡಿದೆ. 3 ಸ್ಥಾನಗಳಿಗಾಗಿ 4 ತಂಡಗಳು ರೇಸ್‌ನಲ್ಲಿವೆ.

Advertisement

ದಬಾಂಗ್‌ ಡೆಲ್ಲಿ , ಬೆಂಗಾಲ್‌ ವಾರಿಯರ್ ಮತ್ತು ಹರ್ಯಾಣ ಸ್ಟೀಲರ್ ಈಗಾಗಲೇ ಅಧಿಕೃತವಾಗಿ ಪ್ಲೇ ಆಫ್ ಪ್ರವೇಶಿಸಿವೆ. ಯು ಮುಂಬಾ (59), ಬೆಂಗಳೂರು ಬುಲ್ಸ್‌ (58), ಯುಪಿ ಯೋಧಾ (58) ಅನಂತರದ ಸ್ಥಾನದಲ್ಲಿವೆ. 7ನೇ ಸ್ಥಾನಿಯಾಗಿರುವ ಜೈಪುರ್‌ ಪಿಂಕ್‌ ಪ್ಯಾಂಥರ್ (52) ಮೇಲಿನ ಸ್ಥಾನವೇರಿ ಮುನ್ನಡೆದೀತೇ ಎಂಬುದಷ್ಟೇ ಸದ್ಯದ ಕುತೂಹಲ.

ಮುಂದಿನ 2 ಪಂದ್ಯಗಳಲ್ಲಿ ದೊಡ್ಡ ಅಂತರದ ಗೆಲುವು ದಾಖಲಿಸುವುದು ಜೈಪುರ ಪಾಲಿಗೆ ಅನಿವಾರ್ಯ. ಇದರಲ್ಲೊಂದು ಪಂದ್ಯವನ್ನು ಬೆಂಗಳೂರು ಬುಲ್ಸ್‌ ವಿರುದ್ಧ ಆಡಲಿದೆ. ಹೀಗಾಗಿ ಅದು ಮಾಡು-ಮಡಿ ಸ್ಥಿತಿಯಲ್ಲಿದೆ.

ಹಾಲಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ಮತ್ತು ಯು ಮುಂಬಾಕ್ಕೆ 3 ಪಂದ್ಯಗಳು ಬಾಕಿ ಇವೆ. ಇದರಲ್ಲಿ ಎರಡನ್ನು ಗೆದ್ದರೆ ಪ್ಲೇ ಆಫ್ ಟಿಕೆಟ್‌ ಪಕ್ಕಾ. ಹಾಗೆಯೇ ಯೋಧಾಕ್ಕೆ 4 ಪಂದ್ಯಗಳಿವೆ. ಎರಡನ್ನು ಗೆದ್ದರೆ ಪ್ಲೇ ಆಫ್ ಪ್ರವೇಶಿಸಬಹುದು. ಈ ಪಂದ್ಯಗಳು ಯುಪಿಯ ತವರಾದ ಗ್ರೇಟರ್‌ ನೋಯ್ಡಾದಲ್ಲಿ ನಡೆಯುವುದರಿಂದ ತಂಡಕ್ಕೆ ಲಾಭ ಹೆಚ್ಚು.

ಮಾಡು-ಮಡಿ ಸ್ಥಿತಿಯಲ್ಲಿ ಜೈಪುರ
ಜೈಪುರ ಪಿಂಕ್‌ ಪ್ಯಾಂಥರ್ನ ಆರಂಭದ ಗೆಲುವಿನ ಅಬ್ಬರ ಕಂಡಾಗ ಎಲ್ಲರಿಗಿಂತ ಮೊದಲೇ ಪ್ಲೇ ಆಫ್ ಪ್ರವೇಶಿಸಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಅನಂತರ ಎದುರಾದ ಸರಣಿ ಸೋಲಿನಿಂದ ಪ್ಲೇ ಆಫ್ ಹಾದಿ ದುರ್ಗಮಗೊಂಡಿದೆ. ತವರಿನ ಪಂದ್ಯಗಳೂ ಜೈಪುರಕ್ಕೆ ಕಂಟಕವಾಗಿ ಪರಿಣಮಿಸಿದ್ದೊಂದು ವಿಪರ್ಯಾಸ.

Advertisement

ಮುಂದಿನ 2 ಪಂದ್ಯಗಳಲ್ಲಿ ಒಂದರಲ್ಲಿ ಎಡವಿದರೂ ಜೈಪುರ ಪ್ಲೇ ಆಫ್ ರೇಸ್‌ನಿಂದ ನಿರ್ಗಮಿಸುವುದು ಖಚಿತ. ಒಂದು ವೇಳೆ ಎರಡನ್ನು ಗೆದ್ದರೂ ಜೈಪುರದ ಮುಂದಿನ ಹಾದಿ ಪಕ್ಕಾ ಎಂದು ಹೇಳಲು ಸಾಧ್ಯವಿಲ್ಲಿ. ಕಾರಣ, ಅದು ಮುಂಬಾ, ಯೋಧಾ ಅಥವಾ ಬುಲ್ಸ್‌ ತಂಡಗಳ ಸೋಲನ್ನೂ ಹಾರೈಸಬೇಕು! ಹೀಗಾಗಿ ಜೈಪುರದ ಮುಂದೆ ಅನೇಕ ಲೆಕ್ಕಾಚಾರಗಳಿವೆ.

ಬುಲ್ಸ್‌ಗೆ ಪವನ್‌ ಬಲ
ನಾಯಕ ರೋಹಿತ್‌ ಕುಮಾರ್‌ ಅವರ ಅನುಪಸ್ಥಿತಿಯಲ್ಲಿ ತಂಡವನ್ನು ಮನ್ನಡೆಸುತ್ತಿರುವ ಪವನ್‌ ಸೆಹ್ರಾವತ್‌ ಮೇಲೆ ಬುಲ್ಸ್‌ ಹೆಚ್ಚಿನ ನಂಬಿಕೆ ಇರಿಸಿದೆ. ಕಳೆದ ಪಂದ್ಯದಲ್ಲಿ ಅಂಕಪಟ್ಟಿಯ ಅಗ್ರಸ್ಥಾನಿ ಡೆಲ್ಲಿ ವಿರುದ್ಧ ಟೈ ಮತ್ತು ಬಲಿಷ್ಠ ಮುಂಬಾ ವಿರುದ್ಧ ಗೆಲುವು ಸಾಧಿಸಿದ ಆತ್ಮವಿಶ್ವಾಸದಲ್ಲಿರುವ ಬುಲ್ಸ್‌, ಬುಧವಾರ ಹರ್ಯಾಣಕ್ಕೆ ಸೋಲುಣಿಸಿದರೆ ಗಂಭೀರ ಸಮಸ್ಯೆಗೆ ಸಿಲುಕದು.
ಪವನ್‌ ಅವರ ಕ್ವಿಕ್‌ ರೈಡಿಂಗ್‌, ಮಹೇಂದರ್‌ಸಿಂಗ್‌ ಅವರ ಟ್ಯಾಕಲ್‌, ಸುಮಿತ್‌ ಸಿಂಗ್‌ ಅವರ ಆಲ್‌ರೌಂಡ್‌ ಶೋ ಬುಲ್ಸ್‌ ಪಾಲಿಗೆ ಮಹತ್ವದ್ದಾಗಿದೆ. ಅಕಸ್ಮಾತ್‌ ಇವರಲ್ಲೊಬ್ಬರು ವಿಫ‌ಲರಾದರೂ ಅದು ಚಾಂಪಿಯನ್ನರ ಪಾಲಿಗೆ ಹಿನ್ನಡೆಯಾದೀತು. ಹೀಗಾಗಿ ಅದು ಉಳಿದ ಪಂದ್ಯಗಳಲ್ಲಿ ಎಚ್ಚರಿಕೆಯ ನಡೆಗಳನ್ನು ಇಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next