ಮಧ್ಯಪ್ರದೇಶ: ಐಎಎಸ್, ಐಪಿಎಸ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಕಾನ್ಸ್ ಟೇಬಲ್ ಹೀಗೆ ಒಮ್ಮೊಮ್ಮೆ ಮಾನವೀಯತೆ ಕೆಲಸ ಕೈಗೊಂಡ ಕುರಿತು ಆಗಾಗ ವರದಿಯಾಗುತ್ತಿರುತ್ತದೆ. ಇದೀಗ ಅದಕ್ಕೊಂದು ಹೊಸ ಸೇರ್ಪಡೆ ಎಂಬಂತೆ ಜೈಪುರ್ ಜಿಲ್ಲಾಧಿಕಾರಿ, ಐಎಎಸ್ ಅಧಿಕಾರಿ ಪ್ರಕಾಶ್ ರಾಜ್ ಪುರೋಹಿತ್ ಅವರು ಅಹವಾಲನ್ನು ಹೇಳಿಕೊಳ್ಳಲು ಆಗಮಿಸಿದ್ದ ವಿಶೇಷ ಚೇತನ ವ್ಯಕ್ತಿಗೆ ಸ್ಪಂದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗತೊಡಗಿದೆ.
ಇದನ್ನೂ ಓದಿ:ಮೈಲಾರ ಮಲ್ಲಣ್ಣನ ದೇವಸ್ಥಾನದಲ್ಲಿ ಬಿಜೆಪಿ ನಾಯಕರಿಂದ ಪ್ರಮಾಣ ; ಕೇಂದ್ರ ಸಚಿವ ಭಾಗಿ
ಸಮಸ್ಯೆಯನ್ನು ಹೇಳಿಕೊಳ್ಳಲು ಆಗಮಿಸಿದ್ದ ದಿವ್ಯಾಂಗ ವ್ಯಕ್ತಿಯನ್ನು ಗಮನಿಸಿದ ಜಿಲ್ಲಾಧಿಕಾರಿ ರಾಜ್ ಪುರೋಹಿತ್ ಅವರ ಸ್ಥಿತಿಯನ್ನು ಕಂಡು ಯಾವುದೇ ಅಳುಕಿಲ್ಲದೇ ಓಂಪ್ರಕಾಶ್ ಕುಮಾವತ್ ಅವರನ್ನು ತಮ್ಮ ಟೇಬಲ್ ಮೇಲೆ ಕುಳ್ಳಿರಿಸಿ ಅಹವಾಲನ್ನು ಆಲಿಸುತ್ತಿರುವ ವಿಡಿಯೋವನ್ನು ಐಪಿಎಸ್ ದಿನೇಶ್ ಎಂಎನ್ ಟ್ವೀಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಮಾರ್ಚ್ 16ರಂದು ಜಿಲ್ಲಾ ಪರಿಷತ್ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಅಹವಾಲು ಸಭೆಯೊಂದಕ್ಕೆ ಕಿಶನ್ ಗಢದ ರೆನ್ವಾಲ್ ನಿವಾಸಿ ದಿವ್ಯಾಂಗ ಕುಮಾವತ್ ಅವರು ಜಿಲ್ಲಾಧಿಕಾರಿ ಬಳಿ ಬಂದಿದ್ದರು. ಆ ಸಂದರ್ಭದಲ್ಲಿ ಅವರ ಬಳಿ ಇದ್ದ ಅಹವಾಲು ಅರ್ಜಿಯನ್ನು ಗಮನಿಸಿ ತಮ್ಮ ಟೇಬಲ್ ಮೇಲೆ ಕುಳಿಸಿಕೊಂಡು ಸಮಸ್ಯೆಯನ್ನು ಆಲಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
Related Articles
ತನಗೆ ಇಬ್ಬರು ಸಹೋದರರು ಇದ್ದು, ಅವರಿಬ್ಬರೂ ಕೂಡಾ ದಿವ್ಯಾಂಗರು. ಹೀಗಾಗಿ ಅವರು ರಸ್ತೆ ದಾಟುವ ವೇಳೆ ತುಂಬಾ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಮುಖ್ಯವಾಗಿ ಮಳೆಗಾಲದಲ್ಲಿ ತುಂಬಾ ಕಷ್ಟಪಡುವಂತಾಗುತ್ತದೆ ಎಂದು ಜಿಲ್ಲಾಧಿಕಾರಿಯವರ ಬಳಿ ಕುಮಾವತ್ ತಿಳಿಸಿರುವುದಾಗಿ ವರದಿಯಾಗಿದೆ.
ನಮ್ಮ ಮನೆಯ ಮುಂಭಾಗದಲ್ಲೇ ರಸ್ತೆ ಇದ್ದು, ಮಳೆಗಾಲದಲ್ಲಿ ನೀರು ಮನೆಯ ಒಳಗೆ ಬರುತ್ತಿದ್ದು, ಇದರಿಂದಾಗಿ ಹೊರ ಹೋಗಲು ಸಮಸ್ಯೆಯಾಗುತ್ತಿದೆ. ಅಷ್ಟೇ ಅಲ್ಲ ಹಲವು ರೋಗಗಳಿಗೂ ಕಾರಣವಾಗುತ್ತಿದೆ ಎಂದು ಕುಮಾವತ್ ಜಿಲ್ಲಾಧಿಕಾರಿಯವರ ಬಳಿ ಹೇಳಿಕೊಂಡಿದ್ದು, ಈ ಅಹವಾಲು ಆಲಿಸಿದ ಜಿಲ್ಲಾಧಿಕಾರಿಯವರು ಶೀಘ್ರವಾಗಿ ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡಿರುವುದಾಗಿ ವರದಿ ತಿಳಿಸಿದೆ.
“ಇಂತಹ ಅಧಿಕಾರಿಗಳ ಉತ್ತಮ ಉದಾಹರಣೆಗಳು ಹೆಚ್ಚು ಪ್ರಚಾರ ಪಡೆಯದ ಕಾರಣದಿಂದಲೇ ಸಾರ್ವಜನಿಕರಲ್ಲಿ ಸರ್ಕಾರಿ ಅಧಿಕಾರಿಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳು ಇನ್ನೂ ಕೂಡಾ ಮುಂದುವರಿಯುತ್ತಿದೆ” ಎಂದು ಐಪಿಎಸ್ ಅಧಿಕಾರಿ ದಿನೇಶ್ ಎಂಎನ್ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.