Advertisement

ನಾಪತ್ತೆಯಾಗಿದ್ದ ಜೈನ ಮುನಿಯ ಹತ್ಯೆ: ಮೃತದೇಹ ಶೋಧ ಕಾರ್ಯ ತೀವ್ರ; ಬಿಗಿ ಬಂದೋಬಸ್ತ್

10:31 AM Jul 08, 2023 | Team Udayavani |

ಚಿಕ್ಕೋಡಿ: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ಜೈನ‌ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆಯಾಗಿರುವುದು ಬೆಳಕಿಗೆ ಬಂದಿದ್ದು, ಮೃತದೇಹ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ.

Advertisement

ಹಿರೇಕೋಡಿಯ ನಂದಿ ಪರ್ವತದಲ್ಲಿ ಸುಮಾರು 15 ವರ್ಷಗಳಿಂದ ನೆಲೆಸಿರುವ ಜೈನಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಕೊಲೆ ಮಾಡಲಾಗಿದೆ. ಸ್ವಾಮೀಜಿಗಳು ನೀಡಿದ್ದ ಹಣವನ್ನು ವಾಪಸ್ ಕೇಳಿದ್ದಕ್ಕೆ‌ ಕಿರಾತಕರು ಹತ್ಯೆ ಮಾಡಿದ್ದಾರೆ ಎಂಬುದು ಗೊತ್ತಾಗಿದೆ.

ವಿಚಾರಣೆ ವೇಳೆ ಕೊಲೆ ಮಾಡಿ ರಾಯಬಾಗ ತಾಲೂಕಿನ ಕಟಕಬಾವಿಯಲ್ಲಿ ಎಸೆದಿರುವುದರಿಂದ ಪೊಲೀಸರು ಶೋಧ ನಡೆಸಿದ್ದಾರೆ.

ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಶವ ಹುಡುಕಾಟಕ್ಕೆ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಈ ಸಂದರ್ಭದಲ್ಲಿ ಆರೋಪಿಗಳು ಹತ್ಯೆ ಮಾಡಿ ಶವ ಎಲ್ಲಿ ಹಾಕಿದ್ದೇವೆ ಸ್ಪಷ್ಟವಾಗಿ ತಿಳಿಸದೆ ಪೊಲೀಸರನ್ನು ಗೊಂದಲಕ್ಕೆ ತಳ್ಳಿದರು.

ಕಟಕಬಾವಿ ಗ್ರಾಮದ ತೆರೆದ ಕೊಳವೆ ಬಾವಿ ಬಳಿ ಎಸೆದಿದ್ದೇವೆ ಎಂದರೆ ಮತ್ತೊಂದು ಸಲ ಬಟ್ಟೆಯಲ್ಲಿ ಕಟ್ಟಿ ನದಿಗೆ ಎಸೆದಿದ್ದೇವೆ ಎನ್ನುತ್ತಿದ್ದರು. ಹೀಗೆ ದ್ವಂದ್ವ ಹೇಳಿಕೆ ನೀಡಿ ಪೊಲೀಸರಿಗೆ ಗೊಂದಲ ಮೂಡಿಸಿದ್ದಾರೆ.
ಪೊಲೀಸರು ಕಟಕಬಾವಿ ಗ್ರಾಮದಲ್ಲಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ತೀವ್ರ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಮುನಿಗಳನ್ನು ಆಶ್ರಮದಿಂದಲೇ ಅಪಹರಿಸಿ ಕೊಲೆ ಮಾಡಿರುವ ಸಂಗತಿಯನ್ನು ಬಾಯ್ಬಿಟ್ಟಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ ಜೈನಮುನಿ ಶವ ಕಟಕಬಾವಿ ಕೊಳವೆ ಬಾವಿಯಲ್ಲಿ ಎಸೆಯಲಾಗಿದೆ ಎಂಬುದು ಬಯಲಾಗಿದೆ. ಈ ಬಗ್ಗೆ ಪೊಲೀಸರು ಶೋಧ ಮುಂದುವರಿಸಿದ್ದಾರೆ.

Advertisement

ಅಹಿತಕರ ಘಟನೆ ನಡೆಯದಂತೆ ಚಿಕ್ಕೋಡಿ ತಾಲೂಕು ಮತ್ತು ರಾಯಬಾಗ ತಾಲೂಕಿನಲ್ಲಿ ಬೀಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next