ಬೆಂಗಳೂರು: ಕನ್ನಡ ಭಾಷೆಗೆ ಜೈನ ಸಾಹಿತ್ಯದ ಕೊಡುಗೆ ಅಪಾರ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ ಗುರುವಾರ ಶ್ರೀಕೃಷ್ಣರಾಜ ಪರಿಷನ್ಮಂದಿರ ದಲ್ಲಿ ಏರ್ಪಡಿಸಿದ್ದ ಶ್ರವಣಬೆಳಗೊಳ ಶ್ರೀಕ್ಷೇತ್ರ ಸ್ಥಾಪಿಸಿರುವ “ಚಾವುಂಡ ರಾಯ ದತ್ತಿ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಜೈನ ಸಾಹಿತ್ಯವು ವಿವಿಧ ಆಯಾಮಗಳಲ್ಲಿ ಕನ್ನಡ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ. ಜೈನ ಚರಿತ್ರೆ, ಸಾಹಿತ್ಯದ ಅಧ್ಯಯನವು ಹೆಚ್ಚಾಗಿ ನಡೆಯಬೇಕು ಎಂದು ಕರೆ ನೀಡಿದರು.
ವಿವಿಧ ಕ್ಷೇತ್ರದ ಸಾಧಕರಿಗೆ ದತ್ತಿ ಪ್ರಶಸ್ತಿಗಳನ್ನು ನೀಡುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ ಇತಿಹಾಸ ನಿರ್ಮಿಸಿದ್ದು, ಸಾಹಿತ್ಯದ ಹಲವು ಆಯಾಮಗಳನ್ನು ಗುರುತಿಸುವ ಕೆಲಸ ಮಾಡುತ್ತಿದೆ ಎಂದವರು ಪ್ರಶಂಸೆ ವ್ಯಕ್ತಪಡಿಸಿದರು.
ಪ್ರಶಸ್ತಿ ಪುರಸ್ಕೃತ, ನಿವೃತ್ತ ಪ್ರಾಧ್ಯಾಪಕ ಜೀವಂಧರ ಕುಮಾರ್ ಕೆ. ಹೋತಪೇಟೆ ಮಾತನಾಡಿ, ಚಾವುಂಡ ರಾಯ ಕೃತಿ ರಚಿಸಲು ಚಾರುಕೀರ್ತಿ ಸ್ವಾಮೀಜಿ ಪ್ರೋತ್ಸಾಹಿ ಸಿದ ಹಿನ್ನೆಲೆಯಲ್ಲಿ ಜೈನ ಧರ್ಮಕ್ಕೆ ಸಂಬಂಧಿಸಿದ ಹಲವು ಕೃತಿಗಳನ್ನು ರಚಿಸಿದ್ದೇನೆ. ಚಾವುಂಡರಾಯ ಪುಸ್ತಕದ ಕತೆಯನ್ನು ಆಧಾರವಾಗಿಟ್ಟು ಕೊಂಡು ಟಿ.ಎಸ್. ನಾಗಾಭರಣ ಅವರು ಚಲನಚಿತ್ರ ನಿರ್ಮಾಣ ಮಾಡಬೇಕು. ಈ ಮೂಲಕ ಜೈನ ಧರ್ಮದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲಿದೆ ಎಂದರು.