ಹೊಸದಿಲ್ಲಿ : ಈಗಾಗಲೇ ಜೈಲು ಪಾಲಾಗಿರುವ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಹಾಗೂ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಮೂರನೇ ಮೇವು ಹಗರಣದಲ್ಲೂ ದೋಷಿ ಎಂದು ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯ ಇಂದು ಬುಧವಾರ ತೀರ್ಪು ನೀಡಿದೆ.
ಲಾಲು ಅವರಿಗೆ ಈ ತೀರ್ಪು ದೊಡ್ಡ ಹೊಡೆತವಾಗಿದೆ. ಈಗಾಗಲೇ ಅವರು ಇನ್ನೊಂದು ಮೇವು ಹಗರಣದಲ್ಲಿ ದೋಷಿ ಎಂದು ಪರಿಗಣಿತರಾಗಿ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.
ಇದೀಗ 3ನೇ ಮೇವು ಹಗರಣದಲ್ಲಿ ದೋಷಿ ಎಂದು ಪರಿಗಣಿತರಾಗಿರುವ ಲಾಲು ಅವರಿಗೆ ಶಿಕ್ಷೆಯ ಪ್ರಮಾಣ ಇದೇ ಗುರುವಾರ (ನಾಳೆ ಜನವರಿ 25) ಪ್ರಕಟವಾಗಲಿದೆ.
1990ರಲ್ಲಿ ಚಾಯ್‌ಬಾಸಾ ಸರಕಾರಿ ಖಜಾನೆಯಿಂದ 33.7 ಕೋಟಿ ರೂ.ಗಳನ್ನು ಅಕ್ರಮವಾಗಿ ಪಡೆದುಕೊಂಡ ಆರೋಪಕ್ಕೆ ಸಂಬಂಧಿಸಿದ ಕೇಸು ಈ 3ನೇ ಮೇವು ಹಗರಣದ್ದಾಗಿದೆ. ಮಂಜೂರಾಗಿದ್ದ ಕೇವಲ 7.1 ಲಕ್ಷ ರೂ.ಗೆ ಬದಲು ಲಾಲು 33.7 ಕೋಟಿ ರೂ.ಗಳನ್ನು ಡ್ರಾ ಮಾಡಿದ್ದರು.
ಬಿಹಾರದ ಇನ್ನೋರ್ವ ಮಾಜಿ ಮುಖ್ಯಮಂತ್ರಿ ಜಗನ್ನಾಥ ಮಿಶ್ರಾ ಅವರು ಕೂಡ ಈ 3ನೇ ಮೇವು ಹಗರಣದಲ್ಲಿ ದೋಷಿ ಎಂದು ವಿಶೇಷ ಸಿಬಿಐ ನ್ಯಾಯಾಲಯ ಪರಿಗಣಿಸಿದೆ.
ಈ ತೀರ್ಪಿಗೆ ಪ್ರತಿಕ್ರಿಯಿಸಿರುವ ಲಾಲು ಅವರ ಪುತ್ರ ಮತ್ತು ಮಾಜಿ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು, “ಲಾಲು ಹೀರೋ ಎಂದು ಬಿಹಾರದ ಜನರು ಈಗಲೂ ನಂಬುತ್ತಾರೆ’ ಎಂದರು. ಮೇವು ಹಗರಣದಲ್ಲಿ ಲಾಲು ಗೆ ಶಿಕ್ಷೆಯಾಗಲು ಬಿಹಾರ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಕಾರಣ ಎಂದು ತೇಜಸ್ವಿ ಆರೋಪಿಸಿದರು.