ಮಹಾನಗರ: ನಗರದ ಎಂಜಿ ರಸ್ತೆಯ ಕೆನರಾ ಕಾಲೇಜಿನಿಂದ ಜಿಲ್ಲಾ ಕಾರಾಗೃಹದ ಮುಂಭಾಗವಾಗಿ ಕಪುಚಿನ್ ಚರ್ಚ್ ವರೆಗಿನ ರಸ್ತೆಯನ್ನು ಇತ್ತೀಚೆಗಷ್ಟೇ ಸ್ಮಾರ್ಟ್ ಸಿಟಿಯಿಂದ ಅಭಿವೃದ್ಧಿಪಡಿಸಲಾಗಿದೆ.
ಸಂಚಾರ ಯೋಗ್ಯವಾದ ಕಾಂಕ್ರೀಟ್ ರಸ್ತೆ ಇಲ್ಲಿ ನಿರ್ಮಾಣವಾಗಿದ್ದು, ಹಿಂದೆ ಇದ್ದ ಡಾಮರು ರಸ್ತೆಗಿಂತ ಅಗಲವಾಗಿ, ಸಂಚಾರ ದಟ್ಟಣೆ ನಿವಾರಿಸುವಲ್ಲಿಯೂ ಸಹಕಾರಿಯಾಗಿದೆ. ಆದರೆ ಸರಕಾರಿ ಪಶು ಆಸ್ಪತ್ರೆ ಜಂಕ್ಷನ್‌ನಲ್ಲಿ ವಾಹನ ಸವಾರರಿಗೆ ತುಸು ಗೊಂದಲ ಮೂಡಿಸುತ್ತದೆ.
ಪಶು ಆಸ್ಪತ್ರೆ ಬಳಿ ಕರಂಗಲಪಾಡಿ ಕಡೆಯ ರಸ್ತೆಯೂ ಈ ರಸ್ತೆಗೆ ಸಂಧಿಸುತ್ತದೆ. ಜೈಲು ರಸ್ತೆಯಿಂದ ಕರಂಗಲಪಾಡಿ ಕಡೆಗೆ ಹೋಗುವವರು ಅಲ್ಲಿ ಬಲಕ್ಕೆ ತಿರುಗಬೇಕಿದ್ದು, ಬಿಜೈ ಚರ್ಚ್ ರಸ್ತೆಯಿಂದ ಬರುವ ವಾಹನ (ಬಹುತೇಕ ವಾಹನಗಳು ವೇಗವಾಗಿಯೇ ಬರುತ್ತವೆ)ಗಳಿಂದಾಗಿ ಕೆಲ ಹೊತ್ತು ನಿಲ್ಲಬೇಕಾಗುತ್ತದೆ. ಈ ವೇಳೆ ಹಿಂದಿನ (ಕೆನರಾ ಕಾಲೇಜು ಕಡೆಯಿಂದ) ಬರುವ ವಾಹನಗಳಿಗೆ ಇದು ಅಡ್ಡಿಯಾಗುತ್ತದೆ. ಮಾತ್ರವಲ್ಲದೆ ಕರಂಗಲಪಾಡಿ ಕ್ರಾಸ್ ರಸ್ತೆಯಿಂದ ಬರುವ ವಾಹನಗಳೂ ವೇಗವಾಗಿ ಬರುವುದರಿಂದ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯವುಂಟಾಗುವ ಸಾಧ್ಯತೆಯಿದೆ.
ಜಂಕ್ಷನ್‌ನಲ್ಲಿ ಒಂದು ಬದಿಯಲ್ಲಿ ಟ್ರಾಫಿಕ್ ಐಲ್ಯಾಂಡ್ ರಚಿಸಲಾಗಿದ್ದರೂ, ಅದರಿಂದ ಹೆಚ್ಚೇನು ಪ್ರಯೋಜನವಾಗಿಲ್ಲ. ಈ ರಸ್ತೆಯಲ್ಲಿ ಬೆಳಗ್ಗೆ ಹಾಗೂ ಸಂಜೆ ವೇಳೆ ಇಲ್ಲಿನ ಹೆಚ್ಚಿನ ವಾಹನ ಸಂಚಾರ ಇರುತ್ತದೆ. ಜತೆಗೆ ಪಿವಿಎಸ್-ಕರಂಗಲಪಾಡಿ ರಸ್ತೆಯಲ್ಲಿ ಹೆಚ್ಚಿನ ದಟ್ಟಣೆ ಉಂಟಾದಾಗ ಈ ರಸ್ತೆಯನ್ನು ಹೆಚ್ಚಿನ ಸವಾರರು ಬಳಸುತ್ತಾರೆ. ವಾಹನಗಳ ಸುಗಮ ಸಂಚಾರಕ್ಕೆ ಇಲ್ಲಿ ಸೂಕ್ತ ಮಾರ್ಪಾಡು ಮಾಡಬೇಕಾದ ಅವಶ್ಯಕತೆಯಿದೆ. ಸಣ್ಣ ವೃತ್ತ, ವೇಗ ತಡೆಗೆ ಹಂಪ್ ಅಳವಡಿಸಿದರೆ ಅನುಕೂಲವಾಗಲಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಟ್ರಾಫಿಕ್ ಐಲ್ಯಾಂಡ್‌ಗೆ ಹಾನಿ
ಸ್ಥಳದಲ್ಲಿ ನಿರ್ಮಿಸಲಾಗಿರುವ ಟ್ರಾಫಿಕ್ ಐ ಲ್ಯಾಂಡ್ ಈಗಾಗಲೇ ಹಾನಿಯಾಗಿದೆ. ಯಾವುದೋ ವಾಹನ ಢಿಕ್ಕಿಯಾಗಿರುವ ಸಾಧ್ಯತೆಯಿದ್ದು, ಕಲ್ಲುಗಳು ಎದ್ದು ಹೋಗಿವೆ. ಇತ್ತೀಚೆಗಷ್ಟೇ ಇದಕ್ಕೆ ಕಪ್ಪು- ಹಳದಿ ಬಣ್ಣ ಬಳಿಯಲಾಗಿತ್ತು. ಇಲ್ಲಿ ವಾಹನ ಸಂಚಾರ ಹೆಚ್ಚು ಅಪಾಯಕರವಾಗಿದೆ ಎನ್ನುವುದಕ್ಕೆ ಇದು ಕೂಡ ಉದಾಹರಣೆಯಾಗಿದೆ.