ಗುವಾಹಟಿ: ಜೈಲಿನ ಸಿಬ್ಬಂದಿಗೆ ಹಲ್ಲೆ ಮಾಡಿ, ಅವರ ಮೇಲೆ ಮೆಣಸಿನ ಪುಡಿ ಎರಚಿ ಏಳು ಮಂದಿ ಖದೀಮರು ಜೈಲಿನಿಂದ ಪರಾರಿಯಾದ ಘಟನೆ ಅರುಣಾಚಲ ಪ್ರದೇಶದಲ್ಲಿ ನಡೆದಿದೆ.
ಅರುಣಾಚಲ ಪ್ರದೇಶದ ಪೂರ್ವ ಸಿಯಾಂಗ್ ಜಿಲ್ಲೆಯ ಜೈಲಿನಲ್ಲಿ ರವಿವಾರ ಈ ಘಟನೆ ನಡೆದಿದೆ.
ಜೈಲಿನಿಂದ ಪರಾರಿಯಾದ ಖೈದಿಗಳನ್ನು ಅಭಿಜಿತ್ ಗೊಗೋಯ್, ತಾರೊ ಹಮಾಮ್, ಕಲೋಮ್ ಅಪಾಂಗ್, ತಲುಮ್ ಪನ್ಯಾಂಗ್, ಸುಭಾಶ್ ಮೊಂಡಲ್, ರಾಜ ತಯೆಂಗ್ ಮತ್ತು ದನಿ ಗಮ್ಲಿನಾ ಎಂದು ಗುರುತಿಸಲಾಗಿದೆ. ಈ ಖದೀಮರು ಜೈಲಿನಿಂದ ಪರಾರಿಯಾಗಲು ಮೊದಲು ಯೋಜನೆ ಸಿದ್ದಪಡಿಸಿದ್ದು, ಅದಕ್ಕಾಗಿ ಮೆಣಸಿನ ಹುಡಿ ಮತ್ತು ಉಪ್ಪನ್ನು ಸಂಗ್ರಹಿಸಿಟ್ಟಿದ್ದರು ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಇರಾಕ್ ನ ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ಅವಗಢ: 44 ಮಂದಿ ಸಾವು, 67 ಜನರಿಗೆ ಗಾಯ
ರವಿವಾರ ಸಂಜೆ 6.30 ರ ಸುಮಾರಿಗೆ ಈ ಘಟನೆ ನಡೆದಿದೆ. ಊಟಕ್ಕಾಗಿ ಸೆಲ್ ತೆರೆದಾಗ ಈ ಏಳು ಮಂದಿ ಭದ್ರತಾ ಸಿಬ್ಬಂದಿಗೆ ಹಲ್ಲೆ ನಡೆಸಿ ಜೈಲಿನಿಂದ ಹೊರ ಹೋಗಿದ್ದಾರೆ.
ಐದು ಮಂದಿ ಜೈಲು ಸಿಬ್ಬಂದಿಗೆ ಗಾಯಗಳಾಗಿದೆ. ಅದರಲ್ಲೂ ಓರ್ವನ ತಲೆಗೆ ಗಂಭೀರವಾಗಿ ಏಟಾಗಿದ್ದು, ಆತನ ಮೊಬೈಲ್ ಫೋನನ್ನು ಕೂಡಾ ಖೈದಿಗಳನ್ನು ಕೊಂಡೊಯ್ದಿದ್ದಾರೆ. ಸದ್ಯ ಪರಾರಿಯಾಗಿರುವ ಖೈದಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.