Advertisement

Mangaluru: ಬಾಲಕಿಯ ವೀಡಿಯೋ ಮಾಡಿದ್ದ ಯುವಕನಿಗೆ ಜೈಲು

12:46 AM Jan 07, 2025 | Team Udayavani |

ಮಂಗಳೂರು: ಬಾತ್‌ರೂಮ್‌ನಲ್ಲಿ ಸ್ನಾನ ಮಾಡುತ್ತಿದ್ದ ಬಾಲಕಿಯ ವೀಡಿಯೋ ಚಿತ್ರೀಕರಣ ಮಾಡಿದ ಯುವಕನಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೋಕ್ಸೋ) ಎಫ್ಟಿಎಸ್‌ಸಿ-1 ನ್ಯಾಯಾಲಯದ ನ್ಯಾಯಾಧೀಶ ವಿನಯ್‌ ದೇವರಾಜ್‌ ಅವರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

Advertisement

ಬಜಪೆ ಠಾಣಾ ವ್ಯಾಪ್ತಿಯಲ್ಲಿ 2024ರ ಮಾ. 10ರಂದು ಘಟನೆ ನಡೆದಿತ್ತು. ಆರೋಪಿ ಗಗನ್‌ (24) ಮನೆಯೊಂದರ ಕಾಂಪೌಂಡ್‌ ಗೋಡೆಯೇರಿ ಎಕ್ಸಾಸ್ಟ್‌ ಫ್ಯಾನ್‌ ಹಾಕಲೆಂದು ಬಿಟ್ಟಿದ್ದ ಕಿಟಕಿಯಲ್ಲಿ ಮೊಬೈಲ್‌ನಲ್ಲಿ ವೀಡಿಯೋ ಚಿತ್ರೀಕರಣ ಮಾಡಿದ್ದ. ಪ್ರಕರಣ ನಡೆದು 9 ತಿಂಗಳಲ್ಲಿ ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿದೆ. ಆರೋಪಿಗೆ 1 ವರ್ಷ ಜೈಲು, 20 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡದಲ್ಲಿ 10 ಸಾವಿರ ರೂ.ಗಳನ್ನು ಅಲ್ಲದೆ ಪ್ರತ್ಯೇಕವಾಗಿ 1 ಲ.ರೂ.ಗಳನ್ನು ನೊಂದ ಬಾಲಕಿಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಧೀಶರು ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದಾರೆ.

ಪ್ರಾಸಿಕ್ಯೂಷನ್‌ ಪರ ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ವಾದಿಸಿದ್ದರು. ಆರೋಪಿ ಚಿತ್ರೀಕರಿಸಿದ್ದ ದೃಶ್ಯಗಳನ್ನು ಡಿಲೀಟ್‌ ಮಾಡಿದ್ದರೂ, ಸಾಕ್ಷಿಗಳ ಹೇಳಿಕೆಯ ಆಧಾರದಲ್ಲಿ ಶಿಕ್ಷೆ ವಿಧಿಸಲಾಗಿದೆ.

ಕಳವಳ ವ್ಯಕ್ತಪಡಿಸಿದ ನ್ಯಾಯಾಧೀಶರು
ಬಾತ್‌ರೂಮ್‌ನ ವೀಡಿಯೋ ಚಿತ್ರೀಕರಿಸಿರುವ ಕುರಿತಂತೆ 14 ಪ್ರಕರಣಗಳು ನ್ಯಾಯಾಲಯಕ್ಕೆ ವಿಚಾರಣೆಗೆ ಬಂದಿದ್ದು ಈ ಬೆಳವಣಿಗೆಗಳು ತುಂಬಾ ಕಳವಳಕಾರಿಯಾಗಿದೆ. ಇಂತಹ ಪ್ರಕರಣಗಳಲ್ಲಿ 5 ವರ್ಷಗಳಿಂದ 7 ವರ್ಷಗಳವರೆಗೆ ಶಿಕ್ಷೆ ವಿಧಿಸಲು ಅವಕಾಶವಿದೆ. ಈ ಬಗ್ಗೆ ನಾನಾ ಕ್ಷೇತ್ರಗಳ 6 ಮಂದಿಯ ಸಮಿತಿ ರಚಿಸಿ ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಉಲ್ಲೇಖೀಸಿದ್ದಾರೆ. ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ಜುಲೈಯಲ್ಲಿ ಬಾತ್‌ರೂಂನಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯ ವೀಡಿಯೋ ಮಾಡಿದ್ದ ಪ್ರಕರಣದಲ್ಲಿ ಆರೋಪಿ ರಂಶೀದ್‌ಗೆ ಇತ್ತೀಚೆಗೆ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next