ಬೆಂಗಳೂರು: ಗಾಯಗೊಂಡಿದ್ದ ಐದೂವರೆ ವರ್ಷದ ಯುಕೆಜಿ ಬಾಲಕನ ಬೆರಳುಗಳಿಗೆ ಪ್ಲಾಸ್ಟಿಕ್ ಸರ್ಜರಿ ಶಸ್ತ್ರಚಿಕಿತ್ಸೆ ಮಾಡುವ ಮುನ್ನ ನಿರ್ಲಕ್ಷ್ಯದಿಂದ ಅರಿವಳಿಕೆ ಔಷಧಿ ನೀಡಿ ಆತ ಕೋಮಾ ಸ್ಥಿತಿಗೆ ತಲುಪಲು ಕಾರಣಾನಾಗಿದ್ದ ಅರಿವಳಿಕೆ ತಜ್ಞ ವೈದ್ಯನಿಗೆ ನ್ಯಾಯಾಲಯ 6 ತಿಂಗಳು ಜೈಲು ಶಿಕ್ಷೆ ವಿಧಿಸಿದೆ.
ನಗರದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞನಾಗಿದ್ದ ಖ್ಯಾತ ವೈದ್ಯ ಚಂದ್ರಶೇಖರ್ ಅಪರಾಧಿ. ಲಕ್ಷಯ್ (5.6) ಕೋಮಾ ಸ್ಥಿತಿಗೆ ತಲುಪಿದ ಬಾಲಕ. ಯುಕೆಜಿ ವ್ಯಾಸಂಗ ಮಾಡುತ್ತಿದ್ದ ಲಕ್ಷಯ್‌ಗೆ 2016ರ ಜೂ.10ರಂದು ಶಾಲೆಯಲ್ಲಿ ಆಟವಾಡುತ್ತಿದ್ದಾಗ ಎಡಗೈ ಮಧ್ಯದ ಬೆರಳು ಹಾಗೂ ಉಂಗುರ ಬೆರಳು ಜಜ್ಜಿ ಹೋಗಿದ್ದವು. ಕೂಡಲೇ ಶಾಲಾ ಸಿಬ್ಬಂದಿ ಸ್ಥಳೀಯ ಪ್ರತಿಷ್ಠಿತ ಆಸ್ಪತ್ರೆಗೆ ಆತನನ್ನು ದಾಖಲಿಸಿದ್ದರು.
ವೈದ್ಯರು ಬಾಲಕನನ್ನು ಪರೀಕ್ಷಿಸಿ ಪ್ಲಾಸ್ಟಿಕ್ ಸರ್ಜರಿ ಶಸ್ತ್ರ ಚಿಕಿತ್ಸೆ ನಡೆಸಲು ಮುಂದಾಗಿದ್ದರು. ಶಸ್ತ್ರ ಚಿಕಿತ್ಸೆಗೂ ಮುನ್ನ ಅರಿವಳಿಕೆ ತಜ್ಞ ಚಂದ್ರಶೇಖರ್ ಬಾಲಕನಿಗೆ ಅರಿವಳಿಕೆ ಔಷಧ ನೀಡಿದ್ದರು. ಅಧಿಕ ಡೋಸ್ ಅರಿವಳಿಕೆ ಕೊಟ್ಟ ಹಿನ್ನೆಲೆಯಲ್ಲಿ ಬಾಲಕನ ಶ್ವಾಸಕೋಶ ಪಂಚರಾಗಿದ್ದು, ಆತನಿಗೆ ಉಸಿರಾಟದ ಸಮಸ್ಯೆ ಎದುರಾಗಿ ಕೋಮಾ ಸ್ಥಿತಿಗೆ ತಲುಪಿದ್ದ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿನ ವೈದ್ಯರು ಕೂಲಂಕಷ ವಾಗಿ ಪರಿಶೀಲಿಸಿದಾಗ “ಬಾಲಕನಿಗೆ ಅರಿವಳಿಕೆ ನೀಡುವ ವಿಚಾರದಲ್ಲಿ ನಿರ್ಲಕ್ಷ್ಯತೆ ವಹಿಸಿರುವುದೇ ಇದಕ್ಕೆ ಕಾರಣ’ ಎಂಬ ಸಂಗತಿ ಬೆಳಕಿಗೆ ಬಂದಿತ್ತು.
ಈ ವಿಚಾರ ತಿಳಿದು ಪಾಲಕರು ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. 2017ರಲ್ಲಿ ಪೊಲೀಸರು 8ನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಕಳೆದ 5 ವರ್ಷಗಳಿಂದ ಪ್ರಕರಣದ ತನಿಖೆ ನಡೆಸಿದ ನ್ಯಾಯಾಲಯವು ಅರಿವಳಿಕೆ ತಜ್ಞ ಚಂದ್ರಶೇಖರ್‌ನನ್ನು ಅಪರಾಧಿ ಎಂದು ಪರಿಗಣಿಸಿ 6 ತಿಂಗಳು ಜೈಲು ಶಿಕ್ಷೆ ಹಾಗೂ ಸಾವಿರ ರೂ. ದಂಡ ವಿಧಿಸಿದೆ.