Advertisement

ಜೈ ಕಿಸಾನ್‌ ತರಕಾರಿ ಮಾರುಕಟ್ಟೆ ವಿರುದ್ಧದ ಪಿಐಎಲ್‌ ತಿರಸ್ಕಾರ

05:52 PM Feb 07, 2024 | Team Udayavani |

ಉದಯವಾಣಿ ಸಮಾಚಾರ
ಬೆಳಗಾವಿ: ಇಲ್ಲಿಯ ಗಾಂಧಿನಗರ ಬಳಿ ನಿರ್ಮಾಣಗೊಂಡಿರುವ ಜೈ ಕಿಸಾನ್‌ ಸಗಟು ತರಕಾರಿ ಮಾರುಕಟ್ಟೆ ವಿರುದ್ಧ ಸಲ್ಲಿಸಿದ್ದ
ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೆ„ಕೋರ್ಟ್‌ ತಿರಸ್ಕರಿಸಿದ್ದು, ಜೈ ಕಿಸಾನ್‌ ಮಾರುಕಟ್ಟೆಯ ವ್ಯಾಪಾರಸ್ಥರು
ಸಂತಸಗೊಂಡಿದ್ದಾರೆ.

Advertisement

ಧಾರವಾಡ ಹೆ„ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌ ಅವರು ಜ.
10ರಂದು ಅರ್ಜಿ ತಿರಸ್ಕರಿಸಿದರು. ಭಾರತೀಯ ಕೃಷಿ ಸಮಾಜ(ಸಂಯುಕ್ತ) ಅಧ್ಯಕ್ಷ ಸಿದಗೌಡ ಮೋದಗಿ ಹಾಗೂ ಇತರ ಐವರು ಕರ್ನಾಟಕ ಹೆ„ಕೋರ್ಟಿನಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ, ನಗರಾಭಿವೃದ್ಧಿ ಇಲಾಖೆ, ಜಿಲ್ಲಾಧಿಕಾರಿ, ಬೆಳಗಾವಿ ಮಹಾನಗರ ಪಾಲಿಕೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಕೃಷಿ ಇಲಾಖೆ ಜೈ ಕಿಸಾನ್‌ ಸಗಟು ಮಾರುಕಟ್ಟೆಗೆ ಅಕ್ರಮವಾಗಿ ಅನುಮತಿ ನೀಡಲಾಗಿದೆ ಎಂದು ಆರೋಪಿಸಿ 2021ರಲ್ಲಿ ಸಾರ್ವಜನಿಕ ಹಿತಾಸಕ್ತಿಅರ್ಜಿ ಸಲ್ಲಿಸಿದ್ದರು.

2017ರಲ್ಲಿ ಮೊಹಮ್ಮದ್‌ ರಫೀಕ್‌ ಖಾನಾಪುರಿ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಹೈಕೋರ್ಟ್‌ ನೀಡಿದ ಹಿಂದಿನ ಆದೇಶಗಳನ್ನು ಉಲ್ಲೇಖೀಸಿರುವ ಹೆ„ಕೋರ್ಟ್‌, ಜೈ ಕಿಸಾನ್‌ ಸಗಟು ತರಕಾರಿ ಮಾರುಕಟ್ಟೆಗೆ ನೀಡಿದ ಕಟ್ಟಡದ ಅನುಮತಿಯನ್ನು ಪ್ರಶ್ನಿಸಲು ನ್ಯಾಯಾಲಯ ಯಾರಿಗೂ ಸ್ವಾತಂತ್ರ್ಯವನ್ನು ಕಾಯ್ದಿರಿಸಿಲ್ಲ ಎಂದು ಹೇಳಿದೆ.

2020ರಲ್ಲಿ ಇತರ 15 ವ್ಯಕ್ತಿಗಳು ಸಲ್ಲಿಸಿದ ಇತರ ಎರಡು ಸಾರ್ವಜನಿಕ ಹಿತಾಸಕ್ತಿಗಳನ್ನು ನ್ಯಾಯಾಲಯ ಗಮನಕ್ಕೆ ತೆಗೆದುಕೊಂಡಿತು. ಅದನ್ನು 2021 ಮಾರ್ಚ್‌ 1ರ ಆದೇಶದಲ್ಲಿ ವಜಾಗೊಳಿಸಲಾಯಿತು. ಅದರಲ್ಲಿ ಅರ್ಜಿದಾರರು ರೈತರ ಪರವಾದ ದಾವೆದಾರರಲ್ಲ. ಆದರೆ ಪ್ರಸ್ತುತ ಅರ್ಜಿದಾರರು ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ. ಜೈ ಕಿಸಾನ್‌ ತರಕಾರಿ ಮಾರುಕಟ್ಟೆ ವಿರುದ್ಧ ಕೇಸ್‌ ನಂತರ ಕೇಸ್‌ ದಾಖಲಿಸಲಾಗಿದೆ. ಪಿಐಎಲ್‌ ಗಳನ್ನು ಸಲ್ಲಿಸಿದವರಲ್ಲಿ ಅನೇಕರು ವ್ಯಾಪಾರಿಗಳೂ ಆಗಿದ್ದಾರೆ.

ಈ ಅರ್ಜಿಯನ್ನು ವಿಳಂಬವಾಗಿ ಸಲ್ಲಿಸಲಾಗಿದೆ ಎಂದು ಹೆ„ಕೋರ್ಟ್‌ ಗಮನಿಸಿದೆ. ಕೃಷಿಕರು ಎಂದು ಹೇಳಿಕೊಳ್ಳುವ ಅರ್ಜಿದಾರರು ತಮ್ಮ ಜಮೀನುಗಳನ್ನು ಘೋಷಿಸಿಲ್ಲ. ಜೈ ಕಿಸಾನ್‌ ವಿರುದ್ಧ ನಕಲಿ ಮತ್ತು ವಂಚನೆ ಆರೋಪವಿದ್ದರೂ ಯಾವುದೇ ದಾಖಲೆ, ವಿವರಗಳು ಲಭ್ಯವಿಲ್ಲ.

Advertisement

ಹಿಂದಿನ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಲ್ಲಿ ಅಂತಹ ಯಾವುದೇ ಆರೋಪಗಳನ್ನು ಮಾಡಲಾಗಿಲ್ಲ ಎಂಬುದನ್ನು ಗಮನಿಸಿದ
ನ್ಯಾಯಾಲಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸಿದೆ ಎಂದು ಜೈ ಕಿಸಾನ್‌ ಸಗಟು ತರಕಾರಿ ಮಾರುಕಟ್ಟೆ ಕಾರ್ಯದರ್ಶಿ ಎ.ಕೆ. ಬಾಗವಾನ್‌ ತಿಳಿಸಿದ್ದಾರೆ. ತರಕಾರಿ ಮಾರತುಕಟ್ಟೆ ಆರಂಭಿಸಿದಾಗಿನಿಂದ ಬಹಳ ತೊಂದರೆ ಆಗುತ್ತಿವೆ.

ಅನೇಕರು ಸೇರಿ ನಮಗೆ ತೊಂದರೆ ನೀಡುತ್ತಿದ್ದರು. ನಮ್ಮ ವಿರುದ್ಧ ದೂರು ದಾಖಲಿಸಿ ಹೆದರಿಸುವ ಪ್ರಯತ್ನ ಮಾಡಿದರು. ಬೆಳಗಾವಿ ನ್ಯಾಯಾಲಯ, ಧಾರವಾಡ ಹೆ„ಕೋರ್ಟಿನಲ್ಲಿಯೂ ಅರ್ಜಿ ತಿರಸ್ಕಾರಗೊಂಡಿದೆ. ರಫೀಕ ಖಾನಾಪುರಿ ಎಂಬವರು ಹಾಕಿರುವ ಅರ್ಜಿಯೂ ತಿರಸ್ಕಾರಗೊಂಡಿದೆ. 2021ರಲ್ಲಿ ಸಿದಗೌಡ ಮೋದಗಿ ಹಾಕಿದ್ದ ಅರ್ಜಿ ಈಗ ತಿರಸ್ಕಾರಗೊಂಡಿದ್ದರಿಂದ ಸತ್ಯಕ್ಕೆ ಜಯ ಸಿಕ್ಕಂತಾಗಿದೆ ಎಂದು ಸಂತಸ ಹಂಚಿಕೊಂಡರು.

ನಮ್ಮ ಮಾರುಕಟ್ಟೆ ಅನಧಿಕೃತ ಎಂದು ಸುಳ್ಳು ಆರೋಪ ಮಾಡಲಾಗುತ್ತಿತ್ತು. ಸುಳ್ಳು ದೂರು ದಾಖಲಿಸಲಾಗಿತ್ತು. ಇದರಿಂದ ಮಾನಸಿಕವಾಗಿ ಬಹಳ ತೊಂದರೆ ಆಗಿತ್ತು. ನಮ್ಮ ವಿರುದ್ಧದ ಎಲ್ಲ ಅರ್ಜಿಗಳು ತಿರಸ್ಕಾರಗೊಂಡಿವೆ. ಈಗ ನ್ಯಾಯಾಲಯದಲ್ಲಿ ಜಯ ಸಿಕ್ಕಿದೆ. ಈ ಎಲ್ಲ ಸಮಸ್ಯೆಯಿಂದ ಪಾರಾಗಿದ್ದು, ಸತ್ಯಕ್ಕೆ ಜಯ ಸಿಕ್ಕಿದೆ.
*ಎ.ಕೆ. ಬಾಗವಾನ್‌, ಕಾರ್ಯದರ್ಶಿ,
ಜೈ ಕಿಸಾನ್‌ ಸಗಟು ತರಕಾರಿ ಮಾರುಕಟ್ಟೆ ಸಂಘ

Advertisement

Udayavani is now on Telegram. Click here to join our channel and stay updated with the latest news.

Next